ಕೊಂಬೆಟ್ಟು : ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ 2017-18ನೇ ಶೈಕ್ಷಣಿಕ ವರ್ಷವನ್ನು ಸ್ವಚ್ಛತಾ ವರ್ಷವನ್ನಾಗಿ ಆಚರಿಸುವ ಹಿನ್ನೆಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ಮತ್ತು ಸೇವಾದಳದ ಸಹಯೋಗದೊಂದಿಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಯಿತು.
ಉದ್ಘಾಟನೆ ನೆರವೇರಿಸಿದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಮಕ್ಕಳಿಗೆ ಸ್ವಚ್ಛತೆ ಕುರಿತು ಮಾಹಿತಿ ನೀಡಿದರು. ಜಾಥಾವು ದರ್ಬೆ ವೃತ್ತದಿಂದ ಮುಖ್ಯರಸ್ತೆಯಲ್ಲಿ ಸಾಗಿ ಬೊಳುವಾರು ವೃತ್ತ ಹಾಗೂ ಕೊಂಬೆಟ್ಟು ರಸ್ತೆಯಿಂದಾಗಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸಮಾಪನಗೊಂಡಿತು.
‘ನಮ್ಮ ತ್ಯಾಜ್ಯ, ನಮ್ಮ ಹೊಣೆ’ ಪರಿಕಲ್ಪನೆಯಲ್ಲಿ ಹಮ್ಮಿಕೊಂಡ ಜಾಥಾದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಮತ್ತು ಶಿಕ್ಷಕಿ ಸುನೀತಾ ಎಂ. ಅವರ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದ ಬೀದಿ ನಾಟಕ ಗಮನ ಸೆಳೆಯಿತು. ಇವರೊಂದಿಗೆ ಕೊಂಬೆಟ್ಟು ಸರಕಾರಿ ಪ್ರೌಢಶಾಲೆ ಸೇವಾದಳದ ಮಕ್ಕಳು, ಮಾರ್ಗದರ್ಶಿ ಶಿಕ್ಷಕಿ ದೇವಕಿ, ಸುದಾನ ವಸತಿಯುತ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕಿ ಸವಿತಾ ಮತ್ತು ಶಿಕ್ಷಕ ಪುಷ್ಪರಾಜ್ ಮತ್ತು ಪಾಂಗಳಾಯಿ ಬೆಥನಿ ಪ್ರೌಢಶಾಲೆ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು, ಶಿಕ್ಷಕಿ ಸುದಿನಾ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಮತ್ತು ಕಬ್ ಶಿಕ್ಷಕಿ ಸೌಮ್ಯಾ ಭಾಗವಹಿಸಿದ್ದರು.
ಸಮಾರೋಪದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೂಪಕಲಾ ಕೆ., ರಂಗಕರ್ಮಿ ಐ.ಕೆ. ಬೊಳುವಾರು ಉಪಸ್ಥಿತರಿದ್ದರು. ಜಾಥಾವು ಲಿಟ್ಲ ಫ್ಲವರ್ ಶಾಲೆಯ ಸ್ಕೌಟ್ ಮಾಸ್ಟರ್ ಬಾಲಕೃಷ್ಣ ಉದ್ಘೋಷದೊಂದಿಗೆ ಆಕರ್ಷಕವಾಗಿ ಸಾಗಿತು.