Advertisement

ಸೈನಿಕರಿಗೆ ಸಲಾಂ; ಸೇನೆ-ಅರೆಸೇನೆಯಲ್ಲಿ ಸೋದರರ ಜುಗಲ್‌ಬಂದಿ

01:00 AM Feb 21, 2019 | Team Udayavani |

ಉಡುಪಿ: ಪರ್ಕಳ ಶೆಟ್ಟಿಬೆಟ್ಟು ಮೂಲದ ಅಣ್ಣ-ತಮ್ಮ ಸೇನೆ ಮತ್ತು ಅರೆಸೇನಾ (ಪ್ಯಾರಾ ಮಿಲಿಟರಿ) ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶಸೇವೆ ಮಾಡಬೇಕು ಎಂಬ ತಂದೆಯ ಹಂಬಲವನ್ನು ಮಕ್ಕಳಿಬ್ಬರು ಪೂರೈಸುತ್ತಿದ್ದಾರೆ. ಶೆಟ್ಟಿಬೆಟ್ಟಿನ ಶಿವ ಸಾಲ್ಯಾನ್‌ ಅವರು ಯೌವ್ವನದಲ್ಲಿದ್ದಾಗ ಸೇನೆ ಸೇರಬೇಕೆಂಬ ತುಡಿತವಿತ್ತು. ಆಗ ಅಡ್ಡಿಯಾದದ್ದು ಅಗತ್ಯ ಶಿಕ್ಷಣದ ಕೊರತೆ. ಜತೆಗೆ ಸೇನೆಗೆ ಸೇರುವುದು ಹೇಗೆ, ಎಲ್ಲಿಗೆ ಹೋಗಬೇಕು, ಯಾರನ್ನು ವಿಚಾರಿಸಬೇಕೆಂಬ ಮಾಹಿತಿಗಳ ಕೊರತೆಯೂ ಇತ್ತು. ಒಬ್ಬನೇ ಮಗನಾಗಿದ್ದುದೂ ಒಂದು ಕಾರಣವಾಯಿತು. ಈಗ ಶಿವ ಸಾಲ್ಯಾನರಿಗೆ ಸಂತೃಪ್ತಿ. ಅವರ ಒಬ್ಬ ಮಗ ಸೇನೆಯಲ್ಲಿ, ಮತೊ¤ಬ್ಬ ಮಗ ಅರೆಸೇನಾ ಪಡೆಯಲ್ಲಿದ್ದು ದೇಶ ಸೇವೆಗೆ ಟೊಂಕ ಕಟ್ಟಿದ್ದಾರೆ.

Advertisement

ಉಮೇಶ್‌ ಸೈನಿಕ
ಹಿರಿಯ ಪುತ್ರ ಉಮೇಶ್‌. ಉಡುಪಿ ಶೆಟ್ಟಿಬೆಟ್ಟಿನ ಸರಕಾರಿ ಶಾಲೆ ಯಲ್ಲಿ ಪ್ರೌಢಶಿಕ್ಷಣ, ಮಣಿಪಾಲ ಪ.ಪೂ. ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದ ಬಳಿಕ ಸೇನೆ ಸೇರಿದರು. ಚಿಕ್ಕಮಗಳೂರಿನಲ್ಲಿ ನಡೆದ ಸೇನಾ ರ್ಯಾಲಿಯಲ್ಲಿ ಆಯ್ಕೆಯಾದ ಅವರು 2004ರಿಂದ ಸೇನೆಯಲ್ಲಿ ಸೇವಾನಿರತರು. ಅವರ ಹುದ್ದೆ ಲ್ಯಾನ್ಸ್‌ ನಾಯಕ್‌.

ಪಂಜಾಬ್‌ನ ಪಠಾಣ್‌ಕೋಟ್‌, ಅಮೃತಸರ, ಪಶ್ಚಿಮ ಬಂಗಾಲದ ಬಿನ್ನಗುಡಿ, ಹಿಮಾಚಲಪ್ರದೇಶದ ಚಾಕಡಿಯಾ, ದಿಲ್ಲಿ, ಜಮ್ಮು ಕಾಶ್ಮೀರದ ಬಾರಾಮುಲ್ಲಾ, ಕಾರ್ಗಿಲ್‌, ಕೋಲ್ಕತಾ, ಅರುಣಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ. ಉಮೇಶ್‌ ಪ್ರಸ್ತುತ ಚೆನ್ನೈಯಲ್ಲಿದ್ದಾರೆ. ಏತನ್ಮಧ್ಯೆ ಭೂತಾನ್‌ ದೇಶದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅರುಣಾ ಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುವಾಗ ಚೀನೀ ಸೈನಿಕರ ಜತೆ ಗಡಿ ಸಭೆಗಳಲ್ಲಿಯೂ ಪಾಲ್ಗೊಂಡಿದ್ದಾರೆ.

ಮಕ್ಕಳಿಂದಾಗಿ ನಮಗೆ ಹೆಮ್ಮೆ
ಸೇನೆಗೆ ಮಗ ಸೇರುತ್ತೇನೆ ಅಂದಾಗ ಮನೆಯಲ್ಲಿ ನಾನೊಬ್ಬನೇ ಬೆಂಬಲ ಕೊಟ್ಟದ್ದು. ಉಳಿದವರಿಗೆ ಹೆದರಿಕೆ ಇತ್ತು. ಮಕ್ಕಳು ದೇಶ ಸೇವೆ ಮಾಡುವಾಗ ನಮಗೆ ಹೆಮ್ಮೆ ಅನಿಸುತ್ತದೆ. ನನಗೂ ಸೇನೆಯ ಬಗ್ಗೆ ಆಸಕ್ತಿ ಇದ್ದ ಕಾರಣ ನಾನು ಮಗನಿಗೆ ಪ್ರೋತ್ಸಾಹ ನೀಡಿದೆ. 
– ಶಿವ ಸಾಲ್ಯಾನ್‌

ಸೇನೆ ಬಿಡಲು ಮನಸ್ಸೇ ಇಲ್ಲ
17 ವರ್ಷ ಸೇವೆ ಸಲ್ಲಿಸಬೇಕೆಂದಿದೆ. ಈಗ 15 ವರ್ಷಗಳಾಗಿವೆ. ಸೇನೆಯ ಸೇವೆಯನ್ನು ಬಿಟ್ಟು ಬರಲು ಮನಸ್ಸಾಗುತ್ತಿಲ್ಲ. ಅಷ್ಟು ಆಕರ್ಷಣೆ ಇದೆ. ಸೇವೆಯನ್ನು ವಿಸ್ತರಿಸುವ ಬಯಕೆಯೂ ಇದೆ. ನಮ್ಮ ರಾಜ್ಯದಲ್ಲಿ ಬೆಳಗಾವಿ, ಕೊಡಗು ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯಲ್ಲಿದ್ದಾರೆ. ಉಳಿದ ಜಿಲ್ಲೆಯವರ ಸಂಖ್ಯೆ ಕಡಿಮೆ ಇರುವುದು. ನಮ್ಮ ಕರಾವಳಿಯವರೂ ಇದರ ಬಗ್ಗೆ ಮುಂದೆ ಬರಬೇಕು. – ಉಮೇಶ್‌ 

Advertisement

ಕಾರ್ಗಿಲ್‌ನಲ್ಲಿ ಸೇವೆ
ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇವೆ ಸಲ್ಲಿಸುವಾಗ ಉಗ್ರಗಾಮಿಗಳ ಜತೆ ಸೆಣೆಸಾಡಿದ ಅನುಭವ ಉಮೇಶ್‌ಗಿದೆ. -45 ಡಿಗ್ರಿ ಉಷ್ಣಾಂಶವಿರುವ ಕಾರ್ಗಿಲ್‌ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿದ್ದು ರೋಮಾಂಚಕ ಅನುಭವ ಎಂಬುದಾಗಿ ನೆನಪಿಸಿಕೊಳ್ಳುತ್ತಾರೆ. ಅರುಣಾಚಲ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತವಾಗುವುದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ಅನೇಕರನ್ನು ರಕ್ಷಿಸಿದ ಕೀರ್ತಿಯೂ ಉಮೇಶರಿಗೆ ಇದೆ. ಇದೇ ಪ್ರದೇಶದಲ್ಲಿ ಇವರಿದ್ದ ಸೇನಾ ಶಿಬಿರದ ಮೇಲೆ ಉಗ್ರಗಾಮಿಗಳು ಬಾಂಬ್‌ ಸ್ಫೋಟಗೊಳಿಸಿದಾಗ ಆದ ಗಂಭೀರ ಪರಿಸ್ಥಿತಿಯನ್ನು ಅವರು ಸ್ಮರಿಸಿಕೊಳ್ಳುತ್ತಾರೆ. ಉಮೇಶ್‌ ಅವರ ಪತ್ನಿ ಅಶ್ವಿ‌ನಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶುಶ್ರೂಷಕಿ. ಉಮೇಶ್‌ ಅವರ ಸಹೋದರ ರಮೇಶ್‌ ಅರೆ ಸೇನಾಪಡೆಯಾದ ಸಿಐಎಸ್‌ಎಫ್ನಲ್ಲಿ (ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯುರಿಟಿ ಫೋರ್ಸ್‌) ಕರ್ತವ್ಯ ನಿರತರು. ಪ್ರಸ್ತುತ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಭದ್ರತಾ ಸೇವೆಯಲ್ಲಿದ್ದಾರೆ. ರಮೇಶ್‌ ಅವರ ಪತ್ನಿ ಸುನೀತಾ ಪತಿಯ ಜತೆಗೆ ಇದ್ದಾರೆ. 

ಭೂತಾನ್‌ ಸೇವೆ
ಭೂತಾನ್‌ ದೇಶದಲ್ಲಿ ಭಾರತ ಮತ್ತು ಅಲ್ಲಿನ ಸೈನಿಕರು ಜಂಟಿಯಾಗಿ ಕಾರ್ಯನಿರ್ವಹಿಸುತ್ತಾರೆ. ಭಾರತೀಯ ಸೈನಿಕರ ಸಂಖ್ಯೆಯೇ ಹೆಚ್ಚು. ಉಭಯ ಸೈನಿಕರು ತರಬೇತಿ ವಿನಿಮಯ ಮಾಡಿಕೊಳ್ಳುತ್ತಾರೆ. ಭೂತಾನ್‌ ಸೈನಿಕರಿಗೆ ತರಬೇತಿ ನೀಡಿ, ಅವರಿಂದ ತರಬೇತಿ ಪಡೆದ ಅಮೂಲ್ಯ ಅನುಭವ ಉಮೇಶರಿಗಿದೆ. ಅರುಣಾಚಲ ಪ್ರದೇಶದಲ್ಲಿರುವಾಗ ಚೀನ ಸೈನಿಕರ ಜತೆ ನಡೆಸುವ ಸಭೆಗೆ ಆಯ್ಕೆಯಾಗಿ ಗಡಿ ಸಭೆಯಲ್ಲಿ ಭಾಗವಹಿಸಿದ್ದರು.

-  ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next