ಕೊಳ್ಳೇಗಾಲ: ತಾಲೂಕಿನ ದಾಸನಪುರ ಬಳಿಯ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯಲ್ಲಿ ತಾತ್ಕಾಲಿಕವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. 5.68 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಿದ್ದರೂ ಸಂಚಾರಕ್ಕೆ ಅನುಮತಿ ನೀಡದಿದ್ದರಿಂದ ಜನರು ಹಲವು ಕಿ.ಮೀ. ರಸ್ತೆಯಲ್ಲಿ ಸುತ್ತಾಡಿ ತಮ್ಮ ಊರುಗಳನ್ನು ಸೇರಬೇಕಿತ್ತು. ನದಿ ಮಾರ್ಗ ಮೂಲಕ ತೆರಳಬೇಕಾದರೆ ತೆಪ್ಪವನ್ನು ಬಳಸಬೇಕಿತ್ತು. ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಸಂಚರಿಸುತ್ತಿದ್ದರು.
ಈ ಕುರಿತು ಉದಯವಾಣಯಲ್ಲಿ ಫೆ. 5ರಂದು ‘ಸೇತುವೆ ನಿರ್ಮಿಸಿದ್ದರೂ ಸುತ್ತಾಡಿ ಊರು ಸೇರಬೇಕು’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಶನಿವಾರದಿಂದ ಸೇತುವೆಯಲ್ಲಿ ಬೈಕ್ ಹಾಗೂ ಸೈಕಲ್ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಬೈಕ್, ಸೈಕಲ್ ಸಂಚಾರ: ಶುಕ್ರವಾರದಿಂದ ಮುಡುಕುತೊರೆ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಜಾತ್ರೆಗೆ ತಾಲೂಕಿನಿಂದಲೂ ಸಾಕಷ್ಟು ಭಕ್ತಾದಿಗಳು ತೆರಳುತ್ತಿರುವ ಹಿನ್ನೆಲೆಯಲ್ಲಿ ಸೇತುವೆ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಿರುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಜಾತ್ರೆ ಒಂದು ವಾರಕ್ಕೂ ಹೆಚ್ಚು ದಿನ ನಡೆಯುವುದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಮಾರ್ಗದಲ್ಲಿ ತೆರಳಲಿದ್ದಾರೆ. ಇದೇ ಮೊದಲು ಬಾರಿಗೆ ಸೇತುವೆ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಿರುವುದರಿಂದ ಪ್ರಯಾಣಿಕರು ಬೈಕ್ ಹಾಗೂ ಸೈಕಲ್ ಮೂಲಕ ಸುಗಮವಾಗಿ ಗ್ರಾಮಗಳಿಗೆ ತಲುಪುತ್ತಿದ್ದಾರೆ.
ಶೀಘ್ರ ಪೂರ್ಣಗೊಳಿಸಿ: ಸೇತುವೆ ಮಾರ್ಗದಲ್ಲಿ ಬಾಕಿ ಉಳಿಸಿಕೊಂಡಿರುವ ಸಣ್ಣಪುಟ್ಟ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಬಸ್ ಮತ್ತಿತರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮೂರು ಜಿಲ್ಲೆಗಳ ಸೇತುವೆ: ತಾಲೂಕಿನ ದಾಸನಪುರ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳನ್ನು ಸಂಪರ್ಕ ಕಲ್ಪಿಸುವ ಏಕೈಕ ಸೇತುವೆ ಇದಾಗಿದೆ. ಮೂರು ಜಿಲ್ಲೆಯ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರೂರಲ್ ಡವಲಪ್‌ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ 5.68 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ.