Advertisement

ಬಿಆರ್‌ಟಿ ಕಾನನ ರಸ್ತೆಗಳಲ್ಲಿ ವನ್ಯ ಪ್ರಾಣಿಗಳ ಸಚ್ಛಂದ ವಿಹಾರ

02:21 PM Nov 28, 2021 | Team Udayavani |

ಯಳಂದೂರು: ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಹಲವು ತಿಂಗಳಿಂದ ಬೀಳುತ್ತಿರುವುದರಿಂದ ಮಳೆಯಿಂದ ಕಾಡು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು ಕೆರೆ, ಕಟ್ಟೆಗಳೆಲ್ಲಾ ತುಂಬಿ ಕಾಡು ಪ್ರಾಣಿಗಳು ಸ್ವಚ್ಛಂದವಾಗಿ ರಸ್ತೆಗಳಲ್ಲಿ ವಿಹರಿಸುತ್ತಿರುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

Advertisement

ಬಿಆರ್‌ಟಿ ವನ್ಯಧಾಮ 575 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು ಪ್ರಮುಖವಾಗಿ ಯಳಂದೂರು, ಕೆ.ಗುಡಿ, ಪುಣಜನೂರು, ಕೊಳ್ಳೇಗಾಲ, ಬೈಲೂರು ವಲಯಗಳಿಂದ ಕೂಡಿದೆ. 2011ರಲ್ಲಿ ಬಿಆರ್‌ಟಿ ವನ್ಯಧಾಮ ಹುಲಿಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದು ಆನೆ, ಹುಲಿ, ಚಿರತೆ, ಕಾಡೆಮ್ಮೆ, ಕರಡಿ, ಜಿಂಕೆ, ಕಾಡುಕುರಿ, ಕಡವೆ, ನರಿ, ತೋಳ ಸೇರಿದಂತೆ ಇತರೆ ಜೀವಸಂಕುಲ, ಸಸ್ಯ ಸಂಕುಲ ಹೊಂದಿರುವುದು ಇಲ್ಲಿನ ವಿಶೇಷ. ಪ್ರವಾಸಿಗರು ಇಲ್ಲಿನ ಪ್ರಸಿದ್ಧ ಬಿಳಿಗಿರಿರಂಗನಾಥಸ್ವಾಮಿ ದರ್ಶನ ಪಡೆದು ಕಾಡಿನ ಸೌಂದರ್ಯ ಸವಿದು ತೆರಳುತ್ತಾರೆ.

ಇತ್ತೀಚಿನಲ್ಲಿ ಕೋವಿಡ್‌ ಪ್ರಮಾಣ ಸ್ವಲ್ಪ ಕಡಿಮೆಗೊಂಡ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹೊರ ರಾಜ್ಯವಾದ ತಮಿಳುನಾಡು, ಕೇರಳ ಸೇರಿದಂತೆ ಇತರೇ ಕಡೆಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

ಮಳೆಯಿಂದ ಕಾಡಿಗೆ ಹಸಿರಿನ ಹೊದಿಕೆ: ಮಳೆಯಿಂದಾಗಿ ಕಾಡಿನಲ್ಲಿನ ಕೆರೆಗಳಿಗೆ ಜೀವ ಕಳೆ ಬಂದಿದ್ದು ಕಾಡಿನಲ್ಲಿ ಹುಲ್ಲು, ಸಸ್ಯಗಳು ಹಸಿರಿನಿಂದ ಕಂಗೊಳಿಸುತ್ತಿವೆ.

ರಸ್ತೆ ಮಾರ್ಗದಲ್ಲಿ ದರ್ಶನ: ಬಿಆರ್‌ಟಿ ವನ್ಯಧಾಮ ವ್ಯಾಪ್ತಿಯ ಗುಂಬಳ್ಳಿ ಚೆಕ್‌ ಪೋಸ್ಟ್‌ ನಿಂದ ಬೆಟ್ಟ ಹಾಗೂ ಬೆಟ್ಟದಿಂದ ಕೆ.ಗುಡಿ ಮಾರ್ಗವಾಗಿ ಸಾಗುವ ರಸ್ತೆ ಬದಿ ಕಂಡುಬರುವ ಹೊಸಹಳ್ಳಿ ಕೆರೆ, ನವಿಲುಗೆರೆ, ಆಮೆಕೆರೆ, ಲಿಂಗಣ್ಣನಕಟ್ಟೆ, ಮೊಸಳೆ ಕೆರೆ ಸೇರಿದಂತೆ ಇತರೆ ಕೆರೆ ಕಟ್ಟೆಗಳಲ್ಲಿ ಸಂಜೆಯಾಗುತ್ತಲೇ ಆನೆ, ಜಿಂಕೆ, ಕಾಡೆಮ್ಮೆ, ಜಿಂಕೆ, ತೋಳ,ನರಿ , ವೈಲ್ಡ್‌ಡಾಗ್‌, ಕಡವೆಗಳು ಹಿಂಡು ಹಿಂಡಾಗಿ ಬಂದು ವಿಹರಿಸುತ್ತಿವೆ. ಅದರಲ್ಲೂ ಮುಂಜಾನೆ ಹಾಗೂ ಸಂಜೆ ವೇಳೆ ಕೆರೆಯ ಹಿನ್ನೀರಿನ ಬಳಿ ಸ್ವತ್ಛಂದಾಗಿ ವಿಹರಿಸಲು ಗುಂಪು ಗುಂಪಾಗಿ ಬರುವ ಕಾಡು ಪ್ರಾಣಿಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ.

Advertisement

ಬಿಆರ್‌ಟಿ ಅರಣ್ಯ ಪ್ರದೇಶದ ರಸ್ತೆ ಬದಿ ಆನೆ, ಕಾಡೆಮ್ಮೆ, ಜಿಂಕೆ, ತೋಳ ಸೇರಿದಂತೆ ಹಲವು ಪ್ರಾಣಿಗಳನ್ನು ನೋಡಿ ಪುಳಕಗೊಂಡೆವು. ಜತೆಗೆ ಕಾಡು ಹಚ್ಚ ಹಸಿರಿನಿಂದ ಕೂಡಿರುವುದನ್ನು ನೋಡಲು ಮತ್ತಷ್ಟು ರೋಮಾಂಚನಗೊಳ್ಳುತ್ತಿದೆ. ●ಸಿ.ಸೌಮ್ಯಾ, ಪ್ರವಾಸಿಗರು

ಬಿಆರ್‌ಟಿ ಅರಣ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಕಾಡಿನ ಕೆರೆ, ಕಟ್ಟೆಗಳು ತುಂಬಿಕೊಂಡಿದ್ದು, ಮೇವು, ನೀರಿನ ತೊಂದರೆ ಇಲ್ಲ. ಜತೆಗೆ ರಸ್ತೆ ಬದಿಯ ಲಾಂಟಾನ ಗಿಡ ಗಂಟಿ ತೆರವು ಮಾಡಿರುವ ಹಿನ್ನೆಲೆ ಹುಲ್ಲಿನ ಹೊದಿಕೆ ಹೆಚ್ಚಾಗಿರುವ ಕಾರಣ ಪ್ರಾಣಿಗಳು ಮೇಯಲು ರಸ್ತೆ ಬದಿ ಸಂಚರಿಸುತ್ತವೆ. ಶಾಂತಪ್ಪ ಪೂಜಾರ್‌, ಆರ್‌ಎಫ್ಒ, ಬಿಆರ್‌ಟಿ ಕೆ.ಗುಡಿ ವಲಯ

ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next