ಬೀರೂರು: ಕೆ-ಶಿಪ್ ವತಿಯಿಂದ ಬೀರೂರು- ಅಜ್ಜಂಪುರ ರಸ್ತೆ ವಿಸ್ತರಣೆ ಸಲುವಾಗಿ ಭೂಮಿ ವಶಪಡಿಸಿಕೊಂಡಿದ್ದರೂ ಪಾದಚಾರಿ ಮಾರ್ಗ ಮತ್ತು ಅಜ್ಜಂಪುರ ರಸ್ತೆ ತಿರುವಿನಲ್ಲಿ ಸೇತುವೆ ನಿರ್ಮಾಣ ಮಾಡುವಲ್ಲಿ ಪ್ರಾಧಿಕಾರ ವಿಫಲವಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಬೀರೂರು, ಚನ್ನಗಿರಿ, ದಾವಣಗೆರೆ ರಾಜ್ಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಕೆ-ಶಿಪ್ ವತಿಯಿಂದ ಪಟ್ಟಣ ವ್ಯಾಪ್ತಿಯಲ್ಲಿ ಪರಿಹಾರ ನೀಡಿ ಭೂಮಿ ವಶಪಡಿಸಿಕೊಳ್ಳಲಾಗಿದ್ದು ರಸ್ತೆ ವಿಸ್ತರಣೆ ಕಾರ್ಯ ಅಷ್ಟು ಸಮಂಜಸವಾಗಿಲ್ಲದ ನಿಟ್ಟಿನಲ್ಲಿ ನಾಗರಿಕರಿಗೆ ಕಿರಿಕಿರಿ ಉಂಟಾಗಿದೆ. ಇಲ್ಲಿನ ಪಾದಚಾರಿ ಮಾರ್ಗ ನಿರ್ಮಾಣಕ್ಕೆಂದು ವಶಪಡಿಸಿಕೊಳ್ಳಲಾಗಿದ್ದ ಭೂಮಿಯಲ್ಲಿ ಕಾಮಗಾರಿ ನಡೆಸದ ಕಾರಣ ಪರಿಹಾರ ಪಡೆದವರು ಅಕ್ರಮವಾಗಿ ಗೂಡಂಗಡಿಗಳು, ಗ್ಯಾರೇಜ್, ಕಟ್ಟಡ ನಿರ್ಮಾಣ ಮಾಡುವ ಪ್ರಯತ್ನ ನಡೆಸಿದ್ದು, ಸಂಬಂಧಪಟ್ಟವರು ಕಂಡರೂ ಸಹ ಕಾಣದಂತಿದ್ದಾರೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿವೆ. ಸರ್ಕಾರ ಪರಿಹಾರ ನೀಡಿ ವಶಪಡಿಸಿಕೊಂಡ ಭೂಮಿಯಲ್ಲಿ ಸಂಬಂಧಪಟ್ಟ ಕಾಮಗಾರಿ ನಡೆಸಬೇಕಿರುವುದು ಹೆದ್ದಾರಿ ಪ್ರಾಧಿಕಾರದ ಕರ್ತವ್ಯವಾಗಿದೆ.
ತನ್ನ ವ್ಯಾಪ್ತಿಯಲ್ಲಿ ಇರುವ ಭೂಮಿ ವಿಸ್ತೀರ್ಣವನ್ನು ಪ್ರಾಧಿಕಾರಕ್ಕೆ ಒದಗಿಸಿದ ಪುರಸಭೆ ಕೂಡ ಎಷ್ಟು ಭೂಮಿ ವಶಪಡಿಸಿಕೊಳ್ಳಲಾಗಿದೆ? ಅಲ್ಲಿ ಮತ್ತೆ ಅಕ್ರಮ ಕಾಮಗಾರಿ ಏನಾದರೂ ನಡೆದಿದಯೇ ಎನ್ನುವುದನ್ನು ಪರೀಕ್ಷಿಸಬೇಕಿತ್ತು. ಪುರಸಭೆ ವ್ಯಾಪ್ತಿಯಲ್ಲಿ ಹಣವುಳ್ಳವರು ಕಾಮಗಾರಿಗೆ ಪರವಾನಗಿ ಮತ್ತು ಇ-ಸ್ವತ್ತು ಇಲ್ಲದೆ ಕಟ್ಟಡ ಕಾಮಗಾರಿ ನಡೆಸಿದರೂ ಸುಮ್ಮನಿರುವ ಪುರಸಭೆ ಸಾಮಾನ್ಯ ಜನರು ಸಣ್ಣಪುಟ್ಟ ದುರಸ್ತಿ ನಡೆಸಿದರೂ ತಡೆವೊಡ್ಡುವ ಪ್ರಕ್ರಿಯೆ ನಡೆಸುತ್ತದೆ. ಇಂತಹ ಹಲವು ಆರೋಪಗಳು ಕಂಡರೂ, ಕೇಳಿಬಂದರೂ ಸುಮ್ಮನಿರುವ ಈ ಎರಡು ಸಂಸ್ಥೆಗಳ ನಡೆಯೂ ಪ್ರಶ್ನಾರ್ಹವಾಗಿದೆ. ಶೀರ್ಘವಾಗಿ ಇದನ್ನು ಸರಿಪಡಿಸಿಕೊಂಡು ಜನರ ಗೊಂದಲ ನಿವಾರಿಸಿ ವಶಪಡಿಸಿಕೊಂಡ ಭೂಮಿಯಲ್ಲಿ ಸೇತುವೆ, ಪಾದಚಾರಿ ಮಾರ್ಗದ ಕಾಮಗಾರಿ ಪೂರೈಸಲಿ ಎನ್ನುತ್ತಾರೆ ಸ್ಥಳೀಯ ನಿವಾಸಿ ಕೃಷ್ಣ.
ಈ ಕುರಿತು ಪ್ರತಿಕ್ರಿಯಿಸಿದ ಕೆ-ಶಿಪ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಮೂರ್ತಿ, ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಸೂಕ್ತವಾಗಿಯೇ ಆಗಿದೆ. ಸೇತುವೆ ಮತ್ತು ಪಾದಚಾರಿ ಮಾರ್ಗದ ನಿರ್ಮಾಣ ಗುತ್ತಿಗೆದಾರನ ಜವಾಬ್ದಾರಿಯಾಗಿದ್ದು, ಕಾಮಗಾರಿ ಅಪೂರ್ಣ ಎನ್ನುವ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಕೆ.ಎಂ. ಸತ್ಯನಾರಾಯಣ್ ಮಾತನಾಡಿ, ಅಜ್ಜಂಪುರ ರಸ್ತೆಯಲ್ಲಿ ಕೆ-ಶಿಪ್ ಕಾಮಗಾರಿಗೆ ಪರಿಹಾರ ನೀಡಿ ಭೂಮಿ ವಶಪಡಿಸಿಕೊಂಡಿರುವುದು ಹೌದು. ಅಲ್ಲಿ ಅಕ್ರಮ ಕಟ್ಟಡ ಕಾಮಗಾರಿಗಳು ನಡೆದರೆ ಅದು ದಂಡನಾರ್ಹವಾಗಿದೆ.ತುಮಕೂರು ಕಚೇರಿಯಿಂದ ಇಲ್ಲಿ ಎಷ್ಟು ಭೂಮಿ ವಶಪಡಿಸಿಕೊಳ್ಳಲಾಗಿದೆ ಮತ್ತು ಎಷ್ಟ ಪರಿಹಾರ ನೀಡಲಾಗಿದೆ ಎನ್ನುವ ವರದಿ ತರಿಸಿಕೊಂಡಿದ್ದು ಸಂಬಂಧಪಟ್ಟವರ ಖಾತೆಗಳಿಂದ ಅಷ್ಟು ಅಳತೆಯ ನಿವೇಶನ ಖಡಿತಗೊಳಿಸಲಾಗುವುದು. ಅಕ್ರಮವಾಗಿ ಕಟ್ಟಡ ನಿರ್ಮಿಸಿದರೆ ನೊಟೀಸ್ ನೀಡಿ ನೆಲಸಮಗೊಳಿಸಲಾಗುವುದು ಎಂದು ಎಚ್ಚರಿಸಿದರು.