Advertisement
ಬಂಟ್ವಾಳ: ಮೂಲರಪಟ್ಣ ಸೇತುವೆ ಕುಸಿತದ ಸ್ಥಳಕ್ಕೆ ಸಂಸದ ನಳಿನ್ ಮಂಗಳವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ನೂತನ ಸೇತುವೆ ನಿರ್ಮಾಣಕ್ಕೆ ನಬಾರ್ಡ್ ಯೋಜನೆಯಡಿ ಅನುದಾನ ಒದಗಿಸಲಾಗುತ್ತದೆ. ಮಳೆಗಾಲದ ಅನಂತರ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇಲ್ಲಿನ ತೂಗುಸೇತುವೆಯಲ್ಲಿ ಜನಸಂಚಾರಕ್ಕೆ ಅನುವುಮಾಡಿಕೊಡಲು ಸೂಚಿಸಲಾಗಿದೆ. ಸುರಕ್ಷಾ ದೃಷ್ಟಿಯಿಂದ ತೂಗು ಸೇತುವೆಯ ಎರಡೂ ಬದಿ ಪೊಲೀಸ್ ನಿಯೋಜಿಸಲು ಮತ್ತು ಸೇತುವೆಯಲ್ಲಿ ಒಮ್ಮೆಗೆ 25 ಮಂದಿ ಮಾತ್ರ ನಡೆದು ಹೋಗಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಹೆದ್ದಾರಿಯಿಂದ ತೂಗು ಸೇತುವೆ ಬಳಿಗೆ ಪರ್ಯಾಯ ರಸ್ತೆ ನಿರ್ಮಿಸಲಾಗುವುದು. ವಿದ್ಯಾರ್ಥಿಗಳು, ಸಾರ್ವಜನಿಕರ ಅನುಕೂಲಕ್ಕಾಗಿ ಕುಸಿತದ ಸೇತುವೆಯ ಎರಡೂ ಬದಿಗೆ ಬಸ್‌ಗಳು ಬಂದು ಹೋಗುವಂತೆ ಆರ್.ಟಿ.ಒ. ಅಧಿಕಾರಿಗಳ ಮೂಲಕ ಸೂಚಿಸಲಾಗುವುದು. ಮುತ್ತೂರಿನ ನೋಣಾಲು, ಬಂಟ್ವಾಳದ ಬಡಗಬೆಳ್ಳೂರು ತನಕ ಖಾಸಗಿ ವಾಹನಗಳು ತೂಗು ಸೇತುವೆ ಸನಿಹಕ್ಕೆ ಬರುವಂತಾಗಲು ರಸ್ತೆ ಸಂಪರ್ಕ ದುರಸ್ತಿಗೆ ಪಿಡಬ್ಲ್ಯುಡಿ ಕ್ರಮ ಕೈಗೊಳ್ಳಲಿದೆ. ಮೂಲರಪಟ್ಣದ ಖಾಸಗಿ ಜಮೀನಿನಲ್ಲಿ 3 ತಿಂಗಳ ಅವಧಿಗೆ ರಸ್ತೆ ನಿರ್ಮಿಸಲು ಮಾತುಕತೆ ನಡೆಸಲಾಗಿದೆ ಎಂದು ರಾಜೇಶ್ ನಾೖಕ್ ಹೇಳಿದರು. ತಾತ್ಕಾಲಿಕ ಸಂಪರ್ಕ ರಸ್ತೆಯನ್ನು ಮೂಲರಪಟ್ಣ ನದಿಯ ಬದಿಯಲ್ಲಿ ಲೊಕೋಪಯೋಗಿ ಇಲಾಖೆ ಮಂಗಳವಾರ ದುರಸ್ತಿ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್, ಮಂಗಳೂರು ಪಿಡಬ್ಲ್ಯುಡಿ ಎಂಜಿನಿಯರ್ ಗೋಕುಲ್‌ದಾಸ್, ರವಿ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು. 2 ನಿಮಿಷಗಳ ಅಂತರದಲ್ಲಿ ಜೀವ ಉಳಿಯಿತು
ಎಡಪದವು: ಸುರತ್ಕಲ್ ನಿಂದ ಹೊರಟ ಸೀಗಲ್ ಬಸ್ ಸೋಮವಾರ ಸಂಜೆ 6.10ರ ಸುಮಾರಿಗೆ ಸೇತುವೆ ಮೇಲಿಂದ ಸಾಗಿತ್ತಷ್ಟೆ. ನಮ್ಮ ಶಾರದಾ ಬಸ್ ಮೂಲರಪಟ್ಣ ಬಳಿ ಬರುತ್ತಿತ್ತು. ಬೈಕ್ ಸವಾರನೊಬ್ಬ ನಿಲ್ಲಿಸುವಂತೆ ಸೂಚನೆ ನೀಡಿದ. 6.12ರ ಸುಮಾರಿಗೆ ಸೇತುವೆ ಮುರಿದುಬಿದ್ದಿತ್ತು. ಇದೇ ವೇಳೆ ಹುಡುಗನೊಬ್ಬ ನಡೆದು ಹೋಗುತ್ತಿದ್ದು, ಸೇತುವೆ ಮುರಿಯುವ ಸದ್ದು ಕೇಳಿ ಹಿಂದಕ್ಕೆ ಓಡಿ ಜೀವ ಕಾಪಾಡಿಕೊಂಡ. ‘ಅಷ್ಟರಲ್ಲಾಗಲೇ ಸೇತುವೆ ನೀರುಪಾಲಾಗಿತ್ತು. ಕೇವಲ ಎರಡು ನಿಮಿಷಗಳ ಅಂತರವಷ್ಟೆ. ಇಲ್ಲದಿದ್ದರೆ ಏನಾಗುತ್ತಿತ್ತೋ ಏನೋ?’ ಇದು ಶಾರದಾ ಬಸ್ ನ ನಿರ್ವಾಹಕ ಐವನ್ ಅವರ ಮಾತು.
Related Articles
Advertisement
ಎಚ್ಚರಿಸಿದ್ದ ವೀಡಿಯೋ ವೈರಲ್ಪುಂಜಾಲಕಟ್ಟೆ: ಮೂಲರಪಟ್ಣ ಸೇತುವೆಯ ಮೇಲ್ಭಾಗದ ಎರಡೂ ಕಡೆ ಬಿರುಕು ಬಿಟ್ಟಿರುವ ಬಗ್ಗೆ ಮೂರು ತಿಂಗಳ ಹಿಂದೆ ಸ್ಥಳೀಯ ನಿವಾಸಿ ಹಮೀದ್ ಅವರು ಸ್ನೇಹಿತರೊಂದಿಗೆ ಚರ್ಚಿಸಿ ಎಚ್ಚರಿಸಿದ ವೀಡಿಯೋ ವೈರಲ್ ಆಗಿದೆ. ಅವರು ಸೇತುವೆಯ ಮೇಲ್ಭಾಗದಲ್ಲಿ ನಿಂತು ಶಿಥಿಲಗೊಂಡ ಬಗ್ಗೆ ಮಾಹಿತಿ ನೀಡಿದ್ದು, ಇದನ್ನು ಹಮೀದ್ ಅವರ ಸ್ನೇಹಿತರೊಬ್ಬರು ಚಿತ್ರೀಕರಣ ಮಾಡಿದ್ದರು. ಅವರ ಮಾತು ಇದೀಗ ಸತ್ಯವಾಗಿದೆ ಎಂಬ ಬರಹದೊಂದಿಗೆ ವೀಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಆಧಾರವಾದ ತೂಗು ಸೇತುವೆ
ಫಲ್ಗುಣಿ ನದಿಗೆ ಕಟ್ಟಿರುವ ಈ ತೂಗು ಸೇತುವೆ ಬಡಗಬೆಳ್ಳೂರು – ಮುತ್ತೂರು ಗ್ರಾ.ಪಂ. ನಡುವೆ ಸಂಪರ್ಕ ಉದ್ದೇಶದಿಂದ ನಿರ್ಮಾಣ ಆಗಿದ್ದು 2016 ಆ. 11 ರಂದು ಉದ್ಘಾಟನೆ ಆಗಿತ್ತು. ಬಡಗಬೆಳ್ಳೂರು ಪ್ರದೇಶದ ನೂರಾರು ಮಂದಿಗೆ ಇದರಿಂದ ಸಹಕಾರ ಆಗಿತ್ತು. ಈಗಲೂ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಮೂಲಕ ಸಂಚರಿಸುತ್ತಾರೆ. ಮುತ್ತೂರು ನೋಣಾಲಿನ ವಿದ್ಯಾರ್ಥಿಗಳು ಬಂಟ್ವಾಳದ ಶಾಲೆ – ಕಾಲೇಜುಗಳಿಗೆ ಬರುತ್ತಿದ್ದು ಸೇತುವೆ ಮರುನಿರ್ಮಾಣ ವಾಗುವ ತನಕ ಶಾಲೆಗೆ ಸಕಾಲದಲ್ಲಿ ಹಾಜರಿ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಮುತ್ತೂರು ವಿದ್ಯಾರ್ಥಿಗಳಿಗೆ ಸಂಕಷ್ಟ
ಎಡಪದವು: ಮೂಲರಪಟ್ಣ ಸೇತುವೆ ಕುಸಿತದಿಂದ ಮುತ್ತೂರಿನ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಇಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಸಂಯುಕ್ತ ಪ. ಪೂ. ಕಾಲೇಜು ಇದ್ದು, ಶೇ. 75 ವಿದ್ಯಾರ್ಥಿಗಳು ಸೇತುವೆಯ ಅತ್ತಕಡೆಯಿಂದ ಬರುತ್ತಿದ್ದರು. ಶಾಲೆ – ಕಾಲೇಜಿಗೆ ಬರಬೇಕಾದರೆ ಇನ್ನು ತೂಗುಸೇತುವೆಯೇ ಗತಿಯಾಗಿದೆ. ಒಂದು ಕಡೆ ಹಾಳಾದ ರಸ್ತೆ, ಮತ್ತೂಂದು ಕಡೆ ತೂಗುವ ಸೇತುವೆ ಹೀಗೆ ಬರುವಾಗ ಮಕ್ಕಳಿಗೆ ಏನಾದರೂ ಅಪಾಯ ಸಂಭವಿಸಿದರೆ ಎಂಬುದು ಹೆತ್ತವರ, ಶಿಕ್ಷಕರ ಹಾಗೂ ಸಾರ್ವಜನಿಕರ ಭೀತಿಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಯುಕ್ತ ಪ.ಪೂ. ಕಾಲೇಜಿನ ಪ್ರಾಂಶುಪಾಲ ನಿರಂಜನ್, ಸೇತುವೆ ಮುರಿದಿರುವುದರಿಂದ ಮಕ್ಕಳು ತೂಗುಸೇತುವೆಯಲ್ಲಿಯೇ ಬರಬೇಕಾದ ಅನಿವಾರ್ಯತೆ ಇದೆ. ಮಕ್ಕಳು ಸಾಕಷ್ಟು ನಡೆಯಬೇಕು. ಅಲ್ಲದೆ ನದಿಯಲ್ಲಿ ಸಾಕಷ್ಟು ನೀರಿದ್ದು, ಮಕ್ಕಳ ಸುರಕ್ಷಿತವಾಗಿ ಬರುವಂತೆ ವ್ಯವಸ್ಥೆ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಪ್ರೌಢಶಾಲೆಯ ಮುಖ್ಯಶಿಕ್ಷಕ ಸಿಫ್ರಿಯನ್ ಡಿ’ಸೋಜಾ ಮಾಹಿತಿ ನೀಡಿ, ಶಾಲೆಗೆ ಸೊರ್ನಾಡು, ಆರಳ, ಕೂರಿಯಾಳ, ಬಟ್ಟಾಜೆ, ಅಜಾದ್‌ನಗರ ಮುಂತಾದ ಕಡೆಗಳಿಂದ ಹಲವಾರು ಮಕ್ಕಳು ಬರುತ್ತಿದ್ದಾರೆ. ಮಕ್ಕಳು ಸುರಕ್ಷಿತವಾಗಿ ಬರುವಂತಾಗಬೇಕು ಎಂದರು. ಶಾಲೆ – ಕಾಲೇಜಿಗೆ ರಜೆ
ಸೇತುವೆ ಮುರಿದ ಕಾರಣ ಶಿಕ್ಷಣ ಇಲಾಖೆಯ ಸೂಚನೆಯ ಮೇರೆಗೆ ಮಂಗಳವಾರ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮೂಲರಪಟ್ಣ – ಬಿ.ಸಿ. ರೋಡ್ ಬಸ್ ವೇಳಾಪಟ್ಟಿ
ಮಂಗಳೂರು: ಸಾರ್ವಜನಿಕರು ಅನುಕೂಲಕ್ಕಾಗಿ ಜಿಲ್ಲಾಡಳಿತ, ಮೂಲರ ಪಟ್ಣದಿಂದ ಬಿ.ಸಿ.ರೋಡ್ ಮತ್ತು ಬಿ.ಸಿ.ರೋಡ್‌ನಿಂದ ಮೂಲರಪಟ್ಣಕ್ಕೆ ಬಸ್ ಸಂಪರ್ಕ ಕಲ್ಪಿಸಿದ್ದು, ಬಸ್ ಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೂಲರಪಟ್ಣ-ಬಿ.ಸಿ.ರೋಡ್
ಬೆಳಗ್ಗೆ ಗಂಟೆ 7.20, 8.10, 8.40, 9.20, 10.00, 11.15, ಮಧ್ಯಾಹ್ನ 12.45, 1.30, 2.00, 2.40, ಸಂಜೆ 5.00, 6.00. ಬಿ.ಸಿ. ರೋಡ್-ಮೂಲರಪಟ್ಣ
ಬೆಳಗ್ಗೆ ಗಂಟೆ 7.50, 11.10, ಮಧ್ಯಾಹ್ನ 1.21, 4.20, ಸಂಜೆ 6.10. ಸೇತುವೆ ಕುಸಿಯಲು ಕಾರಣವೇನು?
ಎಡಪದವು: ಮೂಲರಪಟ್ಣ ಸೇತುವೆ ಕುಸಿಯಲು ಮಿತಿಮೀರಿದ ಮರಳುಗಾರಿಕೆ ಕಾರಣವೋ ಅಥವಾ ಕಳಪೆ ಕಾಮಗಾರಿ ಕಾರಣವೋ? ಅಥವಾ MRPLನಿಂದ ಅಳವಡಿಸಲಾಗಿದ್ದ ಪೈಪ್‌ಲೈನ್ ಕಾಮಗಾರಿ ಕಾರಣವೋ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಇದನ್ನು ತಿಳಿಯಬೇಕಾದರೆ 35 ವರ್ಷಗಳ ಹಿಂದೆ ಕಾಮಗಾರಿ ಹೇಗೆ ನಡೆಸಲಾಗಿತ್ತು? ಆ ಬಳಿಕ ಏನಾಯಿತು ಎಂಬ ಬಗ್ಗೆ ಕೂಲಂಕಷ ಶೋಧ ನಡೆಯಬೇಕಾಗಿದೆ. ಮರಳುಗಾರಿಕೆ, ಪೈಪ್‌ಲೈನ್
ಈ ಭಾಗದಲ್ಲಿ ಮಿತಿಮೀರಿದ ಮರಳುಗಾರಿಕೆಯೂ ಕಂಬ ನಿತ್ರಾಣಗೊಳ್ಳಲು ಕಾರಣವಿರುವ ಸಾಧ್ಯತೆಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಒಂದು ಕಾಲದಲ್ಲಿ ಸೇತುವೆಯ ಪಿಲ್ಲರ್ ನ ಜ್ಯಾಕ್ ವರೆಗೂ ಮರಳು ತುಂಬಿಕೊಂಡಿತ್ತು. ಈಗ ಜ್ಯಾಕ್ ಗಿಂತಲೂ ಆಳಕ್ಕಿಳಿದಿದೆ. ಸೇತುವೆಯ ದೂರದಲ್ಲಿ ಪೂಜಾರಿ ಕಲ್ಲು ಹಾಗೂ ಸಮೀಪ ಒಂದು ಕಲ್ಲು ಕಾಣುವುದು ಬಿಟ್ಟರೆ ಬೇರೆ ಯಾವುದೂ ಕಾಣುತ್ತಿರಲಿಲ್ಲ. ಆದರೆ ಮರಳು ತೆಗೆದು ಸಾಕಷ್ಟು ಕಲ್ಲುಗಳು ಕಾಣಸಿಗುತ್ತವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ MRPL ವತಿಯಿಂದ ಪೈಪ್‌ಗ್ಳನ್ನು ಅಳವಡಿಸಲು ನದಿಯ ನೆಲವನ್ನು ಕೊರೆದಾಗಲೂ ಸೇತುವೆ ಪಿಲ್ಲರ್‌ಗಳಿಗೆ ಹಾನಿಯಾಗಿರುವ ಬಗ್ಗೆ ಸಾಧ್ಯತೆ ಇರಬಹುದು ಎನ್ನುವುದನ್ನು ಸ್ಥಳೀಯರು ಹೇಳಿದ್ದಾರೆ. ಸೇತುವೆ ಉದ್ಘಾಟನೆಯಾಗಿದ್ದೇ ಗೊತ್ತಿಲ್ಲ?
ಈ ಸೇತುವೆಯನ್ನು ಉದ್ಘಾಟಿಸಿರುವ ಮಾಹಿತಿಯೇ ನಮಗ್ಯಾರಿಗೂ ಇಲ್ಲ. ಸೇತುವೆಯನ್ನು ಗುತ್ತಿಗೆದಾರರು ಬಿಟ್ಟುಕೊಟ್ಟಿದ್ದಾರೆಯೇ? ಕಳಪೆ ಕಾಮಗಾರಿಯ ಬಗ್ಗೆ ಗೊತ್ತಾಗಿ ಉದ್ಘಾಟಿಸದೆ ಹಾಗೆಯೇ ಸಂಚಾರಕ್ಕೆ ಅವಕಾಶ ಮಾಡಿದ್ದಾರೆಯೇ ಎಂಬ ಸಂಶಯ ಇದೆ ಎನ್ನುತ್ತಾರೆ ಸ್ಥಳೀಯರು. ಒಟ್ಟಿನಲ್ಲಿ ಸೇತುವೆ ಮುರಿದುಬಿದ್ದಿದ್ದು, ಹೊಣೆಗಾರರು ಯಾರು ಎನ್ನುವ ಬಗ್ಗೆ ಇಲಾಖಾ ಮಟ್ಟದಲ್ಲಿ ತನಿಖೆ ನಡೆಯಬೇಕು ಎಂಬ ಆಗ್ರಹ ಕೇಳಿಬಂದಿದೆ. ರಿಂಗ್ ಅಳವಡಿಸಿ ಮಾಡಿದ್ದ ಸೇತುವೆ
ಮೂಲರಪಟ್ಣ ಸೇತುವೆಯನ್ನು ರಿಂಗ್ ಗಳನ್ನು ಒಂದಕ್ಕೊಂದು ಪೋಣಿಸಿ ನಿರ್ಮಿಸಲಾಗಿದೆ. ಆಕ್ಸಿಜನ್ ಸಿಲಿಂಡರ್ ಗಳನ್ನು ಬಳಸಿ ಒಬ್ಬ ಕಾರ್ಮಿಕ ನೀರಿಗಿಳಿದು ಆಳ ತೋಡುತ್ತಿದ್ದ. ಆತನಿಗೆ ಅರ್ಧ ಗಂಟೆಯ ಸಮಯವಿದ್ದು ಆ ಬಳಿಕ ಆತನನ್ನು ಮೇಲಕ್ಕೆತ್ತಲಾಗುತ್ತಿತ್ತು. ಈ ರೀತಿ ಕೆಲಸ ನಡೆಸುವ ಕಾರ್ಮಿಕನ ಬಗ್ಗೆ ಎಚ್ಚರಿಕೆ ವಹಿಸಲು ಇನ್ನಿಬ್ಬರು ಕಾರ್ಮಿಕರು ಇರುತ್ತಿದ್ದರು. ಹೀಗೆ 20 ಅಡಿ ಆಳ ಕೊರೆದು ಅದರ ಮೇಲೆ ರಿಂಗ್‌ಗಳನ್ನು ಇಳಿಸಿ ಅದನ್ನು ಒಂದಕ್ಕೊಂದು ಪೋಣಿಸಿ ಸೇತುವೆಯನ್ನು ನಿರ್ಮಿಸಿರುವುದನ್ನು ನಾವು ಕಂಡಿದ್ದೇವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.