Advertisement
ದೇಶದ ಇತರೆ ಮಹಾನಗರಗಳು ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹೆಚ್ಚಿನ ಜಾಗೃತಿ ಹೊಂದಿರುವ ಹಾಗೂ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯವಿರುವ ಬೆಂಗಳೂರಿನಲ್ಲಿಯೇ ಸ್ತನ ಕ್ಯಾನ್ಸರ್‌ಗೆ ತತ್ತಾಗುವವರ ಸಂಖ್ಯೆ ಹೆಚ್ಚಿರುವುದು ಅಧ್ಯಯನದಿಂದ ದೃಢಪಟ್ಟಿದೆ.
Related Articles
Advertisement
ಈವರೆಗೂ ಕ್ಯಾನ್ಸರ್‌ನಿಂದ ಮೃತಪಟ್ಟ ಮಹಿಳೆಯರಲ್ಲಿ ಶೇ.50ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದಲೇ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ವಾರ್ಷಿಕ ಏಳು ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಶೇ.5 ರಿಂದ 6 ರಷ್ಟು ಏರಿಕೆ ಆಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಚಿಕ್ಕ ವಯಸ್ಸಿನವರಲ್ಲೂ ಪತ್ತೆ: ಈ ಹಿಂದೆ ಸ್ತನ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದ ಮಹಿಳೆಯರ ಸರಾಸರಿ ವಯೋಮಿತಿ 35 ರಿಂದ 40 ವರ್ಷ ಇತ್ತು. ಆದರೆ ಈಗ 20 ವರ್ಷದ ಯುವತಿಯರಲ್ಲೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದ್ದು, ಕಳೆದ ತಿಂಗಳು ಕಿದ್ವಾಯಿ ಆಸ್ಪತ್ರೆಯಲ್ಲಿ 20 ವರ್ಷದ ಯುವತಿಯೊಬ್ಬರು ಸ್ತನ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಪಡೆದಿದ್ದಾರೆ. ಕಳೆದ ಎರಡು ಮೂರು ತಿಂಗಳಲ್ಲಿ 20ರಿಂದ 25 ವರ್ಷದ ಐದಾರು ಯುವತಿಯರು ಸ್ತನ ಕ್ಯಾನ್ಸರ್ ಚಿಕಿತ್ಸೆ ಪಡೆದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.
ಆರಂಭಿಕ ಹಂತದಲ್ಲೇ ಜಾಗೃತಿ ಅತ್ಯವಶ್ಯಕ: ನಗರದ ಸುಶಿಕ್ಷಿತ ಮಂದಿಯಲ್ಲಿಯೇ ಹೆಚ್ಚಾಗಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದ್ದರೂ ಆರಂಭಿಕ ಹಂತದಲ್ಲೇ ಪತ್ತೆಯಾಗದಿರುವುದು, ಸೂಕ್ತ ಚಿಕಿತ್ಸೆ ಪಡೆಯದೆ ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಿದೆ. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಯಾದರೆ ಶೇ. 80ಕ್ಕಿಂತ ಹೆಚ್ಚು ರೋಗಿಗಳು ಗುಣಮುಖರಾಗಬಹುದು.
ಮೊದಲನೇ ಮತ್ತು ಎರಡನೇ ಹಂತದಲ್ಲಿದ್ದಾಗ ಶೇ.20 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಮೂರನೇ ಹಂತ ತಲುಪಿದಾಗ ಶೇ.65ರಷ್ಟು ಮಂದಿ ಚಿಕಿತ್ಸೆಗೆ ಧಾವಿಸುತ್ತಾರೆ. ಇನ್ನು ಕೊನೆಯ ಹಂತ ಅಂದರೆ ರೋಗವು ದೇಹ ಪೂರ್ತಿ ವ್ಯಾಪಿಸಿಕೊಂಡ ಹಂತದಲ್ಲಿ ಶೇ.15 ರಷ್ಟು ಮಂದಿ ಚಿಕಿತ್ಸೆಗೆ ಬರುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ರೋಗ ಲಕ್ಷಣ ಅರಿತು ಶೀಘ್ರವೇ ಜಾಗ್ರತಿ ಕ್ರಮ ಕೈಗೊಳ್ಳುವುದು ಮುಖ್ಯ ಎನ್ನುತ್ತಾರೆ ವೈದ್ಯರು.
ಸ್ತನ ಕ್ಯಾನ್ಸರ್‌ಗೆ ಕಾರಣವೇನು?: ಒತ್ತಡದ ಜೀವನ ಶೈಲಿ, ಮದ್ಯ ಹಾಗೂ ಧೂಮಪಾನ, ಬೊಜ್ಜು, ವಿಳಂಬವಾಗಿ ಮದುವೆ, ತಡವಾಗಿ ಮಕ್ಕಳಾಗುವುದು (30 ವರ್ಷದ ನಂತರ), ಚಿಕ್ಕವಯಸ್ಸಿನಲ್ಲಿಯೇ ಋತುಮತಿ ಹಾಗೂ ತಡವಾಗಿ ಮುಟ್ಟು ನಿಲ್ಲುವುದು. ಋತು ಚಕ್ರದಲ್ಲಿ ದೀರ್ಘಾವಧಿ ವ್ಯತ್ಯಯ, ಮಕ್ಕಳಿಗೆ ಸ್ತನಪಾನ ಮಾಡಿಸಲು ಹಿಂಜರಿಕೆ. ವಂಶಾವಳಿ ಸ್ತನ ಕ್ಯಾನ್ಸರ್‌ಗೆ ಕಾರಣವಾಗಿದೆ.
ಸ್ತನ ಕ್ಯಾನ್ಸರ್ ಲಕ್ಷಣವೇನು?: ಸ್ತನದಲ್ಲಿ ಗಂಟು, ಸ್ತನ ಗಾತ್ರ ಜಾಸ್ತಿಯಾಗುವುದು, ತೊಟ್ಟಿನಲ್ಲಿ ಉಣ್ಣು ಕಾಣಿಸಿಕೊಂಡಾಗ, ಸ್ತನದ ತೊಟ್ಟಿನಲ್ಲಿ ದ್ರವದಂತಹ ವಸ್ತು ಅಥವಾ ರಕ್ತ ಸ್ರಾವ ಕಂಡುಬಂದರೆ, ಸ್ತನದ ಮೇಲಿನ ಚರ್ಮ ಕೆಂಪಾಗುವಿಕೆ, ಕಂಕಳು ಭಾಗದಲ್ಲಿ ಗಂಟು ಕಾಣಿಸಿಕೊಳ್ಳುವುದು.
ವರ್ಷಕ್ಕೊಮ್ಮೆ ಪರೀಕ್ಷೆ ಮಾಡಿಸಿ: ಮಹಿಳೆಯರು ಮನೆಯಲ್ಲಿಯೇ ತಿಂಗಳಿಗೊಮ್ಮೆ ಸ್ತನಗಳಲ್ಲಿ ಗಂಟು ಇರುವುದನ್ನು ತಪಾಸಣೆ ಮಾಡಿಕೊಳ್ಳುತ್ತಿದ್ದರೆ ಸ್ತನ ಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತದಲ್ಲೇ ಕಂಡುಹಿಡಿಯಬಹುದು. 18 ವರ್ಷ ತುಂಬಿದ ಪ್ರತಿಯೊಬ್ಬ ಯುವತಿಯರು ತಮ್ಮ ಸ್ತನಗಳನ್ನು ತಿಂಗಳಿಗೊಮ್ಮೆ ಹಾಗೂ 40 ವರ್ಷ ದಾಟಿದ ಮಹಿಳೆಯರು ಒಂದು ವರ್ಷಕ್ಕೆ ಒಮ್ಮೆ ಕಡ್ಡಾಯವಾಗಿ ಮ್ಯಾಮೋಗ್ರಫಿ ಪರೀಕ್ಷೆಗೆ ಒಳಪಡಿಸುವುದು ಸೂಕ್ತ ಎನ್ನುತ್ತಾರೆ ವೈದ್ಯರು. ಇನ್ನು ಪುರುಷರು ಸ್ತನ ಕ್ಯಾನ್ಸರ್ ತುತ್ತಾಗುತ್ತಿದ್ದು, ಲಕ್ಷಕ್ಕೆ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಂಸ್ಥೆಯಲ್ಲಿ ಒಂದು ತಿಂಗಳು ಉಚಿತವಾಗಿ ಸ್ತನ ಕ್ಯಾನ್ಸರ್ ತಪಾಸಣೆ ನಡೆಸಲಾಗುತ್ತದೆ. ಉಚಿತವಾಗಿ ಮ್ಯಾಮೋಗ್ರಫಿ ಮಾಡುತ್ತೇವೆ. ಅಕ್ಟೋಬರ್ ಅನ್ನು ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತದೆ. ಈ ಉದ್ದೇಶದಿಂದ ಕಿದ್ವಾಯಿ ಸಂಸ್ಥೆ ನಗರದ ಕೆಲ ಮಹಿಳೆಯರ ಕಾಲೇಜುಗಳಲ್ಲಿ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.-ಡಾ.ರಾಮಚಂದ್ರ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ * ಜಯಪ್ರಕಾಶ್ ಬಿರಾದಾರ್