Advertisement

ಸ್ತನ್ಯಪಾನ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

08:49 PM Jul 31, 2021 | Team Udayavani |

ಸ್ತನ್ಯಪಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ಮಕ್ಕಳ ಆರೋಗ್ಯವನ್ನು ಉತ್ತಮ ಗೊಳಿಸುವುದಕ್ಕಾಗಿ ವಿಶ್ವದ 120ಕ್ಕೂ ಹೆಚ್ಚು ದೇಶಗಳಲ್ಲಿ ಪ್ರತೀ ವರ್ಷ ಅಗಸ್ಟ್‌ 1ರಿಂದ 7ರ ವರೆಗೆ ಜಾಗತಿಕ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ. ಈ ಸಪ್ತಾಹದ ಮೂಲಕ ಜನರಲ್ಲಿ ಸ್ತನ್ಯಪಾನದ ಮಹತ್ವದ ಬಗ್ಗೆ ಅರಿವು ಮೂಡಿಸುವುದು, ಸ್ತನ್ಯಪಾನದ ಉಪಯೋಗದ ಬಗ್ಗೆ ತಿಳುವಳಿಕೆ ನೀಡುವುದು, ಹಾಗೂ ಎದೆ ಹಾಲು ಹೊರತುಪಡಿಸಿ ಇತರ ಹಾಲು/ನೀರು, ಆಹಾರ ನೀಡುವಿಕೆಯಿಂದ ಮಗುವಿನ ಆರೋಗ್ಯದ ಮೇಲೆ ಆಗುವ ಪರಿಣಾಮದ ಕುರಿತು ಮಾಹಿತಿ ನೀಡುವುದು ಮುಖ್ಯ ಉದ್ದೇಶವಾಗಿದೆ.

Advertisement

“ಸ್ತನ್ಯಪಾನ ರಕ್ಷಣೆ- ಪ್ರತಿಯೊಬ್ಬರ ಜವಾಬ್ದಾರಿ’ ಇದು 2021ರ ಸ್ತನ್ಯಪಾನ ಸಪ್ತಾಹದ ವಿಷಯ. ಇದು ನವಜಾತ ಶಿಶುವಿನ ಆರೋಗ್ಯ ಮತ್ತು ಬೆಳವಣಿಗೆಗೆ ಅಗತ್ಯವಾಗಿರುವ ಸ್ತನ್ಯಪಾನದ ರಕ್ಷಣೆ ಹಾಗೂ ಇದಕ್ಕೆ ಪ್ರತಿಯೊಬ್ಬರ ಪ್ರೋತ್ಸಾಹ ಮತ್ತು ಬೆಂಬಲದ ಅಗತ್ಯದ ಕುರಿತ ಮಾಹಿತಿಯನ್ನು ನೀಡುತ್ತದೆ.

ಮಗುವಿಗೆ ಯಾವಾಗದಿಂದ ಎದೆಹಾಲು ನೀಡಲು ಪ್ರಾರಂಬಿಸಬೇಕು? :

  • ಮಗು ಜನಿಸಿದ ತತ್‌ಕ್ಷಣವೇ ಮಗುವಿಗೆ ತಾಯಿಯ ಎದೆಹಾಲು ನೀಡಲು ಪ್ರಾರಂಭಿಸಬೇಕು.
  • ತಾಯಿ ಮತ್ತು ಮಗು ಸದಾ ಜತೆಯಲ್ಲಿರಬೇಕು. ಇದು ಎದೆಹಾಲು ಸರಾಗವಾಗಿ ಹರಿಯಲು ಸಹಾಯವಾಗುತ್ತದೆ.
  • ಒಂದು ವೇಳೆ ಸಿಸೇರಿಯನ್‌ ಹೆರಿಗೆಯಾದಲ್ಲಿ ಶಸ್ತ್ರಚಿಕಿತ್ಸೆ ನಡೆದ ನಾಲ್ಕು ಗಂಟೆಗಳ ಒಳಗೆ ಅಥವಾ ಅರಿವಳಿಕೆಯ ಪ್ರಭಾವ ಕಡಿಮೆಯಾದ ಅನಂತರ ಮಗುವಿಗೆ ಹಾಲುಣಿಸಬೇಕು.
  • ಮಗುವಿಗೆ ದಿನಕ್ಕೆ 8 ರಿಂದ 10 ಸಲ ಹಾಲು ಉಣಿಸಬೇಕಾಗುತ್ತದೆ. ಆದರೆ ಗಂಟೆಗನುಸಾರವಾಗಿ ಹಾಲುಣಿಸುವ ಬದಲು ಮಗುವಿನ ಅಗತ್ಯಕ್ಕನುಸಾರವಾಗಿ ಹಾಲುಣಿಸುವುದು ಆವಶ್ಯಕ.
  • ಮಗುವಿಗೆ 6 ತಿಂಗಳು ತುಂಬುವ ವರೆಗೆ ಕೇವಲ ಎದೆ ಹಾಲು ಮಾತ್ರ ನೀಡಬೇಕು. ಬೇರೆ ಯಾವುದೇ ಆಹಾರ/ನೀರನ್ನು ನೀಡುವ ಆವಶ್ಯಕತೆ ಇರುವುದಿಲ್ಲ. ಮಗುವಿಗೆ ಬೇಕಾಗಿರುವ ಎಲ್ಲ ಪೌಷ್ಟಿಕಾಂಶಗಳು ಎದೆಹಾಲಿನಲ್ಲಿಯೇ ಇರುತ್ತವೆ.
  • 6 ತಿಂಗಳುಗಳ ಬಳಿಕ ಮಗುವಿನ ಬೆಳವಣಿಗೆಗೆ ಪೂರಕ ಆಹಾರದ ಆವಶ್ಯಕತೆ ಇರುತ್ತದೆ. ಪೂರಕ ಆಹಾರದೊಂದಿಗೆ ಮಗುವಿಗೆ 2 ವರ್ಷದವರೆಗೆ ಎದೆ ಹಾಲು ನೀಡುವುದನ್ನು ಮುಂದುವರಿಸಬೇಕು.
  • ತಾಯಿಯು ಅನಾರೋಗ್ಯದಿಂದ ಬಳಲುತ್ತಿದ್ದರೂ ತನ್ನ ಮಗುವಿಗೆ ಹಾಲುಣಿಸಬಹುದು.

ಕೊಲೋಸ್ಟ್ರಂ (colostrum):

ಕೊಲೋಸ್ಟ್ರಂ ಎನ್ನುವುದು ಹೆರಿಗೆಯಾದ ಮೊದಲ 2-3 ದಿನಗಳಲ್ಲಿ ತಾಯಿ ಸ್ರವಿಸುವಂತಹ ವಿಶೇಷ ಹಾಲು. ಈ ಹಾಲು ಹಳದಿ ಮಿಶ್ರಿತ ಬಣ್ಣದಲ್ಲಿದ್ದು, ಸ್ವಲ್ಪವೇ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಕೊಲೊಸ್ಟ್ರಂಯುಕ್ತ ಹಾಲು ಬಿಳಿಯ ರಕ್ತಕಣಗಳು ಮತ್ತು ರೋಗನಿರೋಧಕ ಅಂಶಗಳಿಂದ ಸಮೃದ್ಧವಾಗಿರುತ್ತದೆ. ಇದರಲ್ಲಿ ಪ್ರೋಟೀನ್‌, ಖನಿಜಾಂಶಗಳು ಮತ್ತು ಕೊಬ್ಬಿನಲ್ಲಿ ಕರಗುವಂತಹ ವಿಟಮಿನ್‌ಗಳು (ವಿಟಮಿನ್‌ ಎ, ಇ ಮತ್ತು ಕೆ) ವಿಶೇಷ ಪ್ರಮಾಣದಲ್ಲಿರುತ್ತವೆ. ಹಾಗಾಗಿ ಮಗು ಜನಿಸಿದ ಕೂಡಲೇ ಕೊಲೋಸ್ಟ್ರಂ ಹೊಂದಿರುವ ತಾಯಿಯ ಹಾಲನ್ನು ಮಗುವಿಗೆ ನೀಡಬೇಕು. ಕೋಲೋಸ್ಟ್ರಂಯುಕ್ತ ಹಾಲು ಕುಡಿಸುವುದರಿಂದ ಮಗುವಿಗೆ ಕಾಯಿಲೆಗಳಿಂದ ರಕ್ಷಣೆ ದೊರೆಯುತ್ತದೆ. ಸಾಮಾನ್ಯ ಎದೆಹಾಲಿಗಿಂತ ಈ ಹಾಲು ಬಣ್ಣ ಹಾಗೂ ಪ್ರಮಾಣದಲ್ಲಿ ಭಿನ್ನವಾಗಿರುವುದರಿಂದ ಕೆಲವರು ಈ ಹಾಲನ್ನು ಮಗುವಿಗೆ ನೀಡದೆ ಚೆಲ್ಲುತ್ತಾರೆ. ಅದರ ಬದಲಾಗಿ ನೀರು, ದನದ ಹಾಲು, ಜೇನು ತುಪ್ಪ, ಕಷಾಯಗಳನ್ನು ನೀಡುವ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಪದ್ಧತಿಯನ್ನು ಅನುಸರಿಸುವುದರಿಂದ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಕೊಲೋಸ್ಟ್ರಂ ಬದಲಾಗಿ ಬೇರೆ ಯಾವುದೇ ಆಹಾರ/ನೀರನ್ನು ನೀಡುವುದು ಒಳ್ಳೆಯ ಅಭ್ಯಾಸವಲ್ಲ.

Advertisement

ತಾಯಿಯ ಎದೆಹಾಲು ಮಗುವಿಗೆ ಸಾಕಾಗುವಷ್ಟು  ದೊರೆಯುತ್ತಿದೆಯೇ ಇಲ್ಲವೇ ಎಂದು ತಿಳಿಯುವುದು ಹೇಗೆ?

  • ಸರಿಯಾಗಿ ಎದೆ ಹಾಲು ಕುಡಿದ ಮಗು ದಿನಕ್ಕೆ ಕನಿಷ್ಠ 6 ಬಾರಿ ಮೂತ್ರ ಮಾಡುತ್ತದೆ.
  • ಮಗು ವಿಸರ್ಜಿಸುವ ಮಲವು ಹಳದಿ ಬಣ್ಣದಿಂದ ಕೂಡಿರುತ್ತದೆ.
  • ಮಗುವಿನ ತೂಕದಲ್ಲಿ ಗಣನೀಯವಾದ ಏರಿಕೆ ಕಂಡು ಬರುತ್ತದೆ.
  • ಮಗು ಚೆನ್ನಾಗಿ ನಿದ್ರಿಸುತ್ತದೆ.

ಕೊರೋನಾ ಸೋಂಕಿಗೆ ತುತ್ತಾಗಿರುವ ತಾಯಿ ಮಗುವಿಗೆ  ಎದೆಹಾಲು ನೀಡುವಾಗ ಅನುಸರಿಸಬೇಕಾದ ಕ್ರಮಗಳು :

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳು ಆಗಿದ್ದರೂ ಕೂಡ ಹೊಸ ಸವಾಲುಗಳು, ರೋಗಗಳು ಕಂಡುಬರುತ್ತದೆ. ಪ್ರಸ್ತುತ ಆರೋಗ್ಯ ಕ್ಷೇತ್ರಕ್ಕೆ ಸವಾಲಾಗಿರುವುದು ಕೋವಿಡ್‌-19 ಸೋಂಕು. ಇದುವರೆಗೆ ನಡೆಸಲಾದ ವೈದ್ಯಕೀಯ ಸಂಶೋಧನೆಗಳ ಪ್ರಕಾರ ಕೊರೊನಾ ಸೋಂಕುಪೀಡಿತ ತಾಯಿಯು ಮಗುವಿಗೆ ಎದೆಹಾಲು ನೀಡಿದಲ್ಲಿ ಸೋಂಕು ಮಗುವಿಗೆ ಹರಡುವುದಿಲ್ಲ. ಆದ್ದರಿಂದ ಸೋಂಕುಪೀಡಿತ ತಾಯಿ ಯಾವುದೇ ಕಾರಣಕ್ಕೂ ತನ್ನ ಮಗುವಿಗೆ ಎದೆಹಾಲು ನೀಡುವುದನ್ನು ನಿಲ್ಲಿಸಬಾರದು.

  • ಎದೆಹಾಲು ನೀಡುವಾಗ ತಪ್ಪದೇ ಮಾಸ್ಕ್ ಧರಿಸಬೇಕು.
  • ಎದೆಹಾಲು ನೀಡುವ ಮುನ್ನ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು
  • ತೀರಾ ಅಗತ್ಯದ ಸಂದರ್ಭದಲ್ಲಿ ಮಾತ್ರ ಮಗುವಿಗೆ ಕೃತಕ ಹಾಲು ನೀಡಬಹುದಾಗಿದೆ.
  • ತುರ್ತು ಚಿಕಿತ್ಸೆಯ ಅಗತ್ಯವಿರುವ ಸೋಂಕಿತ ತಾಯಿಯ ಹಾಲನ್ನು ಶುಚಿತ್ವದ ಎಲ್ಲಾ ಕ್ರಮಗಳನ್ನು ಅನುಸರಿಸಿ ಶುದ್ಧವಾದ ಪಾತ್ರೆಯಲ್ಲಿ ಸಂಗ್ರಹಿಸಿ ಚಮಚದ ಮೂಲಕ ಮಗುವಿಗೆ ನೀಡಬೇಕು.

ಮಗುವಿಗೆ ಎದೆಹಾಲುಣಿಸುವ ವಿಧಾನ :

  • ಎದೆಹಾಲು ನೀಡುವ ಮುನ್ನ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.
  • ಬೆನ್ನಿಗೆ ಆಧಾರ ನೀಡುವ ಆರಾಮದಾಯಕ ಕುರ್ಚಿ ಅಥವಾ ದಿಂಬನ್ನು ಇಟ್ಟುಕೊಂಡು ಮಗುವಿಗೆ ಹಾಲು ಕುಡಿಸಬೇಕು.
  • ಮಗುವಿಗೆ ಹಾಲುಣಿಸುವ ಮೊದಲು ಸ್ತನವನ್ನು ನಿಧಾನವಾಗಿ ಮತ್ತು ಮೃದುವಾಗಿ ಮಸಾಜ್‌ ಮಾಡಿಕೊಳ್ಳಬೇಕು.
  • ಸಾಮಾನ್ಯವಾಗಿ ಒಮ್ಮೆ ಕನಿಷ್ಠ 20 ನಿಮಿಷಗಳ ಕಾಲ ಎದೆ ಹಾಲು ನೀಡಬೇಕು. ಇದರಿಂದ ತಾಯಿಯ ಎದೆ ಹಾಲಿನ ಪ್ರಮಾಣ ಜಾಸ್ತಿಯಾಗಲು ಸಹಾಯವಾಗುತ್ತದೆ.
  • ಪ್ರತೀ ಬಾರಿ ಹಾಲು ನೀಡುವಾಗ ಒಂದು ಸ್ತನದಲ್ಲಿರುವ ಹಾಲು ಪೂರ್ತಿ ಖಾಲಿಯಾದ ಬಳಿಕ ಮತ್ತೂಂದು ಸ್ತನದ ಹಾಲು ನೀಡಬೇಕು.
  • ಎದೆಹಾಲು ನೀಡುವಾಗ ಮಗುವಿನ ಶರೀರ ಎದೆ ಮುಂಭಾಗದಲ್ಲಿದ್ದು ಮಗುವಿನ ಹೊಟ್ಟೆ ತಾಯಿಯ ಹೊಟ್ಟೆಗೆ ತಾಗಿಕೊಂಡಿರಬೇಕು. ಮಗುವಿನ ತಲೆ, ಬೆನ್ನು, ನೇರವಾಗಿರಬೇಕು.
  • ಮಗು ಎದೆಹಾಲು ಚೀಪುವಾಗ ಕೇವಲ ಸ್ತನದ ತೊಟ್ಟು ಮಾತ್ರವಲ್ಲ ಸ್ತನದ ಕಪ್ಪಿನ ಭಾಗವನ್ನು ಪೂರ್ತಿಯಾಗಿ ತನ್ನ ಬಾಯಿಯೊಳಗೆ ತೆಗೆದುಕೊಂಡಿರಬೇಕು.
  • ತಾಯಿಗೆ ಮಗು ಹಾಲು ನುಂಗುವ ಶಬ್ದ ಕೇಳುತ್ತಿರಬೇಕು.
  • ಮಗು ಸರಿಯಾಗಿ ಎದೆ ಹಾಲು ಕುಡಿಯುತ್ತಿದೆಯೇ ಎಂದು ಆಗಾಗ್ಗೆ ಗಮನಿಸುತ್ತಿರಬೇಕು.
  • ಎದೆ ಹಾಲು ನೀಡಲು ಬಾಟಲಿ ಅಥವಾ ಇತರ ಕ್ರತಕ ವಸ್ತುಗಳನ್ನು ಬಳಸುವುದನ್ನು ತಪ್ಪಿಸಬೇಕು.

ಸ್ತನ್ಯಪಾನದಿಂದ ಮಗುವಿಗೆ ಆಗುವ ಪ್ರಯೋಜನಗಳು :

  • ನವಜಾತ ಶಿಶುವಿಗೆ 6 ತಿಂಗಳುಗಳ ಕಾಲ ಆವಶ್ಯಕ ಇರುವ ಕೊಬ್ಬು, ಕಾಬೋìಹೈಡ್ರೇಟ್‌, ಪ್ರೊಟೀನ್‌, ವಿಟಮಿನ್‌, ಖನಿಜಾಂಶಗಳು ಮತ್ತು ನೀರು ಹೀಗೆ ಎಲ್ಲ ಅಂಶಗಳನ್ನು ತಾಯಿಯ ಎದೆಹಾಲು ಒಳಗೊಂಡಿರುತ್ತದೆ. ಸ್ತನ್ಯಪಾನವು ಮಗುವಿಗೆ ವಿವಿಧ ರೀತಿಯ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ.
  • ಇತರ ಹಾಲು ಮಗುವಿಗೆ ಜೀರ್ಣಿಸಿಕೊಳ್ಳುವುದು ಕಷ್ಟ, ಮತ್ತು ಅಲರ್ಜಿಗೆ ಕಾರಣವಾಗುತ್ತದೆ. ಮಗುವಿಗೆ ಎದೆಹಾಲನ್ನು ಜೀರ್ಣಿಸಿಕೊಳ್ಳುವುದು ಬಹಳ ಸುಲಭ. ಇದು ವಾಂತಿ ಬೇಧಿ ಸಮಸ್ಯೆಯಿಂದ ಮಗುವನ್ನು ರಕ್ಷಿಸುತ್ತದೆ. ಇದರಿಂದ ಮಲಬದ್ಧತೆಯುಂಟಾಗುವುದಿಲ್ಲ.
  • ಎದೆಹಾಲು ನೀಡುವುದರಿಂದ ಮಗು ಸೋಂಕುಗಳಿಗೆ ತುತ್ತಾಗದಂತೆ ರಕ್ಷಣೆ ನೀಡುವುದರೊಂದಿಗೆ ಮುಂದೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಂದ ರಕ್ಷಿಸುತ್ತದೆ.
  • ತಾಯಿಯ ಎದೆಹಾಲು ಸೇವನೆಯಿಂದ ಮಕ್ಕಳ ಬುದ್ಧಿ ಶಕ್ತಿ ಮತ್ತು ಗ್ರಹಣ ಶಕ್ತಿಯ ಬೆಳವಣಿಗೆಗೆ ಸಹಾಯವಾಗುತ್ತದೆ.
  • ತಾಯಿಯ ಎದೆಹಾಲು ಸೇವಿಸುವುದರಿಂದ ಮಗುವಿನಲ್ಲಿ ಬೊಜ್ಜುತನ ಕಂಡುಬರುವ ಸಾಧ್ಯತೆ ಕಡಿಮೆ.

ಸ್ತನ್ಯಪಾನದಿಂದ ತಾಯಿಗೆ ಆಗುವ ಪ್ರಯೋಜನಗಳು :

  • ಸ್ತನ್ಯಪಾನದಿಂದ ತಾಯಿ ಮತ್ತು ಮಗುವಿನ ನಡುವೆ ಭಾಂಧವ್ಯ ಹೆಚ್ಚಾಗುತ್ತದೆ.
  • ಎದೆಹಾಲು ಕುಡಿಸುವ ತಾಯಂದಿರಿಗೆ ಸ್ತನ ಕ್ಯಾನ್ಸರ್‌ ಹಾಗೂ ಗರ್ಭಕೋಶದ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಹೆರಿಗೆಯ ಅನಂತರ ತೀವ್ರ ರಕ್ತಸ್ರಾವ ಆಗುವುದರ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಹಾಲುಣಿಸುವಾಗ ಬಿಡುಗಡೆಯಾಗುವ ಹಾರ್ಮೋನ್‌ಗಳಿಂದ ಮಗುವಿನ ಹೆರಿಗೆಯ ವೇಳೆ ಹಿಗ್ಗಿದ ಗರ್ಭಕೋಶವು ಸಾಮಾನ್ಯ ಸ್ಥಿತಿಗೆ ಬರಲು ಸಹಾಯವಾಗುತ್ತದೆ.
  • ಮಗುವಿಗೆ ತಾಯಿ ಎದೆಹಾಲು ನೀಡುವುದರಿಂದ ಮತ್ತೂಂದು ಗರ್ಭಧಾರಣೆಯನ್ನು (6 ತಿಂಗಳುಗಳವರೆಗೆ) ತಡೆಯುತ್ತದೆ.
  • “ಆಸ್ಟಿಯೊಪೊರೊಸಿಸ್‌’ ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಯಿಂದ ತಾಯಿಯನ್ನು ರಕ್ಷಿಸಲು ಸ್ತನ್ಯಪಾನ ಸಹಾಯ ಮಾಡುತ್ತದೆ.
  • ಗರ್ಭಾವಸ್ಥೆಯಲ್ಲಿ ಉಂಟಾದ ಬೊಜ್ಜನ್ನು ನಿವಾರಿಸಲು ಸ್ತನ್ಯಪಾನ ಸಹಾಯ ಮಾಡುತ್ತದೆ.
  • ತಾಯಿಗೆ ರಕ್ತದೊತ್ತಡ, ಕೊಲೆಸ್ಟ್ರಾಲ್‌ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
  • ತಾಯಿಯ ಒತ್ತಡ ಮಟ್ಟವನ್ನು ಮತ್ತು ಹೆರಿಗೆಯ ಬಳಿಕದ ಖನ್ನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಗುವಿನ ಆರೋಗ್ಯ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ತಾಯಿಯ ಎದೆಹಾಲು ಮಗುವಿಗೆ ಅಮೃತ ಸಮಾನ. ಉತ್ತಮ ಆರೋಗ್ಯಕ್ಕಾಗಿ ವಯಸ್ಸಿಗನುಗುಣವಾಗಿ ಸರಕಾರದ ವೇಳಾಪಟ್ಟಿಯಲ್ಲಿರುವ ಲಸಿಕೆ, ಚುಚ್ಚುಮದ್ದುಗಳನ್ನು ತಪ್ಪದೇ ನೀಡುವುದು  ಕೂಡ ಆವಶ್ಯಕ.

ರಾಘವೇಂದ್ರ ಭಟ್‌ ಎಂ.

ಆರೋಗ್ಯ ಸಹಾಯಕರು

ಡಾ| ಚೈತ್ರಾ ಆರ್‌. ರಾವ್‌

ಸಹ ಪ್ರಾಧ್ಯಾಪಕರು

ಸಮುದಾಯ ವೈದ್ಯಕೀಯ ವಿಭಾಗ ಮತ್ತು ಕೋ-ಆರ್ಡಿನೇಟರ್‌, ಸೆಂ

ಟರ್‌ ಫಾರ್‌ ಟ್ರಾವೆಲ್‌ ಮೆಡಿಸಿನ್‌, ಕೆ.ಎಂ.ಸಿ. ಮಣಿಪಾಲ

 

Advertisement

Udayavani is now on Telegram. Click here to join our channel and stay updated with the latest news.

Next