ಲಂಡನ್: ಕೋವಿಡ್ ಭೀತಿಯಿಂದ ಸ್ಥಗಿತಗೊಳಿಸಲಾಗಿದ್ದ ವಿಮಾನಯಾನವನ್ನು ಪುನರಾರಂಭಿಸಲು ಬ್ರಿಟನ್ ಉದ್ದೇಶಿಸಿರುವಂತೆಯೇ, ವಿಮಾನಯಾನ ಕಂಪೆನಿಗಳು ಮತ್ತು ವಿಮಾನ ನಿಲ್ದಾಣಗಳಿಗೆ ಅದು ಸುರಕ್ಷತೆ ಕುರಿತ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.
ಇದರಿಂದ ಕೋವಿಡ್ ಹರಡುವಿಕೆಯನ್ನು ಸಾಧ್ಯವಾದಷ್ಟೂ ತಗ್ಗಿಸುವುದು ಮತ್ತು ಕ್ವಾರಂಟೈನ್ ರಹಿತ ವಿಮಾನಯಾನದ ಉದ್ದೇಶ ಹೊಂದಲಾಗಿದೆ.
ಸುರಕ್ಷತೆ ಸೂತ್ರಗಳನ್ವಯ ಇನ್ನು ಬ್ರಿಟನ್‌ನಲ್ಲಿ ವಿಮಾನದಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ವಿಮಾನಯಾನ ಸಿಬಂದಿಗಳು, ವಿಮಾನ ನಿಲ್ದಾಣದ ಸಿಬಂದಿಗಳು ಮಾಸ್ಕ್ ಹಾಕುವುದು ಕಡ್ಡಾಯವಾಗಿದೆ. ಇದರೊಂದಿಗೆ ಚೆಕ್ ಇನ್ ವೇಳೆ ಎಲ್ಲ ಲಗೇಜ್‌ಗಳನ್ನು, ಹ್ಯಾಂಡ್‌ಬ್ಯಾಗ್‌ಗಳನ್ನು ವಿಮಾನದಲ್ಲಿರುವ ವೇಳೆ ಕೈಯಲ್ಲೇ ಹಿಡಿದುಕೊಳ್ಳುವಷ್ಟೇ ಗಾತ್ರದ್ದು ತರುವಂತೆ ಸೂಚಿಸಲಾಗಿದೆ ಅಥವಾ ವಿಮಾನಯಾನದ ವೇಳೆ ಲಗೇಜನ್ನು ಕೈಯಲ್ಲೇ ಹಿಡಿದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸಾರಿಗೆ ಸಚಿವಾಲಯ ಹೇಳಿದೆ.
ಕೋವಿಡ್ ಭೀತಿಯ ಬಳಿಕ ಬ್ರಿಟನ್ ಹೊರಗಡೆ ಅತಿ ಕಡಿಮೆ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು. ಈಗ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜುಲೈ ವೇಳೆಗೆ ತುಸು ವ್ಯವಹಾರ ನಡೆಯಬಹುದು ಎಂಬ ಆಶಯವನ್ನು ವಿಮಾನಯಾನ ಕಂಪೆನಿಗಳು ವ್ಯಕ್ತಪಡಿಸಿವೆ. ಆದರೆ ಸದ್ಯ ಬ್ರಿಟನ್‌ನ ಹೊಸ ನಿಯಮಗಳು ವಿದೇಶಗಳಿಂದ ಬರುವವರಿಗೆ 14 ದಿನದ ಕ್ವಾರಂಟೈನ್ ಅನ್ನು ಇಲ್ಲವಾಗಿಸಬಹುದೇ? ಇದ ರಿಂದ ದೇಶದಲ್ಲಿ ಮತ್ತೂಂದು ಸುತ್ತಿನ ಕೋವಿಡ್ ಸೋಂಕು ಹರಡುವ ಭೀತಿ ಸೃಷ್ಟಿಯಾಗಬಹುದೇ ಎಂಬ ಅನುಮಾನವೂ ಇದೆ.
ಇದೇ ವೇಳೆ ಕಡಿಮೆ ಕೋವಿಡ್ ಪ್ರಕರಣಗಳುಳ್ಳ ದೇಶಗಳೊಂದಿಗೆ ವಾಯುಯಾನ ಪುನಃಸ್ಥಾಪನೆಗೆ ಯತ್ನಿಸಲಾಗುತ್ತಿದೆ ಎಂದು ಬ್ರಿಟನ್ ಹೇಳಿದೆ. ವಿಮಾನಯಾನ ಶುರುಮಾಡುವುದರಿಂದ ಹೆಚ್ಚಿನ ಉದ್ಯೋಗ ನಷ್ಟ ತಡೆಯಬಹುದಾಗಿದ್ದು, ಪ್ರವಾಸಿಗರ ಬೇಡಿಕೆಯನ್ನೂ ಪೂರೈಸಬಹುದು ಎಂದು ಉದ್ಯಮ ವಲಯ ಅಭಿಪ್ರಾಯಪಟ್ಟಿದೆ. ಬ್ರಿಟನ್ ಸಹಿತ ಐರೋಪ್ಯ ಒಕ್ಕೂಟದ ದೇಶಗಳಲ್ಲಿ ಈಗ ರಜಾ ದಿನವಾಗಿದ್ದು ಪ್ರವಾಸಕ್ಕೆ ಅನುವು ಮಾಡಲು ಹೆಚ್ಚಿನ ಬೇಡಿಕೆ ಇದೆ.
ವಿಮಾನಯಾನ ಉದ್ಯಮ ಪುನರ್‌ಸ್ಥಾಪನೆಗೆ ನಾವು ನೋಡುತ್ತಿದ್ದು, ಇದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಜತೆಗೆ ಹೆಚ್ಚಿನ ಸುರಕ್ಷತೆ ಕ್ರಮ ಗಳನ್ನು ಕೈಗೊಂಡಿದ್ದೇವೆ ಎಂದು ಬ್ರಿಟನ್ ಸಾರಿಗೆ ಸಚಿವ ಗ್ರಾಂಟ್ ಶಾಪಾಸ್ ಹೇಳಿದ್ದಾರೆ. ಬ್ರಿಟನ್‌ನ ಪ್ರಮುಖ ವಿಮಾನ ಯಾನ ಕಂಪೆನಿ ಗಳಾದ ಈಸಿಜೆಟ್, ರೈನಾಯರ್, ಬ್ರಿಟಿಷ್ ಏರ್ ವೇಸ್‌ಗಳು ಪ್ರಯಾಣಿಕರು ಮುಖಕ್ಕೆ ಸುರಕ್ಷಾ ಸಾಧನಗಳನ್ನು ಹಾಕಿಕೊಳ್ಳಬೇಕು ಎಂದಿವೆ.
ಹೆಚ್ಚಿನ ಬ್ಯಾಗುಗಳನ್ನು ವಿಮಾನ ಯಾನದ ವೇಳೆ ಕೈಯಲ್ಲೇ ಹಿಡಿದುಕೊಳ್ಳಬೇಕು ಎನ್ನುವ ನಿಯಮ ಪ್ರಯಾಣಿಕರಿಗೆ ಸಮಸ್ಯೆ ಸೃಷ್ಟಿಸಬಹುದು. ಅಲ್ಲದೇ ಕೆಲವೊಂದು ಕಡಿಮೆ ದರಕ್ಕೆ ವಿಮಾನಯಾನ ಸೌಕರ್ಯ ಕಲ್ಪಿಸುವ ಕಂಪೆನಿಗಳು ಕೈಯಲ್ಲೇ ಬ್ಯಾಗು ಹಿಡಿದಿದ್ದಕ್ಕಾಗಿ ಹೆಚ್ಚವರಿ ದರ ವಸೂಲು ಮಾಡಬಹುದು ಎಂದು ಹೇಳಲಾಗಿದೆ.