ಫ್ರಾನ್ಸ್: ಕೆಲವರಿಗೆ ಬಿಡುವಿದ್ದಾಗ ಒಂಟಿಯಾಗಿ ನದಿಯ ತೀರದಲ್ಲಿ ಮೀನಿಗೆ ಗಾಳ ಹಾಕುವ ಹವ್ಯಾಸವಿರುತ್ತದೆ. ಇಲ್ಲೊಬ್ಬ ವ್ಯಕ್ತಿಯ ಮೀನಿನ ಸ್ಟಿಕ್ ಗೆ ದೈತ್ಯ ಗಾತ್ರದ ಮೀನೊಂದು ಸಿಕ್ಕಿದ್ದು ಅದರ ಫೋಟೋಗಳು ವೈರಲ್ ಆಗಿದೆ.
42 ವರ್ಷದ ಆಂಡಿ ಹ್ಯಾಕೆಟ್ ಫ್ರಾನ್ಸ್‌ನ ಶಾಂಪೇನ್‌ನಲ್ಲಿರುವ ಬ್ಲೂವಾಟರ್ ಕೆರೆಯಲ್ಲಿ ದೈತ್ಯಕಾರದ ಗೋಲ್ಡ್ ಫಿಶ್ ಗಾಳಕ್ಕೆ ಸಿಕ್ಕಿದ್ದು, ಇದನ್ನು ʼದಿ ಕ್ಯಾರೆಟ್ ಫಿಶ್ʼ ಎಂದೂ ಕರೆಯಲಾಗುತ್ತದೆ. ಆಂಡಿ ಹ್ಯಾಕೆಟ್ ಮೀನನ್ನು ಹಿಡಿದ ಬಳಿಕ ಅನುಭವವನ್ನು ಹಂಚಿಕೊಂಡಿದ್ದಾರೆ. “ನನಗೆ ಮೊದಲೇ ಗೊತ್ತಿತ್ತು ಇಲ್ಲಿ ದೈತ್ಯಕಾರದ ಗೋಲ್ಡ್ ಫಿಶ್ ಇದೆ ಎಂದು. ನನ್ನ ಸ್ಟಿಕ್ ನ್ನು ಆ ಮೀನು ಎಳೆದಾಡಿತು. ಅದು ಕಿತ್ತಳೆ (ಆರೇಂಜ್) ಬಣ್ಣದಲ್ಲಿದೆ ಎನ್ನುವುದನ್ನು ಒಮ್ಮೆ ಸ್ಟಿಕ್ ನ್ನು ಎಳೆದಾಗ ನೋಡಿದೆ. ಸುಮಾರು 25 -30 ನಿಮಿಷದವರೆಗೆ ಮೀನನ್ನು ಹಾಗೆಯೇ ಸುತ್ತಾಡಿಸಿ ಬಳಿಕ ಮೀನನ್ನು ಮೇಲಕ್ಕೆ ತಂದೆ” ಎಂದರು.
ಬ್ಲೂವಾಟರ್ ಲೇಕೆಸ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಮೀನಿನ ಫೋಟೋಗಳನ್ನು ಹಂಚಿಕೊಂಡಿದೆ. ಈ ಮೀನನ್ನು 15 ವರ್ಷಗಳ ಹಿಂದೆ ಕೆರೆಗೆ ಬಿಡಲಾಗಿತ್ತು. ಮೀನನ್ನು ಹಿಡಿದ ಬಳಿಕ ಆಂಡಿ ಹ್ಯಾಕೆಟ್ ಮೀನನ್ನು ಪುನಃ ಕೆರೆಗೆ ಬಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಈ ಮೀನಿನ ತೂಕ 30.5 ಕೆ.ಜಿ. ಇದಕ್ಕೂ ಮುನ್ನ 2019 ರಲ್ಲಿ ಯುಎಸ್ ನ ಮಿನ್ನೇಸೋಟದಲ್ಲಿ ಜೇಸನ್ ಫುಗೇಟ್ ಎನ್ನುವವರು 13.6 ಕೆ.ಜಿ ತೂಕವುಳ್ಳ ಗೋಲ್ಡ್ ಫಿಶನ್ನು ಹಿಡಿದಿದ್ದರು. ಗೋಲ್ಡ್ ಫಿಶ್ ಮಾದರಿಯಲ್ಲಿ ಇಂಥಹ ದೈತ್ಯಕಾರದ ಮೀನು ಸಿಕ್ಕಿರುವುದು ಇದೇ ಮೊದಲು. ಆದುದರಿಂದ ಈ ಮೀನು ವಿಶ್ವ ದಾಖಲೆಯನ್ನು ಮುರಿಯಬಹುದು ಎಂದು ವರದಿ ತಿಳಿಸಿದೆ.