Advertisement

ಬೇಸಗೆಯಲ್ಲಿ ದಾರಿ, ಮಳೆ ಬಂದರೆ ಹೊಳೆ!

02:55 AM Jun 13, 2018 | Team Udayavani |

ಸುಳ್ಯ: ಬೇಸಗೆಯಲ್ಲಿ ಹೊಳೆಯೇ ರಸ್ತೆ. ಮಳೆಗಾಲದಲ್ಲಿ ಸುತ್ತಾಟವೇ ಇಲ್ಲಿನ ಗೋಳು. ಕಿಂಡಿ ಅಣೆಕಟ್ಟಿನ ಶಿಥಿಲ ಕಾಲು ದಾರಿಯಲ್ಲಿ ಜೀವ ಕೈಯಲ್ಲಿ ಹಿಡಿದು ಹೊಳೆ ದಾಟುವ ದುಸ್ಸಾಹಸ ದಿನ ನಿತ್ಯದ ಇಲ್ಲಿನ ಅನಿವಾರ್ಯತೆ. ಕೊಡಿಯಾಲ ಹಾಗೂ ಪೆರುವಾಜೆ ಗ್ರಾಮ ಬೆಸೆದುಕೊಳ್ಳುವ ಸಾರಕರೆ ಬಳಿ ಗೌರಿ ಹೊಳೆಗೆ ಸೇತುವೆ ಇಲ್ಲದ ಸಂಚಾರ ಸಂಕಟದ ಕಥೆಯಿದು. 40 ಕ್ಕೂ ಅಧಿಕ ಮನೆಗಳು, ದಲಿತ ಕುಟುಂಬಗಳು, ಅಂಗವಿಕಲತೆ ಉಳ್ಳವರು ಇರುವ ಇಲ್ಲಿದ್ದು, ಎರಡೂರಿನವರು ಹೊಳೆ ದಾಟುವುದೇ ತ್ರಾಸದ ಸಂಗತಿ. ಇದು ಬರೀ 40 ಮನೆಗಳ ಸ್ಥಿತಿ ಅಲ್ಲ. ಎರಡು ಗ್ರಾಮಗಳ ಜನರು ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸಂಚರಿಸಲು ಅತಿ ಸನಿಹದ ರಸ್ತೆ ಕೂಡ ಆಗಿದೆ. ಉಡುಕಿರಿ ಕಾಲನಿ, ಪೆರುವಾಜೆ ಪ್ರಥಮ ದರ್ಜೆ ಕಾಲೇಜಿಗೆ ಸಂಪರ್ಕ ರಸ್ತೆ ಇದಾಗಿದೆ. ದಾಖಲೆಗಳಲ್ಲಿಯೂ ಅದು ನಮೂದಾಗಿದೆ ಅನ್ನುತ್ತಾರೆ ಸ್ಥಳೀಯ ನಿವಾಸಿ ರಾಜೇಶ್‌ ಸಾರಕರೆ.

Advertisement

ಕಿಂಡಿ ಅಣೆಕಟ್ಟು
ಸಾರಕರೆಯಲ್ಲಿ ಗೌರಿ ಹೊಳೆಗೆ 30 ವರ್ಷಗಳ ಹಿಂದೆ ಕಿಂಡಿ ಅಣೆಕಟ್ಟು ನಿರ್ಮಿಸಿದ್ದು, ಎರಡು ಊರುಗಳ ಜನರು ಸಂಚರಿಸುತ್ತಾರೆ. ಬೇಸಗೆಯಲ್ಲಿ  ಹೊಳೆಯಲ್ಲೇ ವಾಹನ ದಾಟಿಸುತ್ತಾರೆ. ಮಳೆಗಾಲದಲ್ಲಿ ಬೇರೆ ಮಾರ್ಗದಲ್ಲಿ ಏಳೆಂಟು ಕಿ.ಮೀ ಸುತ್ತಾಟ ನಡೆಸಿ, ಮನೆಗೆ ತಲುಪಬೇಕು. ಅನಗುರಿ, ಕೆಡೆಂಜಿಮೊಗ್ರು, ಉಡುಕಿರಿ ಮೊದಲಾದ ಪ್ರದೇಶದ ನಿವಾಸಿಗಳು ಬೆಳ್ಳಾರೆ, ಪೆರುವಾಜೆ, ಕೊಡಿಯಾಲ ಭಾಗಕ್ಕೆ ತೆರಳಲು ಸಮೀಪದ ದಾರಿ ಇದಾಗಿದ್ದು,, ಸುಸಜ್ಜಿತ ಸೇತುವೆ ಇಲ್ಲದೆ ಇಲ್ಲಿ ಸಂಚಾರ ಸಾಧ್ಯವಾಗುತ್ತಿಲ್ಲ.


ಬಿರುಕು ಬಿಟ್ಟಿರುವ ಸ್ಲ್ಯಾಬ್‌

ಸುರಕ್ಷಾ ಬೇಲಿ ಇಲ್ಲದ ಕಿಂಡಿ ಅಣೆಕಟ್ಟಿನ ಸ್ಲ್ಯಾಬ್‌ ನಲ್ಲಿ ನಡಿಗೆ ಅಪಾಯಕಾರಿ ಎನಿಸಿದೆ. ಈಗ ಅದು ಮಧ್ಯಭಾಗದಲ್ಲಿ ಸ್ಲಾಬ್‌ ಬಿರುಕು ಬಿಟ್ಟಿದ್ದು, ಸಂಚರಿಸುವಾಗ ಅಲುಗಾಡುತ್ತಿದೆ. ತುಂಬಿ ಹರಿಯುವ ಹೊಳೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ದಿನ ನಿತ್ಯ ಸಂಚರಿಸುತ್ತಿದ್ದು, ಅಪಾಯ ಎದುರಾಗಿದೆ.

ಹೊಸ ಸೇತುವೆ ನಿರ್ಮಾಣದ ತನಕ ಕನಿಷ್ಠ ಪಕ್ಷ ಸ್ಲ್ಯಾಬ್‌ ದುರಸ್ತಿ ಹಾಗೂ ರಕ್ಷಣಾ ಬೇಲಿ ಅಳವಡಿಸಲೇಬೇಕಿದೆ. ಮುಖ್ಯವಾಗಿ ಇಲ್ಲಿ ಸೇತುವೆ ನಿರ್ಮಾಣದಿಂದ ಉಡುಕಿರಿ ಕಾಲನಿಗೆ ಸಂಪರ್ಕ ಸಾಧ್ಯವಾಗುತ್ತದೆ. ಮೂರು ನಾಲ್ಕು ಮಂದಿ ಅಂಗವಿಕಲತೆ ಉಳ್ಳವರು ಇಲ್ಲಿದ್ದು, ಅವರ ಸಂಚಾರಕ್ಕೆ ಅನುಕೂಲ. ರಸ್ತೆ ಮತ್ತು ಸೇತುವೆ ನಿರ್ಮಾಣದಿಂದ ಕಲ್ಲಪಣೆ, ಕಾಣಿಯೂರು ಭಾಗಕ್ಕೆ ಸಂಪರ್ಕ ಸಾಧ್ಯವಿದೆ. ಈ ಬಗ್ಗೆ ಸ್ಥಳೀಯಾಡಳಿತ, ಶಾಸಕರಿಗೆ, ಪ್ರಧಾನಮಂತ್ರಿಗೆ ಪತ್ರಮುಖೇನ ಮನವಿ ಸಲ್ಲಿಸಲಾಗಿದೆ. ಅದಾಗ್ಯೂ ಬೇಡಿಕೆ ಈಡೇರಿಲ್ಲ ಎನ್ನುತ್ತಾರೆ ಸ್ಥಳೀಯರು.


ಸುರಕ್ಷತೆಗೆ ಕ್ರಮ

ಹೊಸ ಸೇತುವೆಗೆ ಆ ಭಾಗದಿಂದ ಅರ್ಜಿ ಬಂದಿದೆ. ಸುಮಾರು 75ರಿಂದ 85 ಲಕ್ಷ ರೂ. ಅನುದಾನದ ಅಗತ್ಯ ಇದ್ದು, ಈ ಬಗ್ಗೆ ಜಿ.ಪಂ.ಗೆ ಪ್ರಸ್ತಾವನೆ ಕಳುಹಿಸಲಾಗಿದೆ. ರಸ್ತೆ ಯಾರ ಸುಪರ್ದಿಯಲ್ಲಿದೆ ಎಂಬ ಬಗ್ಗೆ ಸ್ಥಳೀಯ ಪಂಚಾಯತ್‌ ನಿಂದ ವರದಿ ಕೇಳಿದ್ದು, ಉತ್ತರ ಬರಬೇಕಷ್ಟೆ. ತಾತ್ಕಾಲಿಕವಾಗಿ ಮಳೆ ಹಾನಿ ಪರಿಹಾರ ನಿಧಿಯಿಂದ ಈಗಿರುವ ಕಿಂಡಿ ಅಣೆಕಟ್ಟಿನ ಕಾಲು ದಾರಿಗೆ ಸುರಕ್ಷಾ ಬೇಲಿ ಮತ್ತು ಸ್ಲ್ಯಾಬ್‌ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. 
– ಸಂಗಪ್ಪ ಎಸ್‌. ಹುಕ್ಕೇರಿ, ಕಿರಿಯ ಅಭಿಯಂತರರು

Advertisement

— ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next