Advertisement
ಜನವರಿ ತಿಂಗಳ ಪ್ರಾರಂಭದ ವೇಳೆಗೆ ಕೋವಿಡ್-19 ಕುರಿತಾದ ಕಳವಳದ ಸುದ್ದಿಗಳು ಬಿತ್ತರವಾಗಲು ಶುರುವಾಗಿತ್ತು. ಚೀನದಲ್ಲಿನ ಸಾವು-ನೋವಿನ ಸುದ್ದಿಗಳು ಕಿವಿಗೆ ಬಂದು ಅಪ್ಪಳಿಸಿದ್ದವು. ವಿಶ್ವದಲ್ಲಿ ಮಾರಣಾಂತಿಕ ಪಿಡುಗು ಕುರಿತಾದ ಚರ್ಚೆಗಳು ಪ್ರಾರಂಭಗೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವತ್ತ ಇತರೆ ದೇಶಗಳು ದಾಪುಗಾಲಿಡುತ್ತಿದ್ದರೆ, ಬ್ರಿಟನ್ ಮಾತ್ರ ತಲೆ ಕೆಡಿಸಿಕೊಂಡಿರಲಿಲ್ಲ.
ಲಂಡನ್‌ನ ಇಂಪೀರಿಯಲ್ ಕಾಲೇಜಿನ ಜಾಗತಿಕ ಆರೋಗ್ಯ ಪ್ರಾಧ್ಯಾಪಕ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ರಾಯಭಾರಿ ಡೇವಿಡ್ ನಬರೋ ಹೇಳಿರುವ ಪ್ರಕಾರ ಎಲ್ಲ ದೇಶದ ಸರಕಾರಗಳಿಗೆ ಜನವರಿ ಅಂತ್ಯದ ವೇಳೆಗೆ ಕೋವಿಡ್-19 ಮುಂದಿನ ದಿನಗಳಲ್ಲಿ ಗಂಭೀರವಾದ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿತ್ತು. ಜತೆಗೆ ಜನವರಿ 30ರಂದು ಕೋವಿಡ್-19 ಅನ್ನು ಜಾಗತಿಕ ಪಿಡುಗು ಎಂದು ಘೋಷಿಸಿತು. ಆದರೆ ವಿಶ್ವಸಂಸ್ಥೆ ಎಚ್ಚರಿಕೆ ಕೂಗು ಬ್ರಿಟನ್ ಕಿವಿಗೆ ಕೇಳಲೇ ಇಲ್ಲ . ಪ್ರಧಾನಿ ಜಾನ್ಸನ್ ಬ್ರೆಕ್ಸಿಟ್ ಒಕ್ಕೂಟ ಮತ್ತು ಆರ್ಥಿಕತೆಯ ಕುರಿತಾದ ಚರ್ಚೆಗಳಲ್ಲಿ ಮುಳುಗಿದ್ದರು. ಮುಕ್ತ ವ್ಯಾಪಾರದತ್ತ ಒಲವು ತೋರುತ್ತಿದ್ದ ಅವರಿಗೆ ಸೋಂಕಿನ ತೀವ್ರತೆ ಅರಿವಾಗಲೇ ಇಲ್ಲ.
Related Articles
ಮಾರ್ಚ್ ಆರಂಭದ ವೇಳೆಗೆ ಅನೇಕ ದೇಶಗಳಲ್ಲಿ ಕೋವಿಡ್-19ನ ಭೀಕರತೆ ಅರಿವಾಗ ತೊಡಗಿತ್ತು. ಪ್ರಾರಂಭಿಕ ಹಂತದಲ್ಲೇ ಎಚ್ಚೆತ್ತ ದಕ್ಷಿಣ ಕೊರಿಯಾ, ಸಿಂಗಾಪುರ, ಜರ್ಮನಿ ಮುಂತಾದ ಕೆಲ ರಾಷ್ಟ್ರಗಳು ಸೋಂಕು ನಿಯಂತ್ರಿಸಲು ತೊಡಗಿದವು. ಆದರೆ ಆ ವೇಳೆಗಾಗಲೇ ಅಮೆರಿಕ, ಇಟಲಿ, ಸ್ಪೇನ್, ದೇಶಗಳಲ್ಲಿ ಸೋಂಕಿನ ಆರ್ಭಟ ಮುಗಿಲು ಮಟ್ಟಿತ್ತು. ಇದನ್ನೂ ಕಂಡೂ ಬ್ರಿಟನ್‌ನಲ್ಲಿ ಯಾವುದೇ ಪರಿಣಾಮಕಾರಿ ನಿಯಮಗಳನ್ನು ಜಾರಿ ಮಾಡಲೇ ಇಲ್ಲ. ಲಾಕ್‌ಡೌನ್ ನಿಯಮಗಳನ್ನು ಜನರು ಪಾಲಿಸುವುದಿಲ್ಲ ಎಂದು ತನ್ನಷ್ಟಕ್ಕೆ ತಾನೇ ನಿರ್ಧರಿಸಿದ ಸರಕಾರವು, ಸಾಮೂಹಿಕ ಕೂಟಗಳನ್ನು , ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲೇ ಇಲ್ಲ. ಆ ಮೂಲಕ ಸಾಮಾಜಿಕ ಅಂತರ, ಲಾಕ್‌ಡೌನ್ ಮುಂತಾದ ನಿಯಮಗಳನ್ನು ಗಾಳಿಗೆ ತೂರಿದ ಬ್ರಿಟನ್ ಮಾರ್ಚ್ ಮಧ್ಯಾಂತರದಲ್ಲಿ ಲಾಕ್‌ಡೌನ್ ನಿರ್ಧಾರ ತಳೆಯಿತು. ಸೋಂಕು ತಡೆಯುವಲ್ಲಿ ಬ್ರಿಟನ್ ಟ್ರಯಲ್ ಆ್ಯಂಡ್ ಎರರ್ ಪದ್ಧತಿ ಅನುಸರಿಸಿತು. ಜಾಗತಿಕವಾಗಿ ಆಗುತ್ತಿರುವ ಬೆಳವಣಿಗೆಗಳಿಂದ ಕಲಿತು, ತನ್ನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಲೋಚಿಸಲಿಲ್ಲ. ಬದಲಾಗಿ ತನ್ನದೇ ರೀತಿಯಲ್ಲಿ ಬಿಕ್ಕಟ್ಟು ಪರಿಹರಿಸಲು ಹೋಗಿ, ಜಾಗತಿಕ ಮಟ್ಟದ ಪರಿಣಿತರ ಸಲಹೆಗಳನ್ನು ತಳ್ಳಿ ಹಾಕಿತು. ಆ ಪರಿಣಾಮ ಈಗ ಅನುಭವಿಸುವಂತಾಗಿದೆ.
Advertisement