Advertisement

ಕಾಶ್ಮೀರ ಭೇಟಿಗೆ ಬಂದ ಬ್ರಿಟಿಶ್ ಸಂಸದೆಯ ಇ-ವೀಸಾ ರದ್ದು ; ಏರ್ ಪೋರ್ಟಿನಿಂದಲೇ ವಾಪಸ್

09:44 AM Feb 18, 2020 | Team Udayavani |

ನವದೆಹಲಿ: ಸಮಂಜಸ ರೀತಿಯ ಇ-ವೀಸಾ ಹೊಂದಿಲ್ಲದ ಕಾರಣಕ್ಕೆ ಬ್ರಿಟಿಷ್ ಸಂಸದೆ ಡೆಬ್ಬೀ ಅಬ್ರಹಾಮ್ಸ್ ಅವರನ್ನು ದೆಹಲಿಯ ವಿಮಾನ ನಿಲ್ದಾಣದಲ್ಲೇ ತಡೆಹಿಡಿದು ಬಳಿಕ ಅವರನ್ನು ವಾಪಾಸು ಕಳುಹಿಸಿರುವ ಘಟನೆ ವರದಿಯಾಗಿದೆ. ಸಂಸದೆ ಅಬ್ರಹಾಮ್ಸ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಆಗಮಿಸಿದ್ದರು ಮತ್ತು ತಮ್ಮ ಈ ಭೇಟಿಯ ಸಂದರ್ಭದಲ್ಲಿ ಅಬ್ರಹಾಮ್ಸ್ ಅವರು ಕಾಶ್ಮೀರಕ್ಕೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡುವ ಉದ್ದೇಶವನ್ನು ಹೊಂದಿದ್ದರು.

Advertisement

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಶನ್ ಕೇಂದ್ರದಲ್ಲಿ ತನ್ನ ಪ್ರಯಾಣದ ದಾಖಲೆಗಳು ಹಾಗೂ ಇ-ವೀಸಾ ಸಲ್ಲಿಸಿದ ಬಳಿಕವೂ ಅಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ನನಗೆ ಸೂಕ್ತ ಮಾಹಿತಿ ನೀಡದೇ ಸತಾಯಿಸಿದರು ಎಂದು ಈ ಬ್ರಿಟಿಶ್ ಸಂಸದೆ ಆರೋಪಿಸಿದ್ದಾರೆ. ಮಾತ್ರವಲ್ಲದೇ ತನ್ನಲ್ಲಿದ್ದ ಇ-ವೀಸಾದ ಅವಧಿ ಮುಗಿದಿದೆ ಎಂದು ತನಗೆ ತಿಳಿಸಿದ ಅಧಿಕಾರಿಗಳು ತನ್ನ ಪಾಸ್ ಪೋರ್ಟನ್ನು ಸುಮಾರು ಹತ್ತು ನಿಮಿಷಗಳ ಕಾಲ ನನಗೆ ತಿಳಿಯದಂತೆ ಇರಿಸಿದ್ದರು ಎಂದೂ ಅವರು ಆರೋಪಿಸಿದ್ದಾರೆ.

59 ವರ್ಷ ಪ್ರಾಯದ ಡೆಬ್ಬೀ ಅಬ್ರಹಾಮ್ಸ್ ಅವರು 2011ರಿಂದ ಸಂಸದೆಯಾಗಿ ಆಯ್ಕೆಯಾಗುತ್ತಿದ್ದಾರೆ ಹಾಗೂ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಕಟು ಟೀಕಾಕಾರರೂ ಆಗಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಭಾರತದ ಗೃಹಸಚಿವಾಲಯದ ಅಧಿಕಾರಿಗಳು, ‘ಬ್ರಿಟಿಷ್ ಸಂಸದೆಯ ಬಳಿ ಭಾರತಕ್ಕೆ ಭೇಟಿ ನೀಡಲು ಅಗತ್ಯವಾಗಿದ್ದ ಕ್ರಮಬದ್ಧ ವೀಸಾ ಇರಲಿಲ್ಲ. ಹಾಗಾಗಿ ಆಕೆಗೆ ಭಾರತ ಪ್ರವೇಶವನ್ನು ನಿರಾಕರಿಸಲಾಯಿತು’ ಎಂದು ಹೇಳಿದ್ದಾರೆ. ಅವರನ್ನು ಬಳಿಕ ದುಬಾಯಿಗೆ ಮರಳಿ ಕಳುಹಿಸಲಾಯಿತು ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next