ಬೆಳಗಾವಿ: ಕಂಪ್ಯೂಟರ್ ಪಹಣಿ ಪತ್ರಿಕೆ ನೀಡಲು ಲಂಚ ಪಡೆದಿದ್ದ ತಾಲೂಕಿನ ಮಚ್ಛೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಗೂ ಈಕೆಯ ಪತಿಗೆ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಇಲ್ಲಿನ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ವಿ. ವಿಜಯ ಮಹತ್ವದ ತೀರ್ಪು ನೀಡಿದ್ದಾರೆ.
ಗ್ರಾಪಂ ಮಾಜಿ ಅಧ್ಯಕ್ಷೆ ಪದ್ಮಶ್ರೀ ಮಹಾವೀರ ಹುಡೇದ ಅವರಿಗೆ ಕಲಂ.7 ಪಿಸಿ ಕಾಯ್ದೆ-1988ರಲ್ಲಿ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ 2 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ ಕಲಂ.13(1)(ಡಿ) ಸಹ ಕಲಂ.13(2) ಪಿಸಿ ಕಾಯ್ದೆ-1988 ನೇ ಅಡಿಯಲ್ಲಿ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ 3 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಅಧ್ಯಕ್ಷಯೆ ಪತಿ ಆರೋಪಿ-2 ಮಹಾವೀರ ಸಾವಂತ ಹುಡೇದ ಇವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ ಕಲಂ.8 ಪಿಸಿ ಕಾಯ್ದೆ-1988ರಲ್ಲಿ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ 2 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ ಕಲಂ.12 ಪಿಸಿ ಕಾಯ್ದೆ-1988 ನೇದ್ದರಡಿಯಲ್ಲಿ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ, ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ 3 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಘಟನೆ ಹಿನ್ನೆಲೆ ಏನು?: ಗ್ರಾಪಂ ಅಧ್ಯಕ್ಷೆ ಪದ್ಮಶ್ರೀ ಮಹಾವೀರ ಹುಡೇದ ಅವರು ಗಣಕೀಕೃತ ಪಹಣಿ ಪತ್ರಿಕೆನೀಡಲು ಮಚ್ಛೆ ಗ್ರಾಮದ ಕಸ್ತೂರಿ ಪ್ರಕಾಶ ಕೋಲಕಾರ ಅವರಿಂದ 28 ಜನೇವರಿ 2017ರಂದು 3 ಸಾವಿರ ರೂ. ಲಂಚ ಕೇಳಿದ್ದರು. ಈ ಬಗ್ಗೆ ಕಸ್ತೂರಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡಿದ್ದರು. ಮುಂಗಡವಾಗಿ ಪದ್ಮಶ್ರೀ 500 ರೂ. ಲಂಚಸ್ವೀಕರಿಸಿ, ಉಳಿದ ಹಣ ಪತಿ ಮಹಾವೀರ ಸಾವಂತ ಹುಡೇದ 2500 ರೂ. ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದರು.
ಇನ್ಸಪೆಕ್ಟರ್ ವಿಶ್ವನಾಥ ಡಿ.ಕಬ್ಬೂರಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು, ಸಿಬ್ಬಂದಿಗಳಾದ ಬಿ.ಸಿ. ಗೌಡರ ತನಿಖಾ ಸಹಾಯಕರಾಗಿ ಪ್ರಕರಣದ ತನಿಖೆ ಕೈಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರಕಾರಿ ಅಭಿಯೋಜಕರಾಗಿ ಪ್ರವೀಣ ಅಗಸಗಿ ವಾದ ಮಂಡಿಸಿದರು.