Advertisement

“ಹಿಂದೂ’ಗೆ ಧರ್ಮ ರೂಪ ನೀಡಿದ್ದು ಆಂಗ್ಲರು

01:30 PM Oct 15, 2018 | Team Udayavani |

ಕಲಬುರಗಿ: ಹಿಂದೂ ಎಂಬ ಐತಿಹಾಸಿಕ ಪದವನ್ನು ಧರ್ಮ ರೂಪದಲ್ಲಿ ಹುಟ್ಟು ಹಾಕಿದ್ದು ಬ್ರಿಟಿಷರು. 18ನೇ ಶತಮಾನದವರೆಗೆ ಹಿಂದೂ ಪದ ಧಾರ್ಮಿಕ ಅರ್ಥದಲ್ಲಿ ಇರಲಿಲ್ಲ ಎಂದು ಆಂಧ್ರ ಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ವೈಜ್ಞಾನಿಕ ಸಮಾಜವಾದ
ಅಧ್ಯಯನ ಕೇಂದ್ರದ ನಿರ್ದೇಶಕ ಡಾ| ಎನ್‌. ಅಂಜಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಸೂಪರ್‌ ಮಾರ್ಕೆಟ್‌ನಲ್ಲಿರುವ ಹೈದ್ರಾಬಾದ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ ಸಭಾಂಗಣದಲ್ಲಿ ರವಿವಾರ ದೇವಿಪ್ರಸಾದ ಚಟ್ಟೋಪಾಧ್ಯಾಯ ಜನ್ಮ ಶತಮಾನೋತ್ಸವ ಸಮಿತಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಆಶಯ ಭಾಷಣ ಭಾಷಣ ಮಾಡಿದರು.

ಹಿಂದೂ ಎಂಬುವುದು ಐತಿಹಾಸಿಕ ಪದವಾಗಿದ್ದು, ರಾಜತರಂಗಿಣಿ ಸೇರಿದಂತೆ ಅನೇಕ ಐತಿಹಾಸಿಕ ಗ್ರಂಥಗಳಲ್ಲಿ ಹಿಂದೂ ಪದ ಬಳಕೆ ಮಾಡಲಾಗಿದೆ. ಆದರೆ, ದೇಶದಲ್ಲಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ಬ್ರಿಟಿಷರು ಜನತೆಯನ್ನು ಹಿಂದೂಗಳೆಂದು ವಿಂಗಡಿಸಿ ಹಿಂದುತ್ವವನ್ನು ರಚಿಸಿದರು
ಎಂದು ವಿದ್ವಾಂಸರ ಪ್ರತಿಪಾದನೆಯಾಗಿದೆ ಎಂದರು. 

ಮುಸ್ಲಿಂ, ಕ್ರೈಸ್ತ, ಪಾರ್ಸಿ ಇತರ ಧರ್ಮಗಳ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಆದರೆ, ದೇಶದಲ್ಲಿ ಮುಸ್ಲಿಂ, ಕ್ರೈಸ್ತ, ಪಾರ್ಸಿ ಧರ್ಮದವರನ್ನು ಆಯಾ ಜಾತಿಯವರೆಂದು ಹಾಗೂ ಈ ಜಾತಿಗಳನ್ನು ಅನುಸರಿಸದವರನ್ನು ಹಿಂದೂಗಳೆಂದು ಬ್ರಿಟಿಷರು ವಿಂಗಡಿಸುವ ಕೆಲಸ ಮಾಡಿದರು. ಮುಂದೆ 1872
ರಲ್ಲಿ ನಡೆದ ದೇಶದ ಮೊದಲ ಜನಗಣತಿಯಲ್ಲೂ ಇದನ್ನೇ ಅಧಿಕೃತವಾಗಿ ದಾಖಲೆಗಳಲ್ಲಿ ಬ್ರಿಟಿಷರು ಸೇರಿಸಿದರು. ಈ ಮೂಲಕ ಭಾರತದ ಬಹುಸಂಖ್ಯೆಯ ಜನ ಹಿಂದುಗಳು. ಇದು ಹಿಂದೂಸ್ಥಾನ. ಇಲ್ಲಿನ ಜನರು ಹಿಂದಿ ಭಾಷಿಕರು ಎಂದು ಬಿಂಬಿಸಿ ತಮ್ಮ ಮಾರುಕಟ್ಟೆಯನ್ನು ಬ್ರಿಟಿಷರು ವೃದ್ಧಿಸಿಕೊಂಡರು ಎಂದರು.

ಇದೇ ವೇಳೆ ಬ್ರಿಟಿಷರ ಕಾಲಕ್ಕಿಂತಲೂ ಮುಂಚೆ ಲಿಂಗಾಯತರು ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದರು ಎಂಬುವುದು ದಾಖಲೆಗಳಿಂದ ತಿಳಿಯುತ್ತಿದೆ. ಹೀಗಾಗಿ ಲಿಂಗಾಯತರು ಜೈನರಂತೆ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದರು.

Advertisement

ಭಾರತದ ಚರಿತ್ರೆಯನ್ನು ಮಾರ್ಕ್‌ವಾದದ ದೃಷ್ಟಿಕೋನದಲ್ಲಿ ನೋಡಿದ ದೇವಿಪ್ರಸಾದ ಚಟ್ಟೋಪಾಧ್ಯಾಯರು, ಭಾರತೀಯ ಸಂಸ್ಕೃತಿಯನ್ನು ವೈಜ್ಞಾನಿಕ ಆಧಾರದಲ್ಲಿ ತಿಳಿಸಲು ಯತ್ನಿಸಿದವರಲ್ಲಿ ಒಬ್ಬರು. ಆದರೆ, ಈಗ ತತ್ವಶಾಸ್ತ್ರದ ಬಗ್ಗೆ ಆಸಕ್ತಿ ಕ್ಷೀಣಿಸುತ್ತಿದ್ದು, ಕರ್ನಾಟಕದಲ್ಲಿರುವ 17
ವಿಶ್ವವಿದ್ಯಾಲಯಗಳಲ್ಲಿ ತತ್ವಶಾಸ್ತ್ರದ ವಿಭಾಗಗಳು ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಬೆಂಗಳೂರಿನ ಖ್ಯಾತ ವಿಚಾರವಾದಿ ಡಾ| ಎನ್‌. ಗಾಯತ್ರಿ ಮಾತನಾಡಿ, ದೇವಿಪ್ರಸಾದ ಚಟ್ಟೋಪಾಧ್ಯಾಯ ಅವರ ವಿಚಾರಗಳಲ್ಲಿ ಜ್ಞಾನದ ಬೆಳಕಿದೆ. ಅವರ ವಿಚಾರಗಳು ಅತ್ಯಂತ ಅಮೂಲ್ಯವಾಗಿದ್ದು, ಪ್ರತಿಯೊಬ್ಬರಿಗೂ ಮುಟ್ಟಿಸುವ ಕಾರ್ಯ ಆಗಬೇಕೆಂದರು.

ಖ್ಯಾತ ಕಲಾವಿದ ಡಾ| ವಿ.ಜಿ. ಅಂದಾನಿ ಉದ್ಘಾಟಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜು ಇಲಾಖೆ ಉಪ ನಿರ್ದೇಶಕ ಶಿವಶರಣಪ್ಪ ಮುಳೇಗಾಂವ, ಅರುಣಕುಮಾರ, ಡಾ| ಶಿವಗಂಗಮ್ಮಾ ರುಮ್ಮಾ, ಜೆ. ಮಲ್ಲಪ್ಪ, ಅಲ್ತಾಫ್‌ ಇನಾಂದಾರ್‌ ಹಾಜರಿದ್ದರು. ಡಾ| ಈಶ್ವರಯ್ಯ ಮಠ ಸ್ವಾಗತಿಸಿದರು, ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next