ಬೆಂಗಳೂರು: ಮೈಸೂರು ರಸ್ತೆ (ಸಿರ್ಸಿ ವೃತ್ತ) ಮೇಲ್ಸೇತುವೆಯ ಒಂದು ಬದಿಯ ಮಾರ್ಗದಲ್ಲಿ ಕೈಗೊಂಡಿದ್ದ ಮರು ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ರಸ್ತೆಯನ್ನು ಮುಕ್ತಗೊಳಿಸಿದ್ದು, ಶೀಘ್ರದಲ್ಲಿಯೇ ಮತ್ತೂಂದು ರಸ್ತೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
ಮೇಲ್ಸೇತುವೆ ರಸ್ತೆಗಳಲ್ಲಿನ ಗುಂಡಿ ಸಮಸ್ಯೆ ಪರಿಹಾರಕ್ಕಾಗಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ಟಿಕ್ಕಿಟಾರ್ ಬಳಸಿ ಮರುಡಾಂಬರೀಕರಣ ಮಾಡಲಾಗಿದ್ದು, ಟೌನ್‌ಹಾಲ್‌ನಿಂದ ಮೈಸೂರು ರಸ್ತೆವರೆಗಿನ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಜತೆಗೆ ಮೊತ್ತೂಂದು ರಸ್ತೆಯಲ್ಲಿ ಮರು ಡಾಂಬರೀಕರಣ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ಅದರಂತೆ ಮೈಸೂರು ರಸ್ತೆಯಿಂದ ನಗರದ ಕಡೆಗೆ ಸಂಪರ್ಕಿಸುವ ರಸ್ತೆಯಲ್ಲಿ ಮರು ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಮತಿ ಕೋರಿರುವ ಅಧಿಕಾರಿಗಳು, ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಪರ್ಯಾಯ ರಸ್ತೆಗಳಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸಂಚಾರ ಪೊಲೀಸರನ್ನು ಕೋರಿದ್ದಾರೆ. ಅದರಂತೆ ಕಾಮಗಾರಿಗೆ ಪೊಲೀಸರು ಕಾಮಗಾರಿಗೆ ಅನುಮತಿ ನೀಡಿದ ಕೂಡಲೇ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ಮೈಸೂರು ರಸ್ತೆಯಿಂದ ನಗರದ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಎರಡು ಹಂತಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ ಗೂಡ್ಸ್‌ಶೆಡ್ ರಸ್ತೆ ಕಡೆಗಿನ ರ್‍ಯಾಂಪ್‌ನಿಂದ ಮೇಲ್ಸೇತುವೆ ಕೊನೆಗೊಳ್ಳುವವರೆಗೆ ಕಾಮಗಾರಿ ನಡೆಸಲಾಗುತ್ತದೆ. ಆನಂತರದಲ್ಲಿ ಸಂಪೂರ್ಣ ರಸ್ತೆಯಲ್ಲಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಟೌನ್‌ಹಾಲ್ ಕಡೆಯಿಂದ ಮೈಸೂರು ರಸ್ತೆವರೆಗೆ ಮರು ಡಾಂಬರೀಕರಣ ಪೂರ್ಣಗೊಂಡಿದ್ದು, ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮತ್ತೂಂದು ರಸ್ತೆಯಲ್ಲಿ ಅನುಮತಿ ನೀಡುವಂತೆ ಸಂಚಾರ ಪೊಲೀಸರನ್ನು ಕೋರಿದ್ದು, ಅನುಮತಿ ನೀಡಿದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
-ಕೆ.ಟಿ.ನಾಗರಾಜ್, ಮುಖ್ಯ ಎಂಜಿನಿಯರ್ (ಯೋಜನೆ)