Advertisement

ಶೀರೂರು ಸ್ವಾಮೀಜಿಗೆ ವೃಂದಾವನ ನಿರ್ಮಾಣ

10:13 AM Jul 28, 2019 | keerthan |

ಉಡುಪಿ: ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಮೊದಲ ವರ್ಷದ ಆರಾಧನೆ ಆ. 7ರಂದು ಹಿರಿಯಡಕ ಸಮೀಪದ ಶೀರೂರು ಮೂಲ ಮಠದಲ್ಲಿ ಸಂಪ್ರದಾಯದಂತೆ ನಡೆಯಲಿದ್ದು ಅದೇ ವೇಳೆ ಶಿಲಾಮಯ ವೃಂದಾವನವನ್ನೂ ಪ್ರತಿಷ್ಠಾಪಿ ಸಲಾಗುತ್ತದೆ.

Advertisement

ಮಠದಲ್ಲಿ ಕಳೆದ ವರ್ಷ ಶ್ರೀಗಳ ಪಾರ್ಥಿವ ಶರೀರವನ್ನು ವೃಂದಾವನ ಮಾಡಿದ ಜಾಗದ ಮೇಲೆ ಶಿಲಾಮಯ ವೃಂದಾವನ ಸ್ಥಾಪಿಸಲಾಗುತ್ತಿದೆ. ಈಗಾಗಲೇ ಸಿದ್ಧವಾಗಿದ್ದು ಧಾರ್ಮಿಕ ವಿಧಿಗಳು ನಡೆಯಬೇಕಿವೆ. ಮೂರು ಅಡಿ ಎತ್ತರದ ವೃಂದಾವನದಲ್ಲಿ ಐದು ವಿಭಾಗಗಳಿವೆ. ಅಗಲ ಸುಮಾರು ಒಂದೂವರೆ ಅಡಿ ಇದೆ. ಸ್ವಾಮೀಜಿಯವರ ಚಿತ್ರವನ್ನು ಸುಂದರವಾಗಿ ಕೆತ್ತಲಾಗಿದೆ. ಪದ್ಮಾಸನದ ಭಂಗಿಯಲ್ಲಿ ಜಪ ಮಾಡುತ್ತಿರುವ ಮತ್ತು ದಂಡದ ಚಿತ್ರವಿದೆ. ವೃಂದಾವನವನ್ನು ಕಾರ್ಕಳದಲ್ಲಿ ತಯಾರಿಸಲಾಗಿದೆ.

ಆ. 7ರಂದು ತಿಥಿ ಪ್ರಕಾರ ಆರಾಧನೋತ್ಸವ ನಡೆಯಲಿದೆ. ಆ. 6ರ ಸಂಜೆ ವೃಂದಾವನಕ್ಕೆ ವಾಸ್ತು ಹೋಮ ನಡೆಯಲಿದೆ. ಆ. 7ರಂದು ವಿರಜಾ ಹೋಮ, ಪವಮಾನ ಹೋಮ, ಮಠದ ದೇವರಿಗೆ ಪಂಚಾಮೃತ ಅಭಿಷೇಕ, ಮುಖ್ಯಪ್ರಾಣ ದೇವರಿಗೆ ವಿಶೇಷ ಪೂಜೆಗಳು ನಡೆದ ಬಳಿಕ ಹೋಮಗಳ ಕಲಶ, ದೇವರ ತೀರ್ಥವನ್ನು ವೃಂದಾವನಕ್ಕೆ ಹಾಕಿ ಪೂಜೆ ಸಲ್ಲಿಸಲಾಗುತ್ತದೆ.

ಶೀರೂರು ಮಠದ ದ್ವಂದ್ವ ಮಠವಾದ ಶ್ರೀ ಸೋದೆ ಮಠಾಧೀಶರ ನಿರ್ದೇಶನದಂತೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಸೋದೆ ಸ್ವಾಮೀಜಿಯವರು ಸೋಂದಾ ಕ್ಷೇತ್ರದಲ್ಲಿ ಚಾತುರ್ಮಾಸ ವ್ರತವನ್ನು ಕೈಗೊಳ್ಳುತ್ತಿದ್ದು, ವೈದಿಕರು ಆರಾಧನೋತ್ಸವದ ವಿಧಿ ವಿಧಾನಗಳನ್ನು ನಡೆಸಲಿದ್ದಾರೆ.

2018ರ ಜು. 19ರಂದು ಶೀರೂರು ಸ್ವಾಮೀಜಿಯವರು ಅಸ್ತಂಗತರಾಗಿದ್ದರು. ಈಗ ತಿಥಿ ಪ್ರಕಾರ ಮೊದಲ ಆರಾಧನೆ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next