Advertisement
ಬ್ರಹ್ಮಾವರ ಸುತ್ತಮುತ್ತಲಿನ ಪ್ರದೇಶದವರಿಗೆ ಮಣಿಪಾಲಕ್ಕೆ ಉದ್ಯೋಗ, ಶಿಕ್ಷಣ, ಆರೋಗ್ಯ ಸೇವೆ ಸಂಬಂಧಿಸಿ ಸಂಪರ್ಕ ಮಾರ್ಗ ಅನುಕೂಲಕ್ಕೆ ತಕ್ಕಂತೆ ಬಹು ಬೇಡಿಕೆ ಮೇರೆಗೆ ನಿರ್ಮಾಣಗೊಂಡ ಸೇತುವೆ. ಏಳೆಂಟು ವರ್ಷದ ಹಿಂದೆ ಸೇತುವೆ ನಿರ್ಮಾಣಗೊಂಡರೂ ಸಂಪರ್ಕ ರಸ್ತೆ, ಭೂ ಸ್ವಾಧೀನ, ಪರಿಹಾರ ವಿಳಂಬ ಮೊದಲಾದ ತಾಂತ್ರಿಕ ಸಮಸ್ಯೆಯಿಂದಾಗಿ ಸೇತುವೆ ಓಡಾಟಕ್ಕೆ ಮುಕ್ತವಾಗಿರುವುದು ಸಾಕಷ್ಟು ತಡವಾಗಿತ್ತು. ಈ ಸೇತುವೆ ನಿರ್ಮಾಣದಿಂದ ಬ್ರಹ್ಮಾವರ, ಹಾವಂಜೆ, ಕೊಕ್ಕರ್ಣೆ, ಮಂದಾರ್ತಿ, ಕುಂದಾಪುರ ಭಾಗದವರಿಗೆ ಮಣಿಪಾಲಕ್ಕೆ ಓಡಾಡಲು ಸಾಕಷ್ಟು ಅನುಕೂಲವಾಗಿದೆ. ಇತ್ತೀಚೆಗೆ ಎಲ್ಲ ಸಂಪರ್ಕ ರಸ್ತೆಯೂ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಕುಡುಕರ ಹಾವಳಿಯಿಂದಾಗಿ ಈ ಸೇತುವೆ ಮೇಲೆ ಜನರು ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಸಂಜೆ 4-5 ಗಂಟೆ ಕಳೆಯುತ್ತಿದ್ದಂತೆ ಇಲ್ಲಿ ಯುವಕರ ತಂಡ ಮೋಜು ಮಸ್ತಿಗಾಗಿ ಬರುತ್ತದೆ. ಧೂಮಪಾನ ಮಾಡುವುದು, ಮದ್ಯ ಸೇವನೆ ಮಾಡುವುದು. ಸಂಜೆಯಿಂದ ತಡರಾತ್ರಿವರೆಗೂ ಮದ್ಯ ಸೇವಿಸಿ, ಬೊಬ್ಬೆ ಹೊಡೆಯುತ್ತ, ಕಾರಿನಲ್ಲಿ ಹಾಡುಗಳನ್ನಿಟ್ಟು ನೃತ್ಯ ಮಾಡುವುದು ನಡೆಯುತ್ತದೆ. ಸೇತುವೆ ಬದಿಯಲ್ಲಿ ಎಲ್ಲೆಂದರಲ್ಲಿ ಸಿಗರೇಟು ಪ್ಯಾಕ್‌ನ ರಾಶಿ , ಅಲ್ಲಲ್ಲಿ ಮದ್ಯದ ಬಾಟಲಿಗಳು ಕಂಡು ಬರುತ್ತವೆೆ. ಕೆಲವರು ಸಿಗರೇಟು ಸೇದಿ ಅದರ ತುಂಡು, ಖಾಲಿ ಪ್ಯಾಕ್, ಮದ್ಯದ ಬಾಟಲಿಗಳನ್ನು ನದಿಗೆ ಎಸೆದು ಪರಿಸರ ಮಾಲಿನ್ಯ ಮಾಡುತ್ತಿದ್ದಾರೆ. ಇದರಿಂದಾಗಿ ಮಣಿಪಾಲದಿಂದ ಸಂಜೆ, ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವವರಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಆತಂಕದಿಂದ ಉಡುಪಿ ಮಾರ್ಗದಿಂದಲೆ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸುತ್ತಾರೆ ಸ್ಥಳೀಯರು. ಅಕ್ರಮಗಳಿಗೆ ಕಡಿವಾಣ ಹಾಕಿ
ಈ ಸೇತುವೆ ಸಂಜೆ ಅನಂತರ ಅಕ್ರಮ ಚಟುವಟಿಕೆ ತಾಣವಾಗಿ ರೂಪುಗೊಂಡಿದೆ. ಹೊರಗಿನಿಂದ ಬರುವ ಯುವಕರ ತಂಡ ಸಾರ್ವಜನಿಕ ಪ್ರದೇಶದಲ್ಲಿ ಮದ್ಯಸೇವನೆ ಮಾಡಿ ಬೊಬ್ಬೆ ಹೊಡೆಯುವುದು ಮಾಡುತ್ತಾರೆ. ರಾತ್ರಿ ಅಕ್ರಮ ಚಟುವಟಿಕೆಗೆ ಅನುಕೂಲವಾಗುವಂತೆ ಸೇತುವೆ ಮೇಲಿನ ವಿದ್ಯುತ್ ಕಂಬದ ಕೆಲವು ಲೈಟ್‌ಗಳು ಬೆಳಗುತ್ತ ಬೇಕಂತಲೆ ವಯರ್ ಕತ್ತರಿಸಿದ್ದಾರೆ.ಇದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಮಣಿಪಾಲದಿಂದ ಕೆಲಸ ಮುಗಿಸಿ ಈ ಸೇತುವೆ ಮೇಲೆ ಸಂಚರಿಸಲು ಜನಸಮಾನ್ಯರು ಭಯಪಡುವಂತಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಭಾಗದಲ್ಲಿ ಸಂಜೆ ಅನಂತರ ಪೊಲೀಸ್ ಬೀಟ್ ವ್ಯವಸ್ಥೆ ಹೆಚ್ಚಿಸಬೇಕು.
-ಸತೀಶ್ ಪೂಜಾರಿ ಕೀಳಂಜೆ, ಹಾವಂಜೆ
– ವಿನ್ಸೆಂಟ್ ಡಿ’ಸೋಜಾ, ಕೊಳಲಗಿರಿ
Related Articles
ಶೀಂಬ್ರಾ-ಪರಾರಿ ಸೇತುವೆ ಬಳಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈಗಾಗಲೆ ಪೊಲೀಸರು ಈ ಭಾಗದಲ್ಲಿ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೆಲವರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ನಾಗರಿಕರು 112 ಅಥವಾ ಮಣಿಪಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ ಹೆಚ್ಚಿನ ನಿಗಾ ವಹಿಸಲಾಗುವುದು.
– ದೇವರಾಜ್ ಟಿ. ವಿ., ಪೊಲೀಸ್ ನಿರೀಕ್ಷಕರು.
ಮಣಿಪಾಲ ಪೊಲೀಸ್ ಠಾಣೆ
Advertisement