ನವದೆಹಲಿ: ಡಿಸೆಂಬರ್ 4ರಂದು ನಡೆಯಲಿರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರ ಸೋದರ ಸಂಬಂಧಿ ಸೇರಿದಂತೆ ಮೂವರನ್ನು ಟಿಕೆಟ್ ಗಾಗಿ ನಗದು ಪ್ರಕರಣದಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿ:ಶಂಕರನಾರಾಯಣ: ಶಾಲಾ ಕ್ರೀಡಾಕೂಟದಲ್ಲಿ ಅಲ್ಲಾಹು ಅಕ್ಬರ್ ಘೋಷಣೆ; ಹಿಂ.ಜಾಗರಣದಿಂದ ಪ್ರತಿಭಟನೆ
ಟಿಕೆಟ್ ಗಾಗಿ ನಗದು ಪ್ರಕರಣದ ಆರೋಪದಲ್ಲಿ ಆಪ್ ಶಾಸಕ ಅಖಿಲೇಶ್ ತ್ರಿಪಾಠಿಯ ಸಹಾಯಕ ವಿಶಾಲ್ ಪಾಂಡೆ, ಸೋದರ ಸಂಬಂಧಿ ಓಂ ಸಿಂಗ್ ಹಾಗೂ ಪ್ರಿನ್ಸ್ ರಘುವಂಶಿ ಸೇರಿದಂತೆ ಮೂವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಆಪ್ ಕಾರ್ಯಕರ್ತೆ ಶೋಭಾ ಖಾರಿ ಅವರು ವಾರ್ಡ್ ನಂಬರ್ 69ರಿಂದ ಸ್ಪರ್ಧಿಸಲು ಟಿಕೆಟ್ ಗಾಗಿ ಒತ್ತಾಯಿಸಿದ್ದರು. ಆದರೆ ಟಿಕೆಟ್ ನೀಡಲು ಶಾಸಕ ಅಖಿಲೇಶ್ ತ್ರಿಪಾಠಿ ಅವರು 90 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಟಿಕೆಟ್ ಗಾಗಿ ಅಭ್ಯರ್ಥಿಗಳು ಅಖಿಲೇಶ್ ತ್ರಿಪಾಠಿಗೆ 35 ಲಕ್ಷ ಮತ್ತು ವಾಝಿಪುರ್ ಶಾಸಕ ರಾಜೇಶ್ ಗುಪ್ತಾಗೆ 20 ಲಕ್ಷ ಲಂಚ ನೀಡಿದ್ದರು. ಉಳಿದ 35 ಲಕ್ಷ ರೂಪಾಯಿಯನ್ನು ಅಭ್ಯರ್ಥಿಯ ಅಂತಿಮ ಪಟ್ಟಿ ಬಿಡುಗಡೆಯಾದ ನಂತರ ನೀಡಲು ಸೂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಲಂಚ ಕೊಟ್ಟರೂ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿತ್ತು!
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಪ್ ಅಭ್ಯರ್ಥಿಗಳು ದೊಡ್ಡ ಮೊತ್ತದ ಲಂಚ ನೀಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿತ್ತು. ನಂತರ ಶಾಸಕ ಅಖಿಲೇಶ್ ತ್ರಿಪಾಠಿ ಸೋದರ ಸಂಬಂಧಿ ಓಂ ಸಿಂಗ್ ಬಳಿ ತೆರಳಿ ಹಣ ವಾಪಸ್ ನೀಡುವಂತೆ ಕೇಳಿದ್ದರು. ಹಣ ವಾಪಸ್ ಕೊಡಲು ನಿರಾಕರಿಸಿದ್ದರಿಂದ ಎಸಿಬಿಗೆ ಹಣ ಪಡೆಯುತ್ತಿರುವ ದೃಶ್ಯದ ಸಾಕ್ಷ್ಯ ಸಮೇತ ದೂರು ನೀಡಲಾಗಿತ್ತು.