Advertisement

ಯಡಿಯೂರಪ್ಪ ಮನೆ ಶೋಧ

03:25 AM Jul 18, 2017 | Karthik A |

ಬೆಂಗಳೂರು: ವಿಧಾನಪರಿಷತ್‌ ವಿಪಕ್ಷದ ನಾಯಕ ಈಶ್ವರಪ್ಪ ಆಪ್ತ ವಿನಯ್‌ ಅಪಹರಣ ಯತ್ನ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಪೊಲೀಸರು ತಡರಾತ್ರಿ ಶೋಧ ನಡೆಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ತಮ್ಮ ಮನೆಯಲ್ಲಿ ಮಹಾಲಕ್ಷ್ಮೀ ಲೇಔಟ್‌ ಪೊಲೀಸರು ಶನಿವಾರ ತಡರಾತ್ರಿ ಶೋಧ ನಡೆಸಿರುವ ಬಗ್ಗೆ ಯಡಿಯೂರಪ್ಪ ಅವರು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಅವರಿಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಕೆ.ಎಸ್‌.ಈಶ್ವರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಅವರು ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರೂ ಈ ಕ್ರಮವನ್ನು ಖಂಡಿಸಿದ್ದಾರೆ.

Advertisement

ಈಶ್ವರಪ್ಪ ಅವರ ಆಪ್ತ ವಿನಯ್‌ ಅಪಹರಣ ಯತ್ನ ಮತ್ತು ಹಲ್ಲೆ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಆಪ್ತ ಸಂತೋಷ್‌ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ನಡೆಸುವ ನೆಪದಲ್ಲಿ ಮಹಾಲಕ್ಷ್ಮಿ ಲೇಔಟ್‌ ಪೊಲೀಸರು ಶನಿವಾರ ರಾತ್ರಿ ಯಡಿಯೂರಪ್ಪ ಅವರ ಮನೆಗೆ ತೆರಳಿ ಶೋಧ ನಡೆಸಿದ್ದರು. ಈ ಕುರಿತಂತೆ ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದ್ದ ಯಡಿಯೂರಪ್ಪ, ತಡರಾತ್ರಿ ತಮ್ಮ ಮನೆಗೆ ಪೊಲೀಸರು ಬರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದರಲ್ಲದೆ, ತನಿಖೆ ನಡೆಸುವುದಾದರೆ ಹಗಲು ಹೊತ್ತಿನಲ್ಲಿ ನಡೆಸಲಿ. ಸಂತೋಷ್‌ ನನ್ನ ಸಂಬಂಧಿ ಎನ್ನುವುದು ಸತ್ಯ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲಿ. ಈ ಬಗ್ಗೆ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರೊಂದಿಗೆ ಚರ್ಚಿಸಿದ್ದೇನೆ. ನಿಮ್ಮನ್ನು ಸಂಪರ್ಕಿಸಲು ಯತ್ನಿಸಲಾಯಿತು. ಆದರೆ, ಸಾಧ್ಯವಾಗಲಿಲ್ಲ. ಅನಗತ್ಯವಾಗಿ ಇತರರಿಗೆ ಕಿರುಕುಳ ನೀಡುವುದು ಬೇಡ. ಪ್ರಾಮಾಣಿಕ ತನಿಖೆ ನಡೆಸಿ ಎಂದು ಹೇಳಿದ್ದರು.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಜಗದೀಶ್‌ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ, ಸಂಸದ ಮತ್ತು ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಯಡಿಯೂರಪ್ಪ ಅವರ ಮನೆಯನ್ನ ಮಧ್ಯರಾತ್ರಿ ತಲಾಶ್‌ ಮಾಡಿದ್ದು ಸರಿಯಲ್ಲ. ಅಗತ್ಯವಿದ್ದರೆ ಹಗಲಲ್ಲೇ ಹೋಗಿ ಶೋಧ ನಡೆಸಬೇಕಿತ್ತು ಅಥವಾ ಯಡಿಯೂರಪ್ಪ ಅವರನ್ನು ನೇರವಾಗಿ ಪ್ರಶ್ನಿಸಬಹುದಿತ್ತು. ಆದರೆ, ರಾಜಕೀಯ ದುರುದ್ದೇಶದಿಂದ ರಾತ್ರಿ ಶೋಧ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನೊಂದೆಡೆ ಈಶ್ವರಪ್ಪ ಕೂಡ ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿದ್ದು, ಪೊಲೀಸರಿಗೆ ತನಿಖೆ ಮಾಡುವ ನಿಜವಾದ ಆಸಕ್ತಿ ಇದ್ದಿದ್ದರೆ ಹಗಲು ವೇಳೆ ಯಡಿಯೂರಪ್ಪ ಅವರ ಮನೆಗೆ ಹೋಗಿ ಶೋಧ ನಡೆಸಬಹುದಿತ್ತು. ಅದನ್ನು ಬಿಟ್ಟು ಮಧ್ಯರಾತ್ರಿ ಹೋಗಿ ಶೋಧ ಮಾಡುವ ಆವಶ್ಯಕತೆ ಏನಿತ್ತು? ಇಲ್ಲೇನು ಪೊಲೀಸ್‌ ರಾಜ್ಯ ಅಧಿಕಾರದಲ್ಲಿದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next