Advertisement

ಭಾಷಾ ಕೌಶಲ, ಕಂಪ್ಯೂಟರ್‌ ಜ್ಞಾನ ಕಲಿತರೆ ಉಜ್ವಲ ಭವಿಷ್ಯ

09:35 PM Sep 14, 2019 | Lakshmi GovindaRaju |

ಮೈಸೂರು: ಭಾಷಾ ಕೌಶಲ, ಕಂಪ್ಯೂಟರ್‌ ಜ್ಞಾನ ಹಾಗೂ ವಿಷಯ ತಜ್ಞತೆಯನ್ನು ನಾವು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಹೇಳಿದರು.

Advertisement

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮುಕ್ತಗಂಗೋತ್ರಿ ಆವರಣದಲ್ಲಿನ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕಿಂಗ್‌ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಅಧ್ಯಯನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ಯಾಂಕಿಂಗ್‌ ಕ್ಷೇತ್ರ: ಇಂದು ಬ್ಯಾಂಕಿಂಗ್‌ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಫ‌ುಲವಾದ ಅವಕಾಶಗಳಿವೆ. ಆದರೆ ನಮ್ಮಲ್ಲಿ ಅವಕಾಶ ಪಡೆದುಕೊಳ್ಳುವ ಕೌಶಲದ ಕೊರತೆ ಇದೆ. ನಮ್ಮಲ್ಲಿ ಬಹುತೇಕ ಮಂದಿ ಕನ್ನಡ ಭಾಷೆಯನ್ನು ಬಿಟ್ಟು ಇತರೆ ಭಾಷೆಯನ್ನು ಕಲಿಯಲು ಹಿಂಜರಿಯುತ್ತಿದ್ದಾರೆ. ಈ ಕಾರಣದಿಂದಾಗಿಯೇ ಬ್ಯಾಂಕಿಂಗ್‌ನಲ್ಲಿ ಉತ್ತರ ಭಾರತ ಮಂದಿಯೇ ಹೆ‌ಚ್ಚಾಗಿದ್ದಾರೆ. ಕನ್ನಡ ಭಾಷೆಯ ಜೊತೆಗೆ ಇತರೆ ಭಾಷಾ ಕೌಶಲವನ್ನು ಬೆಳೆಸಿಕೊಳ್ಳುವುದು ಸೂಕ್ತ ಎಂದರು.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ಭಾಷಾ ಕೌಶಲ, ಕಂಪ್ಯೂಟರ್‌ ಜ್ಞಾನ ಹಾಗೂ ವಿಷಯ ತಜ್ಞತೆಯನ್ನು ಬೆಳೆಸಿಕೊಂಡರೆ, ಯಾವುದೇ ಕೆಲಸವನ್ನು ಸುಲಭವಾಗಿ ಗಿಟ್ಟಿಸಿಕೊಳ್ಳಬಹುದು. ಜೊತೆಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸೌಲಭ್ಯ: ಕೆನರಾ ಬ್ಯಾಂಕ್‌ನ ಜನರಲ್‌ ಮ್ಯಾನೇಜರ್‌ ಡಾ.ಎಸ್‌.ಟಿ. ರಾಮಚಂದ್ರ ಮಾತನಾಡಿ, ಬ್ಯಾಂಕಿಂಗ್‌ ವಲಯಗಳಿಗೆ ರಾಜ್ಯದ ಯುವಕರು ವಿಮುಖವಾಗಿದ್ದು, ಹೆಚ್ಚು ಜನರು ಈ ಕ್ಷೇತ್ರಕ್ಕೆ ಕೆಲಸಕ್ಕಾಗಿ ಬರುತ್ತಿಲ್ಲ. ಪರಿಣಾಮ ಈ ಕ್ಷೇತ್ರದಲ್ಲಿನ ಉದ್ಯೋಗವಕಾಶಗಳು ಉತ್ತರ ಭಾರತದವರ ಪಾಲಾಗುತ್ತಿದೆ. ಈ ಕ್ಷೇತ್ರಕ್ಕೆ ಬಂದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಉತ್ತಮ ಸಂಬಳ, ಉದ್ಯೋಗ ಭದ್ರತೆ ಸೇರಿದಂತೆ ಎಲ್ಲಾ ಸೌಲಭ್ಯಗಳು ಇರುತ್ತದೆ.

Advertisement

ಆದರೆ ಎಲ್ಲರೂ ಐಟಿ, ಬಿಟಿ ಎಂದು ಖಾಸಗಿ ಕಂಪನಿಗಳ ಬಾಗಿಲು ತಟ್ಟುತ್ತಿದ್ದಾರೆ. ಆದರೆ ಆ ಉದ್ಯೋಗದಲ್ಲಿ ಭದ್ರತೆ ಇದೆಯೇ ಎಂಬುದನ್ನು ಅರಿಯಬೇಕು ಎಂದು ಹೇಳಿದರು. ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಹೆಚ್ಚಿನವರು ಉತ್ತರ ಭಾರತದ ಜಾರ್ಖಂಡ್‌, ಬಿಹಾರ ಹಾಗೂ ಉತ್ತರ ಪ್ರದೇಶದವರೇ ಇರುತ್ತಾರೆ. 2 ಸಾವಿರ ಮಂದಿಯಲ್ಲಿ ಕರ್ನಾಕದವರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇರುವುದು ಬೇಸರದ ಸಂಗತಿ ಎಂದರು.

ಮಾಹಿತಿ: ಬ್ಯಾಂಕಿಂಗ್‌ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದು ಸುಲಭ. ಇದಕ್ಕೆ ಇಂಗ್ಲಿಷ್‌ ಭಾಷೆ ಅನಿವಾರ್ಯವಾಗಿದ್ದು, ಕೆಲಸ ದೇಶದ ಯಾವ ಭಾಗದಲ್ಲಿ ಸಿಕ್ಕರೂ ಹೋಗುತ್ತೇನೆ ಎಂಬ ಮನೋಭಾವ ಇರಬೇಕು. ಅದೃಷ್ಟವನ್ನು ನಂಬದೇ, ಭಾಷಾ ಕೌಶಲವನ್ನು ಬೆಳೆಸಿಕೊಳ್ಳಬೇಕು. ಸತತ ಪ್ರಯತ್ನ, ಶ್ರಮ, ಶ್ರದ್ಧೆ ಹಾಗೂ ಗುರಿ ಇದ್ದರೆ ನಾವು ಯಶಸ್ಸುಗಳಿಸಲು ಸಾಧ್ಯವಾಗುತ್ತದೆ.

ಇದರ ಜೊತೆಗೆ ನಮಗೆ ಕಂಪ್ಯೂಟರ್‌ ಜ್ಞಾನವೂ ಅತ್ಯವಶ್ಯಕವಾಗಿದೆ. ಮೊಬೈಲ್‌ ಅತಿಯಾದ ಬಳಕೆಯನ್ನು ಬಿಟ್ಟು ಗೂಗಲ್‌ನಲ್ಲಿ ಮಾಹಿತಿ ಹುಡುಕುವ ಕೆಲಸ ಮಾಡಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕರಾಮುವಿ ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ್‌, ಕುಲಸಚಿವ ಪ್ರೊ.ಬಿ. ರಮೇಶ್‌, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next