Advertisement
ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಯಡಿಯೂರಪ್ಪ ಕಾರಣರಾಗಿದ್ದರೂ, ಅವರು ಪಕ್ಷದ ನಾಯಕತ್ವದ ವಿರುದ್ಧ ಮುನಿಸಿಕೊಂಡು 2012ರಲ್ಲಿ ಕೆಜೆಪಿ ಕಟ್ಟಿದ್ದರು. ಆಗ ಬಿಜೆಪಿಯಿಂದ ಅನೇಕ ನಾಯಕರು ಹಾಗೂ ಕಾರ್ಯಕರ್ತರೂ ಅವರ ಜತೆಗೆ ಹೋಗಿದ್ದರು.
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಬಿಜೆಪಿಯಲ್ಲಿ ಸ್ಥಾನಮಾನ, ವಿಧಾನಸಭೆ ಉಪಚುನಾವಣೆ, ವಿಧಾನ ಪರಿಷತ್ ಚುನಾವಣೆಗಳಿಗೆ ಟಿಕೆಟ್ ಹಂಚಿಕೆ ಹಾಗೂ ಸರಕಾರದ ಹುದ್ದೆಗಳ ವಿಚಾರದಲ್ಲಿ ಅವರ ಹಿಂಬಾಲಕರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂಬ ಬೇಸರ ಮೂಡಿತ್ತು. ಸ್ವತಃ ಯಡಿಯೂರಪ್ಪ ಮುಂದೆ ಆಪ್ತರು ಅಳಲು ತೋಡಿಕೊಂಡಿದ್ದರು ಎನ್ನಲಾಗಿತ್ತು.
Related Articles
Advertisement
ಅವಕಾಶ ವಂಚನೆ ಆತಂಕಯಡಿಯೂರಪ್ಪ ಬಿಜೆಪಿಗೆ ಮರಳಿದ ಮೇಲೆ ಪ್ರಮುಖ ಹುದ್ದೆಗಳಲ್ಲಿ ಅವರ ಆಪ್ತರೇ ಮೇಲುಗೈ ಸಾಧಿಸಿದ್ದರು. ಪಕ್ಷ ನಿಷ್ಠೆಯಿಂದ ಬಿಜೆಪಿಯಲ್ಲಿಯೇ ಉಳಿದುಕೊಂಡಿದ್ದ ಕಾರ್ಯಕರ್ತರಿಗೆ ನಿಗಮ ಮಂಡಳಿ ಸಹಿತ ಸರಕಾರದ ಹುದ್ದೆಗಳಲ್ಲಿ ಹೇಳಿಕೊಳ್ಳುವಷ್ಟು ಅವಕಾಶಗಳು ದೊರೆತಿರಲಿಲ್ಲ ಎನ್ನಲಾಗುತ್ತಿದೆ. ಈಗ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಸಂದರ್ಭದಲ್ಲೂ ತಮಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ಅವರಲ್ಲಿ ಮೂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಮಾತಿಗೆ ಬೆಲೆ ಕೊಟ್ಟು ಟಿಕೆಟ್ ನೀಡಿದ್ದ ಕನಿಷ್ಠ 20ಕ್ಕೂ ಹೆಚ್ಚು ಸ್ಥಾನಗಳನ್ನು ಪಕ್ಷ ಕಳೆದುಕೊಂಡಿದೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಈಗ ಚರ್ಚೆಗೆ ಗ್ರಾಸವಾಗಿವೆ. ರಾಜ್ಯಾಧ್ಯಕ್ಷ ಸ್ಥಾನದಲ್ಲೂ
ಲೆಕ್ಕಾಚಾರ ಬದಲು?
ನಳಿನ್‌ಕುಮಾರ್ ಕಟೀಲು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ್ದು, ಅವರ ಬದಲಾವಣೆ ಕುರಿತಂತೆ ಪಕ್ಷದ ವಲಯದಲ್ಲಿ ತೆರೆಮರೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಅವರ ಬದಲಿಗೆ ಯಾರನ್ನು ತರಬೇಕು ಎನ್ನುವ ಕುರಿತೂ ಪಕ್ಷದಲ್ಲಿ ಗಂಭೀರ ಚಿಂತನೆಗಳು ನಡೆದಿದ್ದು, ಜಾತಿ ಹಾಗೂ ಪ್ರಾದೇಶಿಕತೆಯ ಲೆಕ್ಕಾಚಾರದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಇಂಧನ ಸಚಿವ ವಿ.ಸುನಿಲ್‌ಕುಮಾರ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿತ್ತು. ಒಕ್ಕಲಿಗರಿಗೆ ಅವಕಾಶ ನೀಡುವ ಲೆಕ್ಕಾಚಾರದಲ್ಲಿ ಸಿ.ಟಿ. ರವಿ ಹೆಸರು ಮುಂಚೂಣಿಯಲ್ಲಿತ್ತು ಎಂದೂ ಹೇಳಲಾಗಿತ್ತು. ಆದರೆ ವರಿಷ್ಠರು ಯಡಿಯೂರಪ್ಪ ಅವರಿಗೆ ಉನ್ನತ ಸ್ಥಾನ ನೀಡಿದ್ದರಿಂದ, ರಾಜ್ಯಾಧ್ಯಕ್ಷರ ಆಯ್ಕೆಯ ಲೆಕ್ಕಾಚಾರವೂ ಬದಲಾಗಲಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. – ಶಂಕರ ಪಾಗೋಜಿ