Advertisement

ಬಿಜೆಪಿಯಲ್ಲಿ ಬಿಎಸ್‌ವೈ ಪ್ರವಾಸ ಚಿಂತೆ: ಪ್ರವಾಸದ ರೂಪುರೇಷೆ ಹಾಕುವುದೇ ಗೊಂದಲ

12:31 AM Aug 27, 2022 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜ್ಯ ಪ್ರವಾಸದ ಯೋಜನೆ ರೂಪಿಸುವುದು ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿರುವ ಯಡಿಯೂರಪ್ಪ ಅವರಿಗೆ ಸಿಎಂ ಹಾಗೂ ರಾಜ್ಯಾಧ್ಯಕ್ಷರ ಹೊರತಾಗಿ ಯಾವ ರೀತಿಯ ಪ್ರವಾಸದ ಕಾರ್ಯಕ್ರಮ ರೂಪಿಸ ಬೇಕು ಎನ್ನುವ ಗೊಂದಲ ಶುರು ವಾಗಿದೆ.

Advertisement

ಬಿಜೆಪಿ ಹೈಕಮಾಂಡ್‌ ಮಾಜಿ ಸಿಎಂ ಯಡಿಯೂರಪ್ಪ ಅವರ ವಿಚಾರದಲ್ಲಿ ಏಕಾಏಕಿ ತನ್ನ ನಿರ್ಧಾರ ಬದಲಾಯಿಸಿ, ಅವರಿಗೆ ಕೇಂದ್ರ ಸಂಸದೀಯ ಮಂಡಳಿ ಹಾಗೂ ರಾಜಕೀಯ ವ್ಯವಹಾರಗಳ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದ್ದು, ರಾಜ್ಯ ಬಿಜೆಪಿ ನಾಯಕರ ಚುನಾವಣ ಕಾರ್ಯತಂತ್ರ ಹಾಗೂ ರಾಜ್ಯ ಪ್ರವಾಸದ ಲೆಕ್ಕಾಚಾರಗಳೆಲ್ಲ ಬದಲಾಗುವಂತೆ ಮಾಡಿದೆ.

ರಾಜ್ಯ ಬಿಜೆಪಿ ವಿಧಾನಸಭೆ ಚುನಾವಣೆಯನ್ನು ಲೆಕ್ಕಾಚಾರದಲ್ಲಿ ಇಟ್ಟುಕೊಂಡು ಪ್ರವಾಸ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ಎರಡು ತಂಡಗಳಲ್ಲಿ ಪ್ರವಾಸ ಕೈಗೊಳ್ಳಲು ಯೋಜನೆ ರೂಪಿಸಲಾಗಿತ್ತು. ಯಡಿಯೂರಪ್ಪ ಅವರನ್ನು ಒಂದು ತಂಡದ ಒಬ್ಬ ಸದಸ್ಯರನ್ನಾಗಿ ಸೇರಿಸಿಕೊಳ್ಳುವ ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು.

ಆದರೆ ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಉನ್ನತ ಮಟ್ಟದ ಸ್ಥಾನ ನೀಡಿರುವುದರಿಂದ ಅವರನ್ನು ಒಂದು ತಂಡದ ಸದಸ್ಯರನ್ನಾಗಿ ಕರೆದುಕೊಂಡು ಹೋಗುವುದು ಸರಿಯಲ್ಲ ಎಂಬ ಲೆಕ್ಕಾಚಾರದಲ್ಲಿ ಅವರ ನೇತೃತ್ವದಲ್ಲೂ ಒಂದು ತಂಡ ಪ್ರವಾಸ ಕೈಗೊಳ್ಳುವುದಾಗಿ ಪಕ್ಷದ ನಾಯಕರು ಘೋಷಣೆ ಮಾಡಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಸಭೆ
ಆದರೆ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರ ನೇತೃತ್ವದ ಪ್ರವಾಸದಲ್ಲಿ ಪಕ್ಷ ಸೋತಿರುವ 50 ಕ್ಷೇತ್ರಗಳಲ್ಲಿ ಸಭೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರಮುಖವಾಗಿ ಸರಕಾರದ ಯೋಜನೆಗಳು ಮತ್ತು ಸಾಧನೆಗಳ ಕುರಿತುಜನರಿಗೆ ತಲುಪಿಸುವ ಕೆಲಸ ಮಾಡ ಲಿದ್ದಾರೆಂದು ತಿಳಿದು ಬಂದಿದೆ.

Advertisement

ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ನೇತೃತ್ವದ ತಂಡ ಪ್ರವಾಸದಲ್ಲಿ 50 ಕ್ಷೇತ್ರಗಳಲ್ಲಿ ಸಂಘಟ ನಾತ್ಮಕವಾಗಿ ಜಿಲ್ಲಾ, ಮಂಡಲ ಹಾಗೂ ಬೂತ್‌ ಮಟ್ಟದ ಕಾರ್ಯ ಕರ್ತರವರೆಗೂ ಪ್ರತ್ಯೇಕ ಸಭೆಗಳನ್ನು ನಡೆಸಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದ್ದು, ಈ ತಂಡ ಸರಣಿ ಸಭೆಗಳನ್ನು ನಡೆಸಲಿದೆ ಎಂದು ತಿಳಿದು ಬಂದಿದೆ.

ಆದರೆ, ಯಡಿಯೂರಪ್ಪ ನೇತೃತ್ವದಲ್ಲಿ ಯಾವ ರೀತಿಯ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕು ಎನ್ನುವ ಕುರಿತಂತೆ ಇತ್ತೀಚೆಗೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು, ಯಡಿಯೂರಪ್ಪ ಅವರು ಉನ್ನತ ಸ್ಥಾನದಲ್ಲಿರುವುದರಿಂದ ಅವರನ್ನು ಬೂತ್‌ ಮಟ್ಟದ ಸಭೆಗಳಿಗೆ ಕರೆಯುವುದು ಎಷ್ಟು ಸೂಕ್ತ ಎನ್ನುವ ಜಿಜ್ಞಾಸೆ ನಾಯಕರಲ್ಲಿ ಮೂಡಿದೆ ಎನ್ನಲಾಗುತ್ತಿದೆ.

ಮೋರ್ಚಾಗಳ ಸಮಾವೇಶ
ಪಕ್ಷದ ವತಿಯಿಂದ ಪ್ರಮುಖ ಮೋರ್ಚಾಗಳಾದ ಎಸ್ಸಿ ಮೋರ್ಚಾ, ಒಬಿಸಿ ಮೋರ್ಚಾ, ಯುವ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾಗಳಿಂದ ರಾಜ್ಯದ ಏಳು ಕಡೆಗಳಲ್ಲಿ ಬೃಹತ್‌ ಸಮಾವೇಶಗಳನ್ನು ಹಮ್ಮಿಕೊಳ್ಳಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ. ಅಂತಹ ಸಮಾವೇಶಗಳಿಗೆ ಆಹ್ವಾನ ನೀಡುವ ಮೂಲಕ ಯಡಿಯೂರಪ್ಪ ಅವರ ಪ್ರವಾಸದ ರೂಪುರೇಷೆ ಸಿದ್ಧಪಡಿಸಬೇಕಾ, ಯಡಿಯೂರಪ್ಪ ನೇತೃತ್ವದ ಪ್ರತ್ಯೇಕ ತಂಡದಲ್ಲಿ ಪ್ರವಾಸ ನಡೆಸಲಾಗುತ್ತದಾ ಅಥವಾ ಎರಡು ತಂಡಗಳಲ್ಲಿ ಒಬ್ಬರು ಸದಸ್ಯರನ್ನಾಗಿ ಸೇರಿಸಿಕೊಂಡು ಹೋಗಲಾಗುತ್ತದಾ ಎನ್ನುವ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.

– ಶಂಕರ ಪಾಗೋಜಿ

 

Advertisement

Udayavani is now on Telegram. Click here to join our channel and stay updated with the latest news.

Next