ಲಂಡನ್: ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಮಂತ್ರಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆಯೇ? ಇಂಥ ಒಂದು ಪ್ರಶ್ನೆ ಚರ್ಚೆಗೆ ಬಂದಿದೆ.
ಶುಕ್ರವಾರ ಪ್ರಕಟಗೊಂಡ ಎರಡು ಉಪ-ಚುನಾವಣೆಗಳಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ.
ಹೀಗಾಗಿ, ಅವರು ಹುದ್ದೆಯಿಂದ ನಿರ್ಗಮಿಸಬೇಕು ಎಂಬ ಆಗ್ರಹ ಕೇಳಿಬರುವ ಸಾಧ್ಯತೆಯಿದೆ. ಈ ಅಂಶಗಳನ್ನೆಲ್ಲ ತಳ್ಳಿ ಹಾಕಿದ್ದಾರೆ ಬೋರಿಸ್ ಜಾನ್ಸನ್. ರುವಾಂಡ ರಾಜಧಾನಿ ಕಿಗಾಲಿಯಲ್ಲಿ ಕಾಮನ್‌ವೆಲ್ತ್ ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸಿದ ಮಾತನಾಡಿದ ಅವರು, “ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾದದ್ದು ಹೌದು.
ಇದರ ಹೊರತಾಗಿಯೂ ಸರ್ಕಾರ ಮಾಡಬೇಕಾದ ಹಲವು ಕೆಲಸಗಳಿವೆ. ಸರ್ಕಾರ ತನ್ನ ಕರ್ತವ್ಯ ಮುಂದುವರಿಸಲಿದೆ. ಜನರ ತೀರ್ಮಾನವನ್ನು ಗೌರವಿಸುತ್ತೇವೆ’ ಎಂದಿದ್ದಾರೆ.
ಸೋಲಿನ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಒಲಿವರ್ ಡಾಡೆನ್ ರಾಜೀನಾಮೆ ನೀಡಿದ್ದಾರೆ ಮತ್ತು ಹಿನ್ನಡೆಯ ಹೊಣೆ ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ.
ಮತ್ತೆ ರಿಷಿ ಸುನಕ್ ಹೆಸರು:
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಬ್ರಿಟನ್ ಹಣಕಾಸು ಸಚಿವ, ಇನ್ಫೋಸಿಸ್ ಸಂಸ್ಥಾಪಕ ಡಾ.ಎನ್.ಆರ್.ನಾರಾಯಣಮೂರ್ತಿಯವರ ಅಳಿಯ ರಿಷಿ ಸುನಕ್ ಮತ್ತೆ ಪ್ರಧಾನಿ ಹುದ್ದೆಗೆ ಏರಬಹುದು ಎಂಬ ಲೆಕ್ಕಾಚಾರಗಳೂ ಆರಂಭವಾಗಿವೆ. ಸಮೀಕ್ಷೆಯೊಂದರ ಪ್ರಕಾರ ಮೂರು ತಿಂಗಳ ಹಿಂದೆ ಅವರಿಗೆ ಶೇ.40 ಮಂದಿ ಬೆಂಬಲ ಸೂಚಿಸಿದ್ದರೆ, ತಾಜಾ ಸಮೀಕ್ಷೆಯಲ್ಲಿ ಅವರಿಗೆ ಕೇವಲ ಶೇ.5 ಮಂದಿ ಮಾತ್ರ ಸಮ್ಮತಿ ಸೂಚಿಸಿದ್ದಾರೆ.