Advertisement

ಬ್ರೂಸ್‌ ಟೇಲರ್‌, ಗ್ಯಾನನ್‌; ಇಬ್ಬರು ಮಾಜಿ ಕ್ರಿಕೆಟಿಗರ ನಿಧನ

10:54 PM Feb 06, 2021 | Team Udayavani |

ವೆಲ್ಲಿಂಗ್ಟನ್‌/ಪರ್ತ್‌: ಇಬ್ಬರು ಮಾಜಿ ಟೆಸ್ಟ್‌ ಕ್ರಿಕೆಟಿಗರು ಏಕಕಾಲಕ್ಕೆ ಅಗಲಿದ್ದಾರೆ. ನ್ಯೂಜಿಲ್ಯಾಂಡಿನ ಆಲ್‌ರೌಂಡರ್‌ ಬ್ರೂಸ್‌ ಟೇಲರ್‌ ಮತ್ತು ಆಸ್ಟ್ರೇಲಿಯದ ಪೇಸ್‌ ಬೌಲರ್‌ ಆಗಿದ್ದ ಸ್ಯಾಮ್‌ ಗ್ಯಾನನ್‌ ಶನಿವಾರ ನಿಧನ ಹೊಂದಿದರು.

Advertisement

ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ ಶತಕ
ಬ್ರೂಸ್‌ ಟೇಲರ್‌ ನ್ಯೂಜಿಲ್ಯಾಂಡಿನ ಡೈನಾಮಿಕ್‌ ಆಲ್‌ರೌಂಡರ್‌ ಎಂದೇ ಖ್ಯಾತಿ ಪಡೆದಿದ್ದರು. ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ ಶತಕದ ಜತೆಗೆ ಇನ್ನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಕಿತ್ತ ವಿಶ್ವದ ಏಕೈಕ ಕ್ರಿಕೆಟಿಗನೆಂಬುದು ಟೇಲರ್‌ ಹೆಗ್ಗಳಿಕೆ. 1964-65ರ ಭಾರತ ಪ್ರವಾಸದ ವೇಳೆ ಐತಿಹಾಸಿಕ “ಈಡನ್‌ ಗಾರ್ಡನ್ಸ್‌’ನಲ್ಲಿ ಅವರು ಈ ಸಾಧನೆಗೈದಿದ್ದರು. 77 ವರ್ಷದ ಟೇಲರ್‌ ವಯೋಸಹಜ ಅನಾರೋಗ್ಯದಿಂದ ನರಳುತ್ತಿದ್ದರು.

ನ್ಯೂಜಿಲ್ಯಾಂಡ್‌ ಪರ 30 ಟೆಸ್ಟ್‌ ಆಡಿದ್ದ ಬ್ರೂಸ್‌ ಟೇಲರ್‌, 898 ರನ್‌ ಜತೆಗೆ 111 ವಿಕೆಟ್‌ ಸಂಪಾದಿಸಿದ್ದರು. ವೆಸ್ಟ್‌ ಇಂಡೀಸ್‌ ಎದುರು 74ಕ್ಕೆ 7 ವಿಕೆಟ್‌ ಉರುಳಿಸಿದ್ದು ಜೀವನಶ್ರೇಷ್ಠ ಸಾಧನೆ. 2 ಏಕದಿನ ಪಂದ್ಯಗಳಲ್ಲೂ ಆಡಿದ್ದರು.
ಕ್ಯಾಂಟರ್‌ಬರಿ ಪರ 141 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಟೇಲರ್‌, 4,579 ರನ್‌ ಹಾಗೂ 422 ವಿಕೆಟ್‌ ಉರುಳಿಸಿದ್ದರು.

ಇದನ್ನೂ ಓದಿ:ನಕ್ಸಲ್‌ ನಿಗ್ರಹಕ್ಕೆ ಸಿಆರ್‌ಪಿಎಫ್ ಮಹಿಳಾ ‘ಕೋಬ್ರಾ’ ರೆಡಿ

ನಿವೃತ್ತಿ ಬಳಿಕ ನ್ಯೂಜಿಲ್ಯಾಂಡ್‌ ಆಯ್ಕೆ ಸಮಿತಿಯಲ್ಲೂ ಕರ್ತವ್ಯ ನಿಭಾಯಿಸಿದರು. ಇವರು ಆರಿಸಿದ ಕಿವೀಸ್‌ ತಂಡ 1992ರ ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಿತ್ತು.

Advertisement

3 ಟೆಸ್ಟ್‌ ಆಡಿದ ಗ್ಯಾನನ್‌
ಆಸ್ಟ್ರೇಲಿಯದ ಸ್ಯಾಮ್‌ ಗ್ಯಾನನ್‌ (73 ವರ್ಷ) 70ರ ದಶಕದ “ಬಂಡಾಯ ವಿಶ್ವ ಸರಣಿ’ ವೇಳೆ ರಾಷ್ಟ್ರೀಯ ತಂಡಕ್ಕೆ ಕರೆ ಪಡೆದರು. 1977ರ ಪ್ರವಾಸಿ ಭಾರತದ ವಿರುದ್ಧ ತವರಿನಂಗಳ ಪರ್ತ್‌ ನಲ್ಲಿ ಟೆಸ್ಟ್‌ಕ್ಯಾಪ್‌ ಧರಿಸಿ 7 ವಿಕೆಟ್‌ ಕಿತ್ತು ಗಮನ ಸೆಳೆದರು. ಆಡಿದ್ದು 3 ಟೆಸ್ಟ್‌ ಮಾತ್ರ. 11 ವಿಕೆಟ್‌ ಸಾಧನೆ ಇವರದಾಗಿತ್ತು. 40 ಪ್ರಥಮ ದರ್ಜೆ ಪಂದ್ಯಗಳಿಂದ 117 ವಿಕೆಟ್‌ ಕೆಡವಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next