ಬೀದರ: ಸರ್ಕಾರಿ ಪದವಿ ಕಾಲೇಜುಗಳ ಅಧ್ಯಾಪಕರಿಗೆ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ ಆಗ್ರಹಿಸಿದೆ.
ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಿಯೋಗ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಿಎಂಗೆ ಬರೆದ ಮನವಿ ಪತ್ರವನ್ನು ಉಪ ವಿಭಾಗಾಧಿಕಾರಿಗೆ ಸಲ್ಲಿಸಿದರು.
ಕೇಂದ್ರ ಸರ್ಕಾರ 2004ರಿಂದ ಹಾಗೂ ರಾಜ್ಯ ಸರ್ಕಾರ 2006ರ ಏಪ್ರಿಲ್ ನಂತರ ಸೇವೆಗೆ ಸೇರಿದ ಅಧ್ಯಾಪಕರಿಗೆ ನಿಶ್ಚಿತ ಪಿಂಚಣಿ ನೀಡದ ಹಾಗೂ ನಿವೃತ್ತಿ ನಂತರ ಹಣಕಾಸು ಸಮಸ್ಯೆಗೆ ಸಿಲುಕಿಸುವ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಒಂದೇ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುವ ಅಧ್ಯಾಪಕರನ್ನು ಹಳೆಯ ಹಾಗೂ ಹೊಸ ಪಿಂಚಣಿ ಯೋಜನೆ ಅಧ್ಯಾಪಕರೆಂದು ವರ್ಗೀಕರಿಸಿ, ತಾರತಮ್ಯ ಮಾಡಲಾಗಿದೆ ಎಂದು ದೂರಿರುವ ನಿಯೋಗ, ರಾಜಸ್ತಾನ್ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಇದೇ ಬಜೆಟ್‌ನಲ್ಲಿ ಹೊಸ ಪಿಂಚಣಿ ಯೋಜನೆ ರದ್ದುಪಡಿಸಬೇಕು. ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರಿಸುವ ಘೋಷಣೆ ಮಾಡಬೇಕು. ಹೊಸ ಪಿಂಚಣಿ ಯೋಜನೆ ಭಾಗವಾಗಿ ಅಧ್ಯಾಪಕರ ಮೂಲ ವೇತನ ಹಾಗೂ ತುಟ್ಟಿ ಭತ್ಯೆಯಲ್ಲಿ ಶೇ. 10 ರಷ್ಟನ್ನು ವಂತಿಗೆ ರೂಪದಲ್ಲಿ ಪಡೆಯುತ್ತಿರುವುದನ್ನು ಸ್ಥಗಿತಗೊಳಿಸಬೇಕು. ಈಗಾಗಲೇ ಜಮಾ ಆಗಿರುವ ಹೊಸ ಪಿಂಚಣಿ ಯೋಜನೆ ಹಣವನ್ನು ಅಧ್ಯಾಪಕರಿಗೆ ಬಡ್ಡಿ ಸಮೇತ ಹಿಂದಿರುಗಿಸಬೇಕು. ಸಂಪನ್ಮೂಲ ಕ್ರೋಡೀಕರಿಸುವ ನೆಪದಲ್ಲಿ ಅಧ್ಯಾಪಕರ ಪಿಂಚಣಿ ಹಾಗೂ ನಿವೃತ್ತಿ ನಂತರದ ಸೌಲಭ್ಯ ಕಡಿತಗೊಳಿಸುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಪ್ರೊ| ಲಕ್ಷ್ಮಣ ಕಾಂಬಳೆ, ಕಾರ್ಯದರ್ಶಿ ಡಾ| ಸಂಜೀವಕುಮಾರ ತಾಂದಳೆ, ಸಂಘಟನಾ ಕಾರ್ಯದರ್ಶಿ ಡಾ| ಗಿರಿಜಾ ಮಂಗಳಗಟ್ಟಿ, ಪ್ರೊ| ಸಂಜೀವಕುಮಾರ ಅಪ್ಪೆ, ಪ್ರೊ| ಶ್ರೀನಿವಾಸ ರೆಡ್ಡಿ, ಪ್ರೊ| ಸುಮನ್ ಸಿಂಧೆ, ಡಾ| ಉಮಾಕಾಂತ ಜಾಧವ್ ನಿಯೋಗದಲ್ಲಿ ಇದ್ದರು.