Advertisement

ಬ್ರಿಟನ್‌ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಏರ್‌ಲೈನ್ಸ್‌

02:06 PM Jun 14, 2020 | sudhir |

ಲಂಡನ್‌: ಬ್ರಿಟನ್‌ಗೆ ಆಗಮಿಸುವ ವಿದೇಶೀಯರಿಗೆ ವಿಧಿಸಲಾಗಿರುವ ಕ್ವಾರಂಟೈನ್‌ ನಿಯಮಗಳ ವಿರುದ್ಧ ಬ್ರಿಟನ್‌ನ ವಿಮಾನಯಾನ ಸಂಸ್ಥೆಗಳು ಕೋರ್ಟ್‌ ಮೆಟ್ಟಿಲೇರಿವೆ.

Advertisement

ವಿದೇಶೀಯರು ಎರಡು ವಾರಗಳ ಕಾಲ ಕಡ್ಡಾಯ ಸ್ವಯಂ ಕ್ವಾರಂಟೈನ್‌ಗೆ ಒಳಪಡಬೇಕೆಂದು ಅಲ್ಲಿನ ಸರಕಾರ ಆದೇಶಿಸಿದ್ದು ಈ ವಿರುದ್ಧ ದೂರು ಸಲ್ಲಿಸಲಾಗಿದೆ.

ಬ್ರಿಟಿಷ್‌ ಏರ್‌ಲೈನ್ಸ್‌, ಕಡಿಮೆ ಬೆಲೆಗೆ ವಿಮಾನಯಾನ ಒದಗಿಸುವ ರೈನೈರ್‌ ಹೋಲ್ಡಿಂಗ್ಸ್‌ ಪಿಎಲ್‌ಸಿ, ಈಸಿಜೆಟ್‌ ಪಿಎಲ್‌ಸಿಗಳು ಈ ನಿಯಮದ ವಿರುದ್ಧ ಅರ್ಜಿ ಸಲ್ಲಿಸಿವೆ.

ಪ್ರವಾಸೋದ್ಯಮಕ್ಕೆ ಬಹಳಷ್ಟು ಪೆಟ್ಟು
ಸರಕಾರದ ಈ ನಿಯಮದಿಂದಾಗಿ ರಜೆ ಪ್ರವಾಸಕ್ಕೆ ಬ್ರಿಟನ್‌ಗೆ ಬರುವವರು ಬರುವುದಿಲ್ಲ. ಇದರಿಂದ ಈ ಮೊದಲೇ ಆರ್ಥಿಕ ಹಿಂಜರಿತಕ್ಕೆ ಸಿಲುಕಿದ ವಿಮಾನಯಾನ ಕಂಪೆನಿಗಳು ಮತ್ತಷ್ಟು ಕಷ್ಟಕ್ಕೆ ಸಿಲುಕಬೇಕಾಗತ್ತದೆ. ಜತೆಗೆ ಬ್ರಿಟನ್‌ನ ಪ್ರವಾಸೋದ್ಯಮಕ್ಕೆ ಬಹಳಷ್ಟು ಪೆಟ್ಟು ಬೀಳುತ್ತದೆ. ಸಾವಿರಾರು ಉದ್ಯೋಗಗಳೂ ನಷ್ಟವಾಗಬಹುದು ಎಂದು ಹೇಳಿವೆ.

ಈ ಮೊದಲು ಲಾಕ್‌ಡೌನ್‌ ಸಡಿಲದೊಂದಿಗೆ ಹಲವು ಕ್ರಮಗಳನ್ನು ಬ್ರಿಟನ್‌ ಸರಕಾರ ಕೈಗೊಂಡಿತ್ತು. ಐರೋಪ್ಯ ದೇಶಗಳಲ್ಲೇ ಅತಿ ಹೆಚ್ಚು ಕೋವಿಡ್‌ ಸೋಂಕಿಗೆ ತುತ್ತಾದ ದೇಶಗಳಲ್ಲಿ ಬ್ರಿಟನ್‌ ಕೂಡ ಒಂದಾಗಿದ್ದು ದೊಡ್ಡ ಮಟ್ಟದಲ್ಲಿ ಆರ್ಥಿಕ ಹೊಡೆತಕ್ಕೂ ತುತ್ತಾಗಿದೆ. ಏಕಾಏಕಿ ವಿದೇಶೀಯರು ಆಗಮಿಸಿದರೆ ಮತ್ತೆ ಕೋವಿಡ್‌ ಭೀತಿ ಕಾಡಬಹುದು ಎನ್ನುವ ಆತಂಕ ಅದರದ್ದು. ಅಲ್ಲದೇ ದೇಶದ ಆರೋಗ್ಯ ಸ್ಥಿತಿಯೂ ಹದಗೆಡುತ್ತದೆ ಎಂಬ ಭಯವೂ ಇದೆ.

Advertisement

ಮುಂದಿನ ದಿನಗಳಲ್ಲಿ ಐರೋಪ್ಯ ದೇಶಗಳಲ್ಲಿ ರಜೆ ಪ್ರವಾಸ ಆರಂಭವಾಗಲಿದ್ದು, ದೊಡ್ಡ ಮಟ್ಟದಲ್ಲಿ ಜನರು ಬೀಚುಗಳತ್ತ ದೌಡಾಯಿಸುತ್ತಾರೆ. ಹಲವು ದೇಶಗಳು ಈ ವೇಳೆ ಪ್ರವಾಸೋದ್ಯಮದಿಂದ ಭರ್ಜರಿ ಸಂಪಾದನೆ ಮಾಡುತ್ತವೆ. ಆದರೆ ಬ್ರಿಟನ್‌ನಲ್ಲಿ ಮಾತ್ರ ಈಗ ಕ್ವಾರಂಟೈನ್‌ ಎಂದರೆ ಜನರು ಬರುವುದಿಲ್ಲ ಎನ್ನುವುದು ಅಲ್ಲಿನ ವಿಮಾನಯಾನ ಕಂಪೆನಿಗಳ ಆರೋಪ. ಅಲ್ಲದೇ ಕೋವಿಡ್‌ನಿಂದಾಗಿ ಅತಿ ಹೆಚ್ಚು ನಷ್ಟವಾಗಿದ್ದು, ಬ್ರಿಟನ್‌ನ ವೈಮಾನಿಕ ಕಂಪೆನಿಗಳಿಗೆ ಸುಮಾರು 8 ಸಾವಿರ ಕೋಟಿ ರೂ.

ನಷ್ಟವಾಗಬಹುದು ಎಂದು ಕಂಪೆನಿಗಳು ಲೆಕ್ಕಾಚಾರ ಹಾಕಿವೆ. 2008-09ರ ಆರ್ಥಿಕ ಹಿಂಜರಿತದ ವೇಳೆ 3 ಸಾವಿರ ಕೋಟಿ ರೂ. ನಷ್ಟವಾಗಿದ್ದು ಈ ಬಾರಿ ಅದಕ್ಕೂ ದುಪ್ಪಟ್ಟು ನಷ್ಟವಾಗಿದೆ ಎಂದು ಕಂಪೆನಿಗಳ ವಕ್ತಾರರು ಹೇಳಿದ್ದಾರೆ.

ಇತರ ಐರೋಪ್ಯ ದೇಶಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಇದರಿಂದ ಸನಿಹದ ದೇಶಗಳಿಂದ ಪ್ರವಾಸಿಗರನ್ನು ದೇಶಕ್ಕೆ ಬಿಡಬಹುದು. ಇದರಿಂದ ಆರ್ಥಿಕ ದೃಷ್ಟಿಯಿಂದಲೂ ಪ್ರಯೋಜನಕಾರಿ. ಸರಕಾರ ಕೂಡಲೇ ನಿರ್ಧಾರವನ್ನು ಪರಿಶೀಲಿಸಬೇಕು. ನ್ಯಾಯಾಂಗವೂ ನ್ಯಾಯಿಕ ಮಂಡಳಿಯ ಮೂಲಕ ಆದೇಶ ಪರಶೀಲನೆ ನಡೆಸಬೇಕು ಎಂದು ವಿಮಾನ ಯಾನ ಕಂಪೆನಿಗಳು ಕೇಳಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next