Advertisement

ಮಳೆಗಾಲದಲ್ಲಿ ದ್ವೀಪವಾಗುವ ಸಾಂತ್ಯ

10:06 AM May 02, 2022 | Team Udayavani |

ಕಿನ್ಯಾ: ಮಳೆಗಾಲ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಪ್ರತೀ ವರ್ಷದಂತೆ ಸಾಂತ್ಯ ಭಾಗದ ಜನರಿಗೆ ಈ ಬಾರಿಯೂ ಸುತ್ತು ಬಳಸಿ ಸಾಗುವ ಸ್ಥಿತಿ ನಿರ್ಮಾಣವಾಗಲಿದೆ.

Advertisement

ಕಿನ್ಯಾ – ಸಾಂತ್ಯ ಸಂಪರ್ಕಿಸುವ ರಸ್ತೆಗೆ ಮಾಧವಪುರ ಹೊಳೆಗೆ ಸೇತುವೆ ನಿರ್ಮಾಣವಾ ದರೆ ಈ ಸಮಸ್ಯೆ ಪರಿಹಾರವಾಗಲಿದೆ. ಆದರೆ ಈ ಸಮಸ್ಯೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮಳೆಗಾಲದಲ್ಲಿ ದ್ವೀಪ ಪ್ರದೇಶವಾಗುವ ಸಾಂತ್ಯದ ಮಾಧವಪುರ ಬಳಿ ಬೇಸಗೆ ಕಾಲದಲ್ಲಿ ತಾತ್ಕಾಲಿಕ ರಸ್ತೆ ಮತ್ತು ಸೇತುವೆ ನಿರ್ಮಿಸಲಾಗುತ್ತಿದೆ. ಮಳೆಗಾಲದಲ್ಲಿ ಇವು ನೀರುಪಾಲಾಗುತ್ತಿದ್ದು, ಹಾಗಾಗಿ ಮೂರು ಕಿ.ಮೀ. ಕ್ರಮಿಸುವ ರಸ್ತೆಯ ಬದಲು 10 ಕಿ.ಮೀ. ದೂರ ಸಂಚರಿಸಿ ಜನರು ಸಾಂತ್ಯಕ್ಕೆ ತಲುಪಬೇಕಿದೆ.

ಮಾಧವಪುರದಿಂದ ಸಾಂತ್ಯ ಮಾರ್ಗವಾಗಿ ಕೇರಳ ಗಡಿಪ್ರದೇಶವಾದ ನೆತ್ತಿಲಪದವು ಸಂಪರ್ಕಿಸುವ ರಸ್ತೆಯನ್ನು ಸ್ಥಳೀಯ ಕೃಷಿಕರು ತಮ್ಮ ಸ್ವಂತ ಜಾಗವನ್ನು ಬಿಟ್ಟುಕೊಟ್ಟು ಕಚ್ಚಾ ರಸ್ತೆ ನಿರ್ಮಾಣ ಮಾಡಿ 5 ವರ್ಷಗಳಿಂದ ಸಾಂತ್ಯ ಸಂಪರ್ಕಿಸುವ ಮಾಧವಪುರ ಬಳಿ ಹೊಳೆಗೆ ಸೇತುವೆ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿಗೆ ಬೇಡಿಕೆ ಇಟ್ಟರೂ ಈವರೆಗೆ ಈಡೇರಿಲ್ಲ.

2 ಬೇಡಿಕೆಗಳಲ್ಲಿ 1 ಈಡೇರಿಕೆ

ಕಿನ್ಯದಿಂದ ಸಾಂತ್ಯ ಸಂಪರ್ಕಿಸುವ ರಸ್ತೆಯ ಮಾಧವಪುರದ ಬಳಿ ಹೊಳೆಗೆ ಸೇತುವೆ ನಿರ್ಮಾಣ, ಕಿನ್ಯಾ ಪಂಚಾಯತ್‌ ಹಿಂಭಾಗದ ರಹಮತ್‌ ನಗರದಿಂದ ಕುರಿಯ ಸಂಪರ್ಕಿಸುವ ರಸ್ತೆಯಲ್ಲಿಯೂ ಸೇತುವೆ ನಿರ್ಮಾಣಕ್ಕೆ ಬೇಡಿಕೆಯಿದೆ. ಇದೀಗ ಒಂದು ಕೋಟಿ ರೂ. ವೆಚ್ಚದಲ್ಲಿ ಕುರಿಯದಲ್ಲಿ ಸೇತುವೆ ಕಾಮಗಾರಿ ಆರಂಭಗೊಂಡಿದೆ. ಇದು ಕಿನ್ಯದಿಂದ ಕಜೆ, ನಾಟೆಕಲ್‌, ಬೆಳರಿಂಗೆಗೆ ಸಂಪರ್ಕ ಕಲ್ಪಿಸಲಿದ್ದು, ಈ ವರ್ಷದ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ ಸಾಂತ್ಯ ಸೇತುವೆ ಬೇಡಿಕೆ ಮರೀಚಿಕೆಯಾಗಿ ಉಳಿದಿದೆ.

Advertisement

ಕಾಲು ಸಂಕ ಕುಸಿತದ ಭೀತಿ

ಕೃಷಿಕರೇ ಹೆಚ್ಚಾಗಿರುವ ಸಾಂತ್ಯಕ್ಕೆ ಮಾಧವಪುರದಿಂದ ಸಂಪರ್ಕಿಸಲು ಹಲವಾರು ವರ್ಷಗಳ ಹಿಂದೆ ಕಾಲು ಸಂಕ ನಿರ್ಮಾಣ ಮಾಡಿದ್ದು, ಅದು ಕುಸಿತದ ಭೀತಿಯಲ್ಲಿದೆ. ಮಳೆಗಾಲದಲ್ಲಿ ವಿದ್ಯಾರ್ಥಿಗಳು, ಆರೋಗ್ಯ, ಪೋಸ್ಟ್‌ ಆಫೀಸ್‌ ಸಹಿತ ದೈನಂದಿನ ಕಾರ್ಯಗಳಿಗೆ ವಾಹನ ಇಲ್ಲದವರು ಇದೇ ಕಾಲುಸಂಕದ ಮೂಲಕ ನಡೆದುಕೊಂಡು ಮುಖ್ಯ ರಸ್ತೆ ಸಂಪರ್ಕಿಸಬೇಕಾಗಿದ್ದು, ವಾಹನ ವಿದ್ದವರು ನೆತ್ತಿಲಪದವು – ಮಂಜೇಶ್ವರ – ಗೇರುಕಟ್ಟೆ ರಸ್ತೆಯಾಗಿ ಮಂಗಳೂರು ತಲುಪುವ ಸ್ಥಿತಿಯಿದೆ. ಸಾಂತ್ಯ ಭಾಗದ ಹೆಚ್ಚಿನ ಕೃಷಿಕರು ವಲಸೆ ಹೋಗಿ ಮುಖ್ಯ ರಸ್ತೆ ಸಂಪರ್ಕಿಸುವ ಪ್ರದೇಶದಲ್ಲಿ ಮನೆ ಕಟ್ಟಿ ವಾಸಮಾಡುತ್ತಿದ್ದಾರೆ, ಬಡ ಕೃಷಿಕರು ಮಾತ್ರ ಪರದಾಡುವ ಸ್ಥಿತಿಯಿದೆ.

ತಾತ್ಕಾಲಿಕ ಸೇತುವೆ

ಸ್ಥಳೀಯ ನಿವಾಸಿಗಳು ಸೇರಿಕೊಂಡು ಈ ಬಾರಿಯ ಬೇಸಗೆಯಲ್ಲಿ ರಸ್ತೆ ಸಂಪರ್ಕ ಕಲ್ಪಿಸಲು ಈ ಹೊಳೆಗೆ 1.5 ಲಕ್ಷ ರೂ. ಖರ್ಚು ಮಾಡಿ ತಾತ್ಕಾಲಿಕ ಸೇತುವೆ ನಿರ್ಮಿಸಿ ದ್ವಿಚಕ್ರ ವಾಹನ ಮತ್ತು ಕಾರು ಹೋಗಲು ಅನುಕೂಲ ಮಾಡಿದ್ದರು. ಇದೀಗ ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗುವ ಭೀತಿಯಲ್ಲಿದೆ. ಜೆಸಿಬಿ ಕಾರ್ಯಾಚರಣೆಗೆ ಸುಮಾರು 50 ಸಾವಿರ ರೂ. ವೆಚ್ಚ ಕೂಡ ನಷ್ಟವಾಗಲಿದೆ. ಸೇತುವೆ ಕಾಮಗಾರಿಗೆ ತಂದಿರುವ ಪೈಪ್‌ ಗಳಿಗೆ ಸುಮಾರು 1 ಲಕ್ಷ ರೂ. ವೆಚ್ಚ ತಗುಲಿದೆ. ಉಳಿದಂತೆ ಶ್ರಮದಾನದ ಮೂಲಕವೇ ಸೇತುವೆ ನಿರ್ಮಿಸಲಾಗಿದೆ.

ಸೇತುವೆ ನಿರ್ಮಾಣಕ್ಕೆ ಆದ್ಯತೆ

ಕಿನ್ಯಾ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿದ್ದು, ಆದ್ಯತೆಯ ಮೇರೆಗೆ ಕಜೆ, ಬೆಳರಿಂಗೆ ಮಾರ್ಗವಾಗಿ ನಾಟೆಕಲ್‌ ಸಂಪರ್ಕದ ಕುರಿಯ ಸಂಪರ್ಕ ಸೇತುವೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಎರಡನೇ ಬೇಡಿಕೆಯಾಗಿರುವ ಸಾಂತ್ಯ ಸಂಪರ್ಕಿಸುವ ಹೊಳೆಗೆ ಸೇತುವೆ ನಿರ್ಮಾಣಕ್ಕೆ ಸ್ಥಳೀಯರು, ಪಂಚಾಯುತ್‌ ಮನವಿ ನೀಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವ ಮೂಲಕ ಮಾಧವಪುರದ ಸಾಂತ್ಯ ಸಂಪರ್ಕಿಸುವ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. –ಯು.ಟಿ. ಖಾದರ್‌, ಶಾಸಕರು, ಮಂಗಳೂರು ವಿಧಾನಸಭೆ ಕ್ಷೇತ್ರ

ವಸಂತ ಎನ್‌. ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next