ಹೊಸದಿಲ್ಲಿ : ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಶುಕ್ರವಾರ ಆಗ್ರಹಿಸಿದ್ದಾರೆ.
ಪಟ್ರೋಲ್ ಮತ್ತು ಡೀಸೆಲ್ ದರಗಳು ದಿನೇ ದಿನೇ ನಾಗಾಲೋಟದಿಂದ ಏರುತ್ತಿರುವುದಕ್ಕೆ ಜನರು ರೋಸಿ ಹೋಗಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ರಾಹುಲ್ ಅವರ ಕಾಂಗ್ರೆಸ್ ಪಕ್ಷ ಈ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೇರುತ್ತಿರುವ ವಿಪರೀತ ತೆರಿಗೆಗಳೇ ಕಾರಣ ಎಂದು ಹೇಳಿತ್ತು.
ಕೇಂದ್ರ ಸರಕಾ ನಿನ್ನೆಯಷ್ಟೇ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಲೀಟರಿಗೆ 2.50 ರೂ ಇಳಿಸಿದ ಬೆನ್ನಿಗೇ ರಾಹುಲ್ ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಂತೆ ಆಗ್ರಹಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕೇಂದ್ರ ಸರಕಾರ 13 ಲಕ್ಷ ಕೋಟಿ ರೂ. ಲಾಭ ಹೊಡೆಯುತ್ತಿದೆ ಎಂದು ರಾಹುಲ್ ಆರೋಪಿಸಿದರು.
ಕೇಂದ್ರ ಸರಕಾರ ನಿನ್ನೆ ಪೆಟ್ರೋಲ್, ಡೀಸೆಲ್ ಮೇಲಿನ ಬೆಲೆಯನ್ನು ಇಳಿಸಿರುವುದು ಅತ್ಯಲ್ಪ ಎಂದು ರಾಹಲ್ ಟೀಕಿಸಿದರು.
ಐದು ರಾಜ್ಯಗಳಲ್ಲಿ ಸದ್ಯವೇ ಎದುರಾಗಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ಮೋದಿ ಸರಕಾರ ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಿರುವ ಚುನಾವಣಾ ಗಿಮಿಕ್ ಆಗಿದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್‌ಜೇವಾಲ ಹೇಳಿದರು. ಸರಕಾರದ ಈ ಕ್ರಮವು ಜನರ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದ ಹಾಗೆ ಆಗಿದೆ ಎಂದವರು ಲೇವಡಿ ಮಾಡಿದರು.