ಹೊಸದಿಲ್ಲಿ: ಮಾಸಾಂತ್ಯಕ್ಕೆ ಹೊಸ ಕಾರು ಕೊಳ್ಳುವವರು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಗೆ ಹಣ ಜೋಡಿಸಿ ಕೊಳ್ಳಬೇಕಾಗಿ ಬರಬಹುದು. ಕಾರಣ ಇಷ್ಟೆ, ಹೊಸ ಕಾರುಗಳ ಬೆಲೆ ಸ್ಪಲ್ಪ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಜತೆಗೆ ಎಪ್ರಿಲ್ 1ರಿಂದ “ಭಾರತ್ ಸ್ಟೇಜ್-4 (ಬಿಎಸ್-4)’ ಜಾರಿಗೆ ಬರಲಿದೆ. ಅಂದರೆ ಬಿಎಸ್-4 ಸಾಮರ್ಥ್ಯದ ಎಂಜಿನ್ ಹೊಂದಿರುವ ಕಾರುಗಳನ್ನು ಮಾತ್ರ ತಯಾರಿಸಬೇಕಾದ ಅನಿವಾರ್ಯ ಕಾರು ಕಂಪೆನಿ ಗಳದ್ದಾಗಿದೆ. ಅಲ್ಲದೆ, ಸುಪ್ರೀಂ ಕೋರ್ಟ್‌ನ ನಿರ್ದೇಶದಂತೆ ಬಿಎಸ್-3 ಸಾಮರ್ಥ್ಯದ ಎಂಜಿನ್‌ಗಳನ್ನು ಹೊಂದಿರುವ ಕಾರುಗಳ ಮೇಲೆ ಹೆಚ್ಚುವರಿ ಸುಂಕ ಪಾವತಿಸಬೇಕಾಗಿದೆ.
ಸುಪ್ರೀಂಕೋರ್ಟ್ ಶುಕ್ರವಾರ ಕಾರು ತಯಾರಿಕಾ ಕಂಪೆನಿಗಳಿಗೆ ಈ ನಿರ್ದೇಶನ ನೀಡಿದ್ದು, ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ತೆಗೆದುಕೊಳ್ಳಲಾಗಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದೆ. ಇದರಿಂದಾಗಿ ಸಹಜವಾಗಿಯೇ ರಸ್ತೆಗಿಳಿಯಲಿರುವ ಕಾರುಗಳ ಮೇಲೆ
ಹಾಗೂ ಈಗಾಗಲೇ ರಸ್ತೆಯ ಮೇಲಿರುವ ಬಿಎಸ್-3 ಎಂಜಿನ್ ಹೊಂದಿರುವ ಕಾರುಗಳ ಮೇಲೆ ನೇರ ಪರಿಣಾಮ ಬೀರಲಿದೆ. ಹೀಗಾಗಿ ಕಾರುಗಳ ಬೆಲೆ ಹೆಚ್ಚಳ ಕಂಪೆನಿಗಳಿಗೆ ಅನಿವಾರ್ಯವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಸುಪ್ರೀಂಕೋರ್ಟ್ ಭಾರತ್ ಸ್ಟೇಜ್-3 ಎಂಜಿನ್ ಹೊಂದಿರುವ ವಾಹನಗಳ ತಯಾರಿಕೆ ನಿಲ್ಲಿಸುವಂತೆ ಈಗಾಗಲೇ ಹೇಳಿದೆ.