ಕ್ಸಿಯಾಮೆನ್ : ಜಾಗತಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಿಡಲು ಬ್ರಿಕ್ಸ್ ದೇಶಗಳ ನಡುವೆ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಇಲ್ಲಿನ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನಡೆಯುವ ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿರುವ ಪ್ರಧಾನಿ ಮೋದಿ ಅವರನ್ನು ಚೀನದ ಅಧ್ಯಕ್ಷ ಜಿನ್‌ಪಿಂಗ್ ಅವರು ಹಾರ್ದಿಕವಾಗಿ ಬರಮಾಡಿಕೊಂಡರು. ಐದು ರಾಷ್ಟ್ರಗಳ ಬ್ರಿಕ್ಸ್ ನಾಯಕರು ಸಮೂಹ ಫೋಟೋಗೆ ಪೋಸ್ ನೀಡುವ ಮೂಲಕ ಬ್ರಿಕ್ಸ್ ಶೃಂಗಕ್ಕೆ ಔಪಚಾರಿಕ ಚಾಲನೆ ದೊರಕಿತು.
ಪ್ರಧಾನಿ ಮೋದಿ ಮತ್ತು ಚೀನದ ಅಧ್ಯಕ್ಷ ಜಿನ್‌ಪಿಂಗ್ ಅವರು ಪರಸ್ಪರ ಹಸ್ತಲಾಘವಗೈವ ಮೂಲಕ ಉಭಯ ದೇಶಗಳ ನಡುವೆ ಈಚೆಗೆ ಸಮರೋತ್ಸಾಹದ ವರೆಗೂ ಸಾಗಿದ್ದ ಗಡಿ ಬಿಕ್ಕಟ್ಟು ಉನ್ನತ ರಾಜತಾಂತ್ರಿಕ ಮಟ್ಟದಲ್ಲಿ ಸೌಹಾರ್ದಯುತವಾಗಿ ಬಗೆಹರಿದಿರುವುದನ್ನು ಢಾಳಾಗಿ ತೋರ್ಪಡಿಸಿದರು.
ಮೋದಿ ಅವರು ತಮ್ಮ ಭಾಷಣದಲ್ಲಿ “ನಾವು ಬಡತನ ನಿರ್ಮೂಲನೆಗಾಗಿ ಭಾರೀ ದೊಡ್ಡ ಹೋರಾಟದಲ್ಲಿ ತೊಡಗಿಕೊಂಡಿದ್ದೇವೆ; ಅಂತೆಯೇ ಜನರಿಗೆ ಉತ್ತಮ ಆರೋಗ್ಯ, ಶೌಚ ವ್ಯವಸ್ಥೆ, ಕೌಶಲಾಭಿವೃದ್ಧಿ, ಆಹಾರ ಭದ್ರತೆ, ಲಿಂಗ ಸಮಾನತೆ, ಇಂಧನ ಮತ್ತು ಶಿಕ್ಷಣ ಕುರಿತಾಗಿಯೂ ನಾವು ಹೋರಾಡುತ್ತಿದ್ದೇವೆ’ ಎಂದು ಹೇಳಿದರು.
ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಸೌರಶಕ್ತಿಯನ್ನು ಬಲಪಡಿಸುವ ದಿಶೆಯಲ್ಲಿ ಐಎಸ್‌ಎ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯ ಇದೆ ಎಂದು ಮೋದಿ ಹೇಳಿದರು.