ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ – ಸಾಯಿ ಧರಮ್ ತೇಜ್ ಅಭಿನಯದ ʼಬ್ರೋʼ ಸಿನಿಮಾದ ಕಲೆಕ್ಷನ್ ದಿನಕಳೆದಂತೆ ಕಡಿಮೆ ಆಗುತ್ತಿದೆ. ಸಿನಿಮಾ ಶೀಘ್ರದಲ್ಲಿ ಚಿತ್ರಮಂದಿರದಿಂದ ಹೊರ ಹೋಗುವ ಸಾಧ್ಯತೆಯಿದೆ ಎನ್ನುವ ಮಾತು ಟಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿದೆ.
ಟಾಲಿವುಡ್ ನ ಎರಡು ಬಿಗ್ ಸ್ಟಾರ್ ಗಳ ಸಿನಿಮಾವಾಗಿರುವುದರಿಂದ ʼಬ್ರೋʼ ಮೇಲೆ ನಿರೀಕ್ಷೆಗಳಿತ್ತು. ಅದರಂತೆ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ಮೂಲಕ ಸಿನಿಮಾ ಟಾಲಿವುಡ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಹುಟ್ಟಿಸಿತು.
ಸಮುದ್ರಕನಿ ನಿರ್ದೇಶನ “ಬ್ರೋ” ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ದಿನಕಳೆದಂತೆ ಕಡಿಮೆ ಆಗುತ್ತಾ ಬಂದಿದೆ. ಸಿನಿಮಾ ಬಿಡುಗಡೆಯಾದ 8 ದಿನಕ್ಕೆ ಅಂದರೆ ಆಗಸ್ಟ್ 4 ರಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿದೆ. ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ 8ನೇ ದಿನ ಸಿನಿಮಾ ಕೇವಲ 1 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದುವರೆಗೆ 75.20 ಕೋಟಿ ರೂಪಾಯಿಯನ್ನು ಸಿನಿಮಾ ಗಳಿಸಿದೆ. ಆಗಸ್ಟ್ 4 ರಂದು ಚಿತ್ರದ ಆಕ್ಯುಪೆನ್ಸಿ ರೇಟ್ 17.63 ಶೇಕಡಾರಷ್ಟಿದೆ.
ಸಿನಿಮಾ ಶೀಘ್ರದಲ್ಲಿ ಥಿಯೇಟರ್ ಗಳಿಂದ ಹೊರಹೋಗುವ ಸಾಧ್ಯತೆಗಳಿವೆ ಎನ್ನವುದು ಟಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಜುಲೈ 28 ರಂದು ಸಿನಿಮಾ ತೆರೆಗೆ ಬಂದಿತ್ತು.
ಈ ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್, ಕೇತಿಕಾ ಶರ್ಮಾ, ರೋಹಿಣಿ, ಬ್ರಹ್ಮಾನಂದಂ ಮತ್ತು ಸುಬ್ಬರಾಜು ಪ್ರಮುಖ ಪಾತ್ರಗಳಲ್ಲಿದ್ದಾರೆ.