ಕಲಬುರಗಿ:ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ನಡುವಿನ ಮುನಿಸು ಶಮನವಾಗೋದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅದಕ್ಕೆ ಕಾರಣ ಕಲಬುರಗಿಯಲ್ಲಿ ಶನಿವಾರದಿಂದ ಆರಂಭಗೊಂಡ ಎರಡು ದಿನದ ಬಿಜೆಪಿ ಕಾರ್ಯಕಾರಿಣಿ ಸಮಾರಂಭದ ಸನ್ನಿವೇಶ!
ಬಿಸಿಲನಾಡು ಕಲಬುರಗಿಯಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಅಧಿಕೃತ ಚಾಲನೆ ದೊರಕಿದೆ. ಕಾರ್ಯಕಾರಿಣಿ ಉದ್ಘಾಟಿಸುವ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಾನೊಂದು ತೀರ, ನೀನೊಂದು ತೀರ ಎಂಬಂತಿದ್ದರು.
ವೇದಿಕೆಯಲ್ಲಿ ಬಿಎಸ್ ವೈ ನಂತರ ಕೇಂದ್ರ ಸಚಿವ ಅನಂತ್ ಕುಮಾರ್, ಮುರಳಿಧರ್ ರಾವ್ ಪಕ್ಕದಲ್ಲಿ ಕೆಎಸ್ ಈಶ್ವರಪ್ಪ ಕುಳಿತಿದ್ದರು. ಇಬ್ಬರೂ ನಾಯಕರು ಮುಖವನ್ನೂ ನೋಡಿಕೊಂಡಿಲ್ಲ, ಮಾತಿಲ್ಲ, ಕತೆಯಿಲ್ಲ..ಮೌನಕ್ಕೆ ಶರಣಾಗಿದ್ದದ್ದು ಕಂಡು ಬಂದಿತ್ತು.
ಇಬ್ಬರು ಹಿರಿಯರ ನಾಯಕರ ನಡುವಿನ ಭಿನ್ನಮತ ಶಮನವೂ ಕೂಡಾ ಇಂದಿನ ಕಾರ್ಯಕಾರಿಣಿಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಹಾಗಾಗಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕಾರಿಣಿಯಲ್ಲಿ ಬಿಎಸ್ ವೈ ಮತ್ತು ಈಶ್ವರಪ್ಪ ನಡುವಿನ ಮುನಿಸು ಇತ್ಯರ್ಥವಾಗುತ್ತಾ ಅಥವಾ ಮುಂದುವರಿಯಲಿದೆಯೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.