Advertisement

ಚರಂಡಿಗಳಲಿ ಗಾಂಜಾ ಬಚ್ಚಿಡುತ್ತಿದ್ದ ಖದೀಮರು :ಸಣ್ಣ ಪೊಟ್ಟಣಗಳಲ್ಲಿ ತುಂಬಿ ಗ್ರಾಹಕರಿಗೆ ಮಾರಾಟ

12:11 PM Feb 14, 2022 | Team Udayavani |

ಬೆಂಗಳೂರು : ಉತ್ತರ ವಿಭಾಗ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಟೋದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕುಖ್ಯಾತ ಡ್ರಗ್ಸ್‌ ಪೆಡ್ಲರ್‌ನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಷರೀಫ್ನಗರದ ನೂರುಲ್ಲಾ ಅಲಿಯಾಸ್‌ ಶಿವಕುಮಾರ್‌(40) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಯಿಂದ 3.30 ಕೆ.ಜಿ. ಗಾಂಜಾ ಹಾಗೂ 600 ರೂ. ನಗದು ವಶಪಡಿಸಿಕೊಂಡಿದ್ದಾರೆ.

Advertisement

ಆರೋಪಿ ನೂರುಲ್ಲಾ, ಈ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್‌ ಪೆಡ್ಲರ್‌ ಆಗಿದ್ದ ಫ‌ರಿದಾ ಎಂಬಾಕೆಯ ಸಾಕು ಮಗನಾಗಿದ್ದಾನೆ. ಡ್ರಗ್ಸ್‌ ಮಾರಾಟ ಪ್ರಕರಣದಲ್ಲಿ ಈ ಹಿಂದೆ ಪೊಲೀಸರು ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದರು. ಸದ್ಯ ಆಕೆ ಮೃತಪಟ್ಟಿದ್ದಾಳೆ. ಹೀಗಾಗಿ ಆಕೆಯ ದಂಧೆಯನ್ನು ಪುತ್ರ ನೂರುಲ್ಲ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ಆರೋಪಿ ಕಡಿಮೆ ದರಕ್ಕೆ ಗಾಂಜಾ ಖರೀದಿಸಿ, ಬಳಿಕ ಚಿಕ್ಕ ಪೊಟ್ಟಣಗಳಿಗೆ ತುಂಬಿ ಆಟೋದಲ್ಲಿ ಹೋಗಿ ಗ್ರಾಹಕರ ಮನೆ ಅಥವಾ ಕಚೇರಿಗೆ ನೇರವಾಗಿ ಪೂರೈಕೆ ಮಾಡುತ್ತಿದ್ದ. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಇಬ್ಬರ ಬಂಧನ : ಚಿಕ್ಕ ಪೊಟ್ಟಣಗಳಲ್ಲಿ ಗ್ರಾಹಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಂದಿನಿ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ಶಿಬ್‌ರಾಜ್‌ (24), ರಾಘವೇಂದ್ರ(22) ಹಾಗೂ ನಾಗೇಶ್‌(23) ಬಂಧಿತರು. ಆರೋಪಿಗಳಿಂದ 10 ಕೆ.ಜಿ. ಗಾಂಜಾ ಹಾಗೂ 1,500 ರೂ.ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ : ಕಲಾಪಕ್ಕೆ ಹಿಜಾಬ್ ಧರಿಸಿ ಬಂದ ಶಾಸಕಿ ಖನೀಜ ಫಾತಿಮಾ

ಒಡಿಶಾ ಮೂಲದ ಶಿಬ್‌ರಾಜ್‌ ನಗರದ ಖಾಸಗಿ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಆಗಾಗ್ಗೆ ಒಡಿಶಾಕ್ಕೆ ಹೋಗಿ ಬರುವಾಗ ಕಡಿಮೆ ಮೊತ್ತದಲ್ಲಿ ಗಾಂಜಾ ತಂದು, ನಂತರ ಅವುಗಳನ್ನು ವಾಸನೆ ಬಾರದ ರೀತಿ ಸಣ್ಣ ಪೊಟ್ಟಣಗಳಲ್ಲಿ ತುಂಬಿ ಇತರೆ ಇಬ್ಬರು ಆರೋಪಿಗಳ ಸಹಾಯದಿಂದ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ. ಅಲ್ಲದೆ, ಪೊಲೀಸರ ಕಣ್ಣು ತಪ್ಪಿಸಲು ನಗರ ಹೊರವಲಯದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಬಡಾವಣೆಗಳ ಚರಂಡಿಗಳಲ್ಲಿ ಗಾಂಜಾವನ್ನು ಬಚ್ಚಿಡುತ್ತಿದ್ದರು ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next