Advertisement

ದೇವನದಿಗೆ ಸೇತುವೆ ನಿರ್ಮಾಣ ಮರೀಚಿಕೆ

08:46 AM Jan 24, 2019 | Team Udayavani |

ಕಮಲನಗರ: ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಮುರುಗ(ಕೆ)ದಿಂದ ದೇವಣಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯದಲ್ಲಿರುವ ದೇವನದಿಗೆ ಸುಮಾರು 70 ವರ್ಷಗಳಿಂದ ಸೇತುವೆ ಇಲ್ಲದೇ ಜನತೆ ತೊಂದರೆ ಅನುಭವಿಸುವಂತಾಗಿದೆ.

Advertisement

ಈ ಕುರಿತು ಚುನಾಯಿತ ಪ್ರತಿನಿಧಿಗಳಿಗೆ, ಈಗಿರುವ ಶಾಸಕರಿಗೆ, ಸಂಸದರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜ ಸೇವಕ ಗುರುನಾಥ ವಡ್ಡೆ ಸಾಮಾನ್ಯ ಪ್ರಜೆಯಾಗಿ ಶಾಸಕ, ಸಂಸದರಿಂದ ಆಗದ ಕೆಲಸಗಳನ್ನು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಉಚ್ಛ ನ್ಯಾಯಾಲಯದ ಮೋರೆ ಹೋಗಿ ಕೆಲಸ ಮಾಡುತ್ತಿರುವುದು ಮನಗಂಡ ಗ್ರಾಮದ ರೈತರು ಅವರಿಗೆ ಗ್ರಾಮಕ್ಕೆ ಕರೆಯಿಸಿ ಸೇತುವೆ ಕೆಲಸ ತಾವು ಮಾಡಲೇಬೇಕೆಂದು ಮೊರೆ ಹೋಗಿದ್ದಾರೆ.

ಮುರುಗ(ಕೆ) ದಿಂದ ದೇವಣಿ ಪಟ್ಟಣಕ್ಕೆ ತೆರಳಬೇಕಾದರೆ ಸುಮಾರು 25 ಕಿಮೀ ಸಂಚರಿಸಬೇಕಾಗುತ್ತದೆ. ಆದರೆ ಮುರುಗ(ಕೆ) ಸೇತುವೆ ನಿರ್ಮಾಣವಾದರೆ ದೇವಣಿ ಪಟ್ಟಣ ಕೇವಲ 6 ಕಿಮೀ ಅಂತರದಲ್ಲಿರುತ್ತದೆ. ಈ ರಸ್ತೆಯಿಂದ ಮಹಾರಾಷ್ಟ್ರದ ನೀಲಂಗಾ, ಲಾತೂರ, ತುಳಜಾಪುರ, ಸೊಲ್ಲಾಪುರ ಪಟ್ಟಣಗಳಿಗೆ ತೆರಳಲು ಅನುಕೂಲವಾಗುತ್ತದೆ ಎಂದು ಗುರುನಾಥ ವಡ್ಡೆ ತಿಳಿಸಿದ್ದಾರೆ.

ನದಿಗೆ ಸೇತುವೆ ಇಲ್ಲದ ಕಾರಣ ಎರಡು ವರ್ಷದ ಹಿಂದೆ ಗ್ರಾಮದ ರೈತ ಗೋವಿಂದ ಜಾಧವ ಅವರ ಗರ್ಭಿಣಿ ಆಕಳು ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದನ್ನು ಸ್ಮರಿಸಿದರು. ನದಿಯ ದಂಡೆಯ ಆಚೆಗೆ ಮುರುಗ(ಕೆ) ಗ್ರಾಮದ ಸುಮಾರು 250 ಎಕರೆ ರೈತರ ಭೂಮಿಯಿದ್ದು, ರೈತರಿಗೆ ತಾವು ಬೆಳೆಸಿದ ಬೆಳೆಗಳ ರಕ್ಷಣೆಗೆ, ಕಟಾವಿಗೆ ಬಂದ ಬೆಳೆ ತರಲು ಸೇತುವೆ ಇಲ್ಲದ ಕಾರಣ ಮಾಲೀಕರಿಗೆ ಕಷ್ಟಕರವಾಗಿದೆ ಎಂದು ಶಾಮರಾವ ಜಾಧವ್‌ ತಿಳಿಸಿದ್ದಾರೆ.

Advertisement

ಗ್ರಾಮದ ರೈತರು ನದಿಯಲ್ಲಿ ನೀರು ಇದ್ದಾಗ ತಮ್ಮ ಹೊಲಗಳಿಗೆ ಹೋಗಲು ಸುಮಾರು 22 ಕಿಮೀ ಅಂದರೆ ಕಮಲನಗರದಿಂದ ಮಹಾರಾಷ್ಟ್ರದ ವಾಗದರಿ ಗ್ರಾಮದ ಮಾರ್ಗವಾಗಿ ಸಂಚರಿಸಿ ತಮ್ಮ ಹೊಲಕ್ಕೆ ಬರುವಂತಹ ಪರಿಸ್ಥಿತಿ ಇದೆ. ಆದರೆ ಇಲ್ಲಿಯ ಚುನಾಯಿತ ಪ್ರತಿನಿಧಿಗಳು, ಸಂಬಂಧಿತ ಅಧಿಕಾರಿಗಳು ಹತ್ತಾರು ಸಲ ಬಂದು ನದಿಗೆ ಭೇಟಿ ನೀಡಿ ಪರಿಶೀಲಿಸಿ ಯಾವುದೇ ಕ್ರಮ ಕೈಗೊಳ್ಳದೆ ಜಾಣ ಕುರುಡುತನ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ. ಈ ಬೇಡಿಕೆ ಅವಶ್ಯಕತೆ ಹಾಗೂ ಭೀಕರತೆ ಅರಿತ ಸಮಾಜ ಸೇವಕ ಗುರುನಾಥ ವಡ್ಡೆ ತಾನು ಜವಾಬ್ದಾರಿ ಹೊತ್ತು ಶೀಘ್ರದಲ್ಲಿ ಸೇತುವೆ ನಿರ್ಮಾಣ ಮಾಡಿಸುವುದಾಗಿ ಭರವಸೆ ನೀಡಿದಾಗ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಹಾವಪ್ಪಾ ದ್ಯಾಡೆ, ಅಂಬಾದಾಸ ನೇಳಗೆ, ರೈತರಾದ ವೈಜಿನಾಥ ವಡ್ಡೆ, ಬಾಲಾಜಿ ಬಿರಾದಾರ, ಅಶೋಕ ಪಾಟೀಲ, ತುಕಾರಾಮ ಮಹಾಕಾ, ರಾಹುಲ ಜಾಧವ್‌, ಪಿಂಟು, ರಮಾಕಾಂತ ಜಾಧವ ಹಾಗೂ ಅನೇಕ ರೈತರು ಹಾಜರಿದ್ದರು.

ಸಮಸ್ಯೆ ಕುರಿತು ಅರಿವಿದೆ. ಈ ಸಮಸ್ಯೆ ಪರಿಹರಿಸಲು ಹಲವು ಬಾರಿ ಯತ್ನಿಸಿರುವೆ. ಅನುದಾನ ಕೊರತೆಯಿಂದ ಕಾಮಗಾರಿ ಆಗಿಲ್ಲ. ಈ ಬಾರಿ ನಬಾರ್ಡ್‌ ಯೋಜನೆಯಡಿಯಲ್ಲಿ ಕಾಮಗಾರಿ ಮಾಡಿಸಲು ಕ್ರಮ ತೆಗೆದುಕೊಳ್ಳುತ್ತೇನೆ. ಗ್ರಾಮಸ್ಥರ ಸಮಸ್ಯೆ ಬಗೆಹರಿಸಲು ಯತ್ನಿಸುವೆ.
ಪ್ರಭು ಚವ್ಹಾಣ, ಶಾಸಕರು.

Advertisement

Udayavani is now on Telegram. Click here to join our channel and stay updated with the latest news.

Next