ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಹೆಚ್ಚು ಪ್ರಖರ ಬೆಳಕು ಹೊರಹಾಕುವ, ಕಣ್ಣುಕುಕ್ಕುವ ದೀಪಗಳನ್ನು ಅಳವಡಿಸಿರುವ ಹಾಗೂ ಹೈ ಬೀಮ್ ಬಲ್ಬ್ ಗಳನ್ನು ಬಳಸಿರುವ ವಾಹನಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಜೂ.15ರಿಂದ ಜು.23ರ ವರೆಗೆ ಒಟ್ಟು 1,170 ಪ್ರಕರಣಗಳನ್ನು ದಾಖಲಿಸಿ 5,86,500 ರೂ. ದಂಡ ವಿಧಿಸಲಾಗಿದೆ.
ಸಾರ್ವಜನಿಕರು ತಮ್ಮ ಮೋಟಾರು ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆ-1989ರಲ್ಲಿ ಸೂಚಿಸಿರುವ ಮಾನದಂಡದಂತೆ ನಿಗದಿ ಪಡಿಸಿದ ಹೆಡ್‌ಲೈಟ್‌ಗಳನ್ನು ಮಾತ್ರ ಅಳವಡಿಸಬೇಕು, ಹೆಚ್ಚುವರಿಯಾಗಿ ಆಲಂಕಾರಿಕ ದೀಪ ಹಾಗೂ ಪ್ರಖರ ಬೆಳಕು ಸೂಸುವ ಮತ್ತು ಕಣ್ಣಿಗೆ ಕುಕ್ಕುವ ಎಲ್.ಇ.ಡಿ. ಬಲ್ಬ್ ಗಳನ್ನು ಅಳವಡಿಸುವಂತಿಲ್ಲ.
ಮಂಗಳೂರು ನಗರ ಕಮಿಷನರೆಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸಹಿತ ಎಲ್ಲ ರಸ್ತೆಗಳಲ್ಲಿ ಬೀದಿದೀಪಗಳು ಇರುವೆಡೆ ಯಾವುದೇ ಕಾರಣಕ್ಕೂ ಹೈಬೀಮ್ ಬೆಳಕಿನೊಂದಿಗೆ ವಾಹನಗಳನ್ನು ಚಲಾಯಿಸುವಂತಿಲ್ಲ.
ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳು 1 ಅಥವಾ 2 ಹೆಡ್ ಲೈಟ್ ಗಳನ್ನು ಮಾತ್ರ ಹೊಂದಿರಬೇಕು. 4 ಚಕ್ರ ಮತ್ತು ಹೆಚ್ಚಿನ ಚಕ್ರದ ವಾಹನಗಳು 2 ಅಥವಾ 4 ಹೆಡ್ ಲೈಟ್‌ಗಳನ್ನು ಮಾತ್ರ ಹೊಂದಿರಬೇಕು. ವಾಹನಗಳ ಹೆಡ್‌ಲೈಟ್‌ಗಳಿಂದ ಹೊರ ಹೊಮ್ಮವ ಬೆಳಕು ಶಾಶ್ವತವಾಗಿ ಕೆಳಮುಖವಾಗಿ ಹೆಡ್‌ಲೈಟ್ ನಿಂದ 8 ಮೀಟರ್ ದೂರದ ವಾಹನದಲ್ಲಿ ಕುಳಿತಿರುವ ವ್ಯಕ್ತಿಯ ಕಣ್ಣಿಗೆ ಪ್ರಖರವಾಗಿರತಕ್ಕದ್ದಲ್ಲ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.