Advertisement

ಕೋಮುವಾದ ನಿಲ್ಲಿಸಿ : ಕಿರಣ್ ಮಜುಂದಾರ್ ಶಾ ಟ್ವೀಟ್ ಗೆ ಸಿಎಂ ಪ್ರತಿಕ್ರಿಯೆ

01:15 PM Mar 31, 2022 | Team Udayavani |

ಬೆಂಗಳೂರು: ‘ಧಾರ್ಮಿಕ ವಿಭಜನೆಯನ್ನು ಪರಿಹರಿಸಿ’ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಮಾಡಿರುವ ಟ್ವೀಟ್ ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗುರುವಾರ ಪ್ರತಿಕ್ರಿಯೆ ನೀಡಿದ್ದು, ‘ಕೂತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲು ಸಾಧ್ಯ ಇದೆ’ ಎಂದಿದ್ದಾರೆ.

Advertisement

”ಕರ್ನಾಟಕವು ಯಾವಾಗಲೂ ಅಂತರ್ಗತ ಆರ್ಥಿಕ ಅಭಿವೃದ್ಧಿಯನ್ನು ರೂಪಿಸುತ್ತಿದೆ. ಕೋಮುವಾದ ಹೊರಹಾಕುವಿಕೆಯನ್ನು ನಾವು ಅನುಮತಿಸಬಾರದು. ಐಟಿ -ಬಿಟಿ ಕೋಮುವಾದವಾದರೆ ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ. ಬಸವರಾಜ್ ಬೊಮ್ಮಾಯಿ ಅವರೇ, ದಯವಿಟ್ಟು ಬೆಳೆಯುತ್ತಿರುವ ಈ ಧಾರ್ಮಿಕ ವಿಭಜನೆಯನ್ನು ಪರಿಹರಿಸಿ” ಎಂದು ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿದ್ದರು.

ಕೆಲ ಹೊತ್ತಿನ ಬಳಿಕ ಟ್ವೀಟ್ ಗೆ ಹಲವು ಪ್ರತಿಕ್ರಿಯೆಗಳು ಬಂದ ನಂತರ ”ನಮ್ಮ ಸಿಎಂ ಅತ್ಯಂತ ಪ್ರಗತಿಪರ ನಾಯಕ. ಅವರು ಶೀಘ್ರದಲ್ಲೇ ಈ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದು ನನಗೆ ಖಾತ್ರಿಯಿದೆ” ಎಂದು ಕಿರಣ್ ಇನ್ನೊಂದು ಟ್ವೀಟ್ ಮಾಡಿದ್ದರು.

ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ರಾಜ್ಯದಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದಿವೆ. ಸಮವಾಗಿ ಸಮಸ್ಯೆ ಇತ್ಯರ್ಥ ಆಗಿದೆ. ಹೈಕೋರ್ಟ್ ತೀರ್ಪಿನ ನಂತರ ಸಮಸ್ಯೆ ಬಗೆಹರಿದಿದೆ. ತಮ್ಮ ತಮ್ಮ ನಂಬಿಕೆಗಳ ಮೇಲೆ ನಾವು ಇಷ್ಟು ವರ್ಷಗಳ ಕಾಲ ಬದುಕು ನಡೆಸುತ್ತಿದ್ದೇವೆ. ಯಾವಾಗಲೂ ಸಾರ್ವಜನಿಕ ವಲಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕಾರ ನೀಡಬೇಕು. ಕರ್ನಾಟಕ ಶಾಂತಿ, ಪ್ರಗತಿಗೆ ಹೆಸರಾಗಿದೆ. ಇದಕ್ಕೆ ತೊಂದರೆ ಆಗದ ರೀತಿಯಲ್ಲಿ ಎಲ್ಲರೂ ಸಂಯಮದಿಂದ ಶಾಂತಿ ಕಾಪಾಡಬೇಕು. ಹಲವು ಸಮಸ್ಯೆಗಳು ಸಾಮಾಜಿಕವಾಗಿ ಉದ್ಭವ ಆದಂತ ಸಂದರ್ಭದಲ್ಲಿ, ಕೂತು ಚರ್ಚೆ ಮಾಡಿ ಬಗೆಹರಿಸಲು ಸಾಧ್ಯ ಇದೆ. ಆದ್ದರಿಂದ ನಾವೆಲ್ಲರೂ ಸಂಯಮದಿಂದ ವರ್ತಿಸಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next