ಲಂಡನ್: ವಿಶ್ವ ಆ್ಯತ್ಲೆಟಿಕ್ ಕೂಟದ ವನಿತೆಯರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಅಮೆರಿಕದ ಬ್ರಿಟ್ನಿ ರೀಸ್ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅವರ ನಾಲ್ಕನೇ ವಿಶ್ವ ಆ್ಯತ್ಲೆಟಿಕ್ ಕೂಟದ ಚಿನ್ನವಾಗಿದೆ. ಅವರು ಈ ಹಿಂದೆ 2009, 2011 ಮತ್ತು 2013ರಲ್ಲಿ ಚಿನ್ನ ಜಯಿಸಿದ್ದರು.
ಎರಡು ವಾರಗಳ ಹಿಂದೆಯಷ್ಟೇ ನನ್ನ ಅಜ್ಜ ತೀರಿಕೊಂಡಿದ್ದರು. ಆದರೂ ನಾನು ಅವರಿಗಾಗಿ ಈ ಕೂಟದಲ್ಲಿ ಭಾಗವಹಿಸಿದೆ. ಅವರ ಪ್ರೋತ್ಸಾಹ ಮತ್ತು ಬೆಂಬಲದಿಂದಾಗಿ ಚಿನ್ನ ಗೆಲ್ಲಲು ಸಾಧ್ಯವಾಯಿತು ಎಂದು ರೀಸ್ ತಿಳಿಸಿದರು. ತನ್ನ ಶ್ರೇಷ್ಠ ನಿರ್ವಹಣೆ 7.02 ಮೀ. ದೂರ ಹಾರುವ ಮೂಲಕ ರೀಸ್ ಚಿನ್ನ ತನ್ನದಾಗಿಸಿಕೊಂಡರು.
ರಶ್ಯದ ದರಿಯಾ ಕ್ಲಿಶಿನಾ ಬೆಳ್ಳಿ ಗೆದ್ದರೆ ಹಾಲಿ ಚಾಂಪಿಯನ್ ಟಿಯಾನ್ನಾ ಬಾರ್ಲೊಲೆಟ್ಟಾ ಕಂಚು ಗೆದ್ದರು. ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಇದು ನನ್ನ ಮೊದಲ ಪದಕ ಮತ್ತು ಇದೊಂದು ಅತ್ಯಂತ ಪ್ರಮುಖ ಫಲಿತಾಂಶ ಎಂದು ಕ್ಲಿಶಿನಾ ಹೇಳಿದ್ದಾರೆ.
ಪುರುಷರ ಹ್ಯಾಮರ್ ಎಸೆತದಲ್ಲಿ ಪೋಲೆಂಡಿನ ಪಾವೆಲ್ ಫಾಡೆjಕ್ ಸತತ ಮೂರನೇ ಬಾರಿ ಚಿನ್ನ ಜಯಿಸಿದ್ದಾರೆ. 79.81 ಮೀ. ದೂರ ಎಸೆಯುವ ಮೂಲಕ ಫಾಡೆjಕ್ ತನ್ನ ಚಿನ್ನವನ್ನು ಉಳಿಸಿಕೊಂಡರು. ಕಳೆದ ಐದು ವರ್ಷಗಳಿಂದ ಈ ಕ್ರೀಡಾಂಗಣದಲ್ಲಿ ಈ ಸ್ಪರ್ಧೆಗಾಗಿ ಕಾಯುತ್ತಿದ್ದೆ. ಒಲಿಂಪಿಕ್ಸ್‌ನ ಸೋಲಿಗೆ ಸೇಡು ತೀರಿಸಿಕೊಳ್ಳಲು ಬಯಸಿದ್ದೆ ಎಂದು ಫಾಡೆjಕ್ ತಿಳಿಸಿದರು. ಅವರು 2012 ಮತ್ತು 2016ರ ಒಲಿಂಪಿಕ್ ಕೂಟದ ಹ್ಯಾರ್ ಎಸೆತ ಸ್ಪರ್ಧೆಯ ಫೈನಲ್ ಹಂತಕ್ಕೇರಲು ವಿಫಲರಾಗಿದ್ದರು.
ವನಿತೆಯರ 3,000 ಮೀ. ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಅಮೋಘ ನಿರ್ವಹಣೆ ನೀಡಿದ ಒಲಿಂಪಿಕ್ ಕಂಚು ವಿಜೇತೆ ಅಮೆರಿಕದ ಎಮ್ಮಾ ಕೊಬರ್ನ್ ಅವರು 9 ನಿಮಿಷ 02.58 ಸೆ.ನಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಇದು ಸ್ಟೀಪಲ್‌ಚೇಸ್‌ನಲ್ಲಿ ಅಮೆರಿಕಕ್ಕೆ ಲಭಿಸಿದ ಮೊದಲ ಚಿನ್ನವಾಗಿದೆ. ಅವರ ತಂಡಸದಸ್ಯೆ ಕೋರ್ಟ್ನಿ ಫ್ರೆರಿಚ್ ಬೆಳ್ಳಿ ಗೆದ್ದರೆ ಕೀನ್ಯದ ಹಾಲಿ ಚಾಂಪಿಯನ್ ಹಿವಿನ್ ಜೆಪೆRಮೋಯಿ ಕಂಚು ಪಡೆದರು.
ಹಾಲೆಂಡಿನ ಸ್ಪ್ರಿಂಟರ್ ಡಾಫೆ ಸ್ಕಿಪ್ಪರ್ ಅವರು ವಿಶ್ವ ಆ್ಯತ್ಲೆಟಿಕ್ಸ್‌ನ 200 ಮೀ. ಸ್ಪರ್ಧೆಯ ಚಿನ್ನವನ್ನು ತನ್ನಲ್ಲಿ ಉಳಿಸಿಕೊಂಡಿದ್ದಾರೆ. 100 ಮೀ.ನಲ್ಲಿ ಕಂಚು ಜಯಿಸಿದ್ದ ಸ್ಕಿಪ್ಪರ್ 22.05 ಸೆ.ನಲ್ಲಿ ಓಡಿ ಚಿನ್ನ ಪಡೆದರು. ಐವರಿಕೋಸ್ಟ್‌ನ ಮರೀ ಜೋಸೀ ಟಾ ಲೊ ಬೆಳ್ಳಿ ಪಡೆದರು. ಇದು ಟಾ ಲೊ ಅವರಿಗೆ ಲಭಿಸಿದ ಎರಡನೇ ಬೆಳ್ಳಿ ಪದಕವಾಗಿದೆ. 100 ಮೀ.ನಲ್ಲೂ ಅವರು ಬೆಳ್ಳಿ ಪಡೆದಿದ್ದರು.