Advertisement

ಧರ್ಮಕ್ಕಿಂತ ಬದುಕು ಮುಖ್ಯ: ಮಾರ್ಚ್‌ 22ರಲ್ಲಿ ಶೆಟ್ಟರೂ ಇದ್ದಾರೆ

03:50 AM Apr 14, 2017 | Team Udayavani |

“ಮಾರ್ಚ್‌ 22′ ಎಂಬ ತಮ್ಮ ಹೊಸ ಚಿತ್ರದ ಬಗ್ಗೆ ಮೂರು ವಿಷಯವನ್ನು ಹೇಳಬೇಕಿತ್ತು ಕೋಡ್ಲು ರಾಮಕೃಷ್ಣ.
1. ಮುಂಚೆ ಅನಂತ ನಾಗ್‌ ಎದುರು ಲಕ್ಷ್ಮೀ ನಟಿಸಬೇಕಿತ್ತು. ಈಗ ಡೇಟ್‌ ಸಮಸ್ಯೆಯಿಂದಾಗಿ ಲಕ್ಷ್ಮೀ ಬದಲು ಗೀತಾ ಬಂದಿರುವುದು.
2. ಎರಡನೆಯದಾಗಿ ಚಿತ್ರದಲ್ಲಿ ಅನಿವಾಸಿ ಭಾರತೀಯ ಬಿ.ಆರ್‌. ಶೆಟ್ಟಿ ನಟಿಸಿರುವುದು.
3. ಮೂರನೆಯದಾಗಿ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿರುವುದು.

Advertisement

ಈ ಮೂರೂ ವಿಷಯಗಳನ್ನು ತಿಳಿಸುವುದಕ್ಕೆ ಕೋಡ್ಲು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ವಿಶೇಷವೆಂದರೆ, ಈ ಪತ್ರಿಕಾಗೋಷ್ಠಿಯಲ್ಲಿ ಖುದ್ದು ಬಿ.ಆರ್‌. ಶೆಟ್ಟಿ ಹಾಜರಿದ್ದು, ನಟನೆಯ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅವರು ಮಾತಾಡಿದ್ದು ಕಡೆಗೆ. ಅದಕ್ಕೂ ಮುನ್ನ ಚಿತ್ರದಲ್ಲಿ ನಟಿಸಿರುವ ಶರತ್‌ ಲೋಹಿತಾಶ್ವ, ಪದ್ಮಜಾ ರಾವ್‌, ರಮೇಶ್‌ ಭಟ್‌ ಮುಂತಾದವರು ಮಾತಾಡಿದ್ದರು. ಚಿತ್ರ ಮೂಡಿ ಬಂದಿರುವ ರೀತಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವುದರ ಜೊತೆಗೆ, ನಿರ್ಮಾಪಕ ಹರೀಶ್‌ ಶೇರಗಾರ್‌ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರೂ ಮಾತು ಮುಗಿಸಿದ ನಂತರ ಬಿ.ಆರ್‌. ಶೆಟ್ಟರು ಮಾತಿಗೆ ನಿಂತರು.

ಬಿ.ಆರ್‌. ಶೆಟ್ಟರು ಈ ಚಿತ್ರದಲ್ಲಿ ನಟಿಸುವುದಕ್ಕೆ ಮುಖ್ಯ ಕಾರಣ ನಿರ್ಮಾಪಕರಂತೆ. ಅವರು ಬಂದು ಕೇಳಿದಾಗ ಇಲ್ಲ ಎನ್ನಲಾಗದೆ ಅವರು ಚಿತ್ರದಲ್ಲಿ ನಟಿಸಿದರಂತೆ. ಜೊತೆಗೆ ಚಿತ್ರಗಳಲ್ಲಿ ನಟಿಸಬೇಕು ಎಂಬುದು ಅವರ ಬಹಳ ವರ್ಷಗಳ ಆಸೆಯಾಗಿತ್ತಂತೆ. “ಹಿಂದೊಮ್ಮೆ “ಕೋಟಿ-ಚೆನ್ನಯ’ ತುಳು ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಹಣದ ತಾಪತ್ರಯ ಇದ್ದುದರಿಂದ ನಾನು ನಟನೆ ಬಿಟ್ಟು, ದುಬೈಗೆ ಹೋದೆ. ಆ ನಂತರ ಶ್ರೀದೇವಿ ಜೊತೆಗೆ ನಟಿಸುವುದಕ್ಕೆ ಅವಕಾಶ ಸಿಕ್ಕಿತ್ತು. ನನ್ನ ಹೆಂಡತಿ ಬಿಡಲಿಲ್ಲ. ಈಗಲೂ ನಟಿಸುವುದು ಬಹಳ ಕಷ್ಟವಾಗಿತ್ತು. ಕಾರಣ ನನ್ನ ವ್ಯಾಪಾರ. 32 ದೇಶಗಳಲ್ಲಿ ನನ್ನ ಬಿಝಿನೆಸ್‌ ಇದೆ. ಹರೀಶ್‌ ಫೋನ್‌ ಮಾಡಿ ಹೇಳುತ್ತಲೇ ಇದ್ದರು. ಕೊನೆಗೆ ಚಿತ್ರೀಕರಣದ ಕೊನೆಯ ದಿನ ಬಂದು ನನ್ನ ಕೆಲಸ ಮುಗಿಸಿಕೊಟ್ಟಿದ್ದೇನೆ. ರಾತ್ರಿ 9ಕ್ಕೆ ಶುರುವಾದ ಚಿತ್ರೀಕರಣ, ಮಧ್ಯರಾತ್ರಿ 2.30ರವರೆಗೂ ನಡೆದಿದೆ. ಐದು ನಿಮಿಷದ ಪದ್ಯಕ್ಕೆ ಐದು ಗಂಟೆಗಳ ಚಿತ್ರೀಕರಣವಾಗಿದೆ’ ಎಂದರು. ಇನ್ನು ಈ ತರಹ ಚಿತ್ರ ಈಗಿನ ಕಾಲಕ್ಕೆ ಬಹಳ ಸೂಕ್ತ ಎಂದರು ಬಿ.ಆರ್‌. ಶೆಟ್ಟರು. “ಕೋಮು ಸೌಹಾರ್ಧತೆಯನ್ನು ಪ್ರೋತ್ಸಾಹಿಸುವ ಸಿನಿಮಾ ಇದು. ಧರ್ಮಕ್ಕಿಂತ ಬದುಕು ಮುಖ್ಯ ಎಂದು ಸಾರುವ ಚಿತ್ರ ಇದು. ಈ ಚಿತ್ರ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳಲಿ’ ಎಂದು ಹಾರೈಸಿ ಮಾತು ಮುಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next