Advertisement

ವೈದ್ಯ ಪಿಜಿ ಕೋರ್ಸ್‌ ಆರಂಭಿಸಲು ಬ್ರಿಮ್ಸ್ ಸಿದ್ದತೆ

12:27 PM Oct 25, 2021 | Team Udayavani |

ಬೀದರ: ಕಲ್ಬುರ್ಗಿಯ ಜೀಮ್ಸ್‌ ವೈದ್ಯಕೀಯ ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದ ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳ ಆರಂಭಕ್ಕೆ ಅನುಮೋದನೆ ಸಿಗುತ್ತಿದ್ದಂತೆ ಇತ್ತ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್‌) ಸಹ ಪಿಜಿ ಕೋರ್ಸ್‌ ಆರಂಭಿಸಲು ಅಗತ್ಯ ಸಿದ್ಧತೆ ನಡೆಸಿದೆ.

Advertisement

ಭಾರತೀಯ ವೈದ್ಯಕೀಯ ಪರಿಷತ್‌ (ಎಂಸಿಐ) ಗ್ರೀನ್‌ ಸಿಗ್ನಲ್‌ ನೀಡಿದರೆ 2022ರ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗುವ ಸಾಧ್ಯತೆ ಇದೆ. ಹಲವು ಹೋರಾಟದ ಫಲವಾಗಿ 2007ರಲ್ಲಿ ಆರಂಭವಾಗಿರುವ ಬ್ರಿಮ್ಸ್‌ ಆರಂಭದಲ್ಲಿ ಶಾಶ್ವತ ಮಾನ್ಯತೆಗಾಗಿ ಪರದಾಡಿತ್ತು. ಸದ್ಯ ಸಂಸ್ಥೆಯಲ್ಲಿ ಎಂಬಿಬಿಎಸ್‌ ಕೋರ್ಸ್‌ಗಳು ಮಾತ್ರ ಇದ್ದು, ಈವರೆಗೆ 10 ಬ್ಯಾಚ್‌ಗಳು ಪದವಿ ಪೂರ್ಣಗೊಳಿಸಿ ಹೊರ ಹೋಗಿವೆ.

ಈಗ ಕಾಲೇಜು ಆರಂಭವಾಗಿ 14 ವರ್ಷಗಳ ಬಳಿಕ ಸ್ನಾತಕೋತ್ತರ ಕೋರ್ಸ್‌ ಗಳು ಪ್ರಾರಂಭವಾಗುವ ನಿರೀಕ್ಷೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಅಗತ್ಯ ಪ್ರಯತ್ನಗಳನ್ನು ನಡೆಸಿರುವ ಬ್ರಿಮ್ಸ್‌ ಡಿಸೆಂಬರ್‌ನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದೆ. ಕೋವಿಡ್‌ ಆರ್ಥಿಕ ಮುಗ್ಗಟ್ಟಿನಿಂದಾಗಿ ರಾಜ್ಯದ ಯಾವುದೇ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ, ಪಕ್ಕದ ಕಲ್ಬುರ್ಗಿ ಬ್ರಿಮ್ಸ್‌ ಕಳೆದ ವರ್ಷವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಹೀಗಾಗಿ ಪ್ರಸಕ್ತ ವರ್ಷದಿಂದಲೇ ಕೋರ್ಸ್‌ ಶುರುವಿಗೆ ಎಂಸಿಐ ಒಪ್ಪಿಗೆ ನೀಡಿದೆ.

ಫೆಬ್ರವರಿ ವೇಳೆಗೆ ವೈದ್ಯಕೀಯ ಕೋರ್ಸ್‌ಗಳ ಪರೀಕ್ಷೆ ಮುಗಿಯಲಿವೆ. ಅದಕ್ಕೂ ಮುನ್ನವೇ ಬೀದರ ವೈದ್ಯ ಕಾಲೇಜು ಆಡಳಿತ ಮಂಡಳಿ ಸರ್ಕಾರದ ಮೂಲಕ ಎಂಎಸಿಗೆ ಪ್ರಸ್ತಾವನೆ ಸಲ್ಲಿಸಲಿದೆ. ನಿಯಮದಂತೆ ಪ್ರಸ್ತಾವನೆ ಸ್ವೀಕರಿಸಿದ ಒಂದು ತಿಂಗಳೊಳಗೆ ಎಂಸಿಐ ತಂಡ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಒಂದು ವೇಳೆ ಎಂಸಿಐನಿಂದ ಅನುಮತಿ ದೊರೆತರೆ 2022ರಲ್ಲೇ ಪ್ರವೇಶಾತಿ ಶುರುವಾಗಿ ತರಗತಿಗಳು ಆರಂಭವಾಗಬಹುದು.

­ಎರಡು ಪಿಜಿ ಕೋರ್ಸ್‌ಗೆ ತಯ್ನಾರಿ

Advertisement

ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನಲ್ಲಿ ಒಟ್ಟು ವಿಭಾಗಗಳಿದ್ದು, ಸದ್ಯ ಬ್ರಿಮ್ಸ್‌ನಲ್ಲಿ ಸ್ತ್ರೀರೋಗ ಹಾಗೂ ಮಕ್ಕಳ ರೋಗ ತಜ್ಞ ವಿಭಾಗದ ಪಿಜಿ ಕೋರ್ಸ್‌ ಆರಂಭಿಸಲು ತಯಾರಿ ನಡೆದಿವೆ. ಮುಖ್ಯವಾಗಿ ಕಾಲೇಜಿನಲ್ಲಿ ಮೂಲ ಸೌಲಭ್ಯ, ವೈದ್ಯಕೀಯ ಉಪಕರಣ, ಪ್ರಯೋಗಾಲಯಗಳು ಮತ್ತು ಬೋಧಕ ಸಿಬ್ಬಂದಿ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಲಭ್ಯ ಅನುದಾನದಲ್ಲಿಯೇ ಶೇ.95ರಷ್ಟು ಕೆಲಸಗಳು ಪೂರ್ಣಗೊಳಿಸಲಾಗಿದೆ. ಈವರೆಗೆ ಮೆಡಿಕಲ್‌ ಐಸಿಯು ಸೌಲಭ್ಯ ಇಲ್ಲವಾಗಿತ್ತು. ಇತ್ತಿಚೆಗೆ 7 ಹಾಸಿಗೆಗಳ ಐಸಿಯು ಘಟಕ ಸಹ ಕಾರ್ಯಾರಂಭ ಮಾಡಲಾಗಿದೆ.

ಇದನ್ನೂ ಓದಿ: ತೆಲಂಗಾಣ ಗಡಿಯಲ್ಲಿ ಎನ್ ಕೌಂಟರ್: ಮೂವರು ನಕ್ಸಲರನ್ನು ಹತ್ಯೆಗೈದ ಪೊಲೀಸರು

ಪಿಜಿ ಕೋರ್ಸ್‌ಗಳ ಆರಂಭದಿಂದ ಬ್ರಿಮ್ಸ್‌ಗೆ ಇನ್ನಷ್ಟು ಬಲ ಬಂದಂತಾಗಲಿದೆ ಮಾತ್ರವಲ್ಲ ಗಡಿ ಜಿಲ್ಲೆ ಬೀದರ ಶೈಕ್ಷಣಿಕವಾಗಿ ಬೆಳವಣಿಗೆ ಆಗಲಿದೆ ಮತ್ತು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹೆಚ್ಚಿನ ವೈದ್ಯಕೀಯ ಸೇವೆ ಸಿಗಲಿದೆ. ಜತೆಗೆ ಎಂಬಿಬಿಎಸ್‌ ಮುಗಿಸಿರುವ ಸ್ಥಳೀಯ ವಿದ್ಯಾರ್ಥಿಗಳು ಹೊರ ಜಿಲ್ಲೆ, ರಾಜ್ಯಗಳಿಗೆ ಹೋಗುವುದು ಸಹ ತಪ್ಪಲಿದೆ. ಪಿಜಿ ಕೋರ್ಸ್‌ಗಳ ಅನುಮತಿ ದೊರೆಯುವ ದಿಸೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಚುನಾಯಿತ ಪ್ರತಿನಿಧಿಗಳು ಬ್ರಿಮ್ಸ್‌ ಅಧಿಕಾರಿಗಳ ಪ್ರಯತ್ನಕ್ಕೆ ಕೈಜೋಡಿಸಬೇಕಿದೆ.

ಶೀಘ್ರ ಪ್ರಸ್ತಾವನೆ ಸಲ್ಲಿಕೆ ಬ್ರಿಮ್ಸ್‌ನಲ್ಲಿ ಸ್ತ್ರೀ ರೋಗ ಮತ್ತು ಮಕ್ಕಳ ತಜ್ಞ ವಿಭಾಗದ ಸ್ನಾಕೋತ್ತರ (ಪಿಜಿ) ಕೋರ್ಸ್‌ಗಳ ಆರಂಭ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಡಿಸೆಂಬರ್‌ನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಕ ಎಂಸಿಐಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅನುಮತಿ ದೊರೆತರೆ 2022ರ ಶೈಕ್ಷಣಿಕ ವರ್ಷದಿಂದಲೇ ತರಗತಿ ಆರಂಭಿಸಲಾಗುವುದು. -ಡಾ| ಚಂದ್ರಕಾಂತ ಚಿಲ್ಲರ್ಗಿ, ಬ್ರಿಮ್ಸ್‌ ನಿರ್ದೇಶಕ

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next