Advertisement

ಕಾಂಕ್ರೀಟ್‌ ರಸ್ತೆಗಳನಡುವೆಏರುತಗ್ಗು: ದ್ವಿಚಕ್ರ ವಾಹನಸವಾರರಿಗೆಸಂಕಷ್ಟ

10:34 AM Apr 23, 2018 | |

ಮಹಾನಗರ: ನಗರದ ಬಹುತೇಕ ಭಾಗಗಳ ಕಾಂಕ್ರೀಟ್‌ ರಸ್ತೆಗಳು ಸಮತಟ್ಟಾಗಿ ಇಲ್ಲದಿರುವುದು ದ್ವಿಚಕ್ರವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

Advertisement

ನಗರದಲ್ಲಿ ಡಾಮರು ರಸ್ತೆಗಳ ಬದಲಿಗೆ ಕಾಂಕ್ರೀಟ್‌ ರಸ್ತೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬಹುತೇಕ ಭಾಗಗಳಲ್ಲಿ ಕಾಂಕ್ರೀಟ್‌ ರಸ್ತೆಗಳನ್ನೇ ಮಾಡಲಾಗಿದೆ. ಆದರೆ ಇತ್ತೀಚೆಗೆ ರಸ್ತೆಗಳ ಮಧ್ಯದಲ್ಲಿ ಬಿರುಕು ಬಿಟ್ಟಿರುವುದು ಗೋಚರಿಸುತ್ತಿದ್ದು, ಇದು ಹೆಚ್ಚಾಗಿ ದ್ವಿಚಕ್ರ ವಾಹನ ಸವಾರರ ಮೇಲೆ ಪರಿಣಾಮ ಬೀರುತ್ತಿದೆ.

ಇನ್ನೂ ಕೆಲವು ಭಾಗಗಳಲ್ಲಿ ಉಬ್ಬು ತಬ್ಬುಗಳಿಗೆ ಬಣ್ಣ ಬಳಿಯದೆ ಇರುವುದು, ರಸ್ತೆಯ ನಡುವಿನ ಅಂತರಗಳು ರಸ್ತೆಯಲ್ಲಿ ಗುಂಡಿಗಳುಂಟಾ ಗುವುದಕ್ಕಿಂತಲೂ ಅಪಾಯಕಾರಿಯಾಗಿದೆ. ಗುಂಡಿಗಳು ದೂರದಿಂದಲೇ ಕಾಣುತ್ತವೆ. ಆದರೆ ಅನಿರೀಕ್ಷಿತ ಉಬ್ಬುತಬ್ಬುಗಳು, ರಸ್ತೆಯಲ್ಲಿ ಬಿರುಕುಗಳು ದೂರದಿಂದ ಗೋಚರಿಸದೆ ಇರುವುದರಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ದ್ವಿಚಕ್ರ ವಾಹನ ಸವಾರರೇ ಎಚ್ಚರ
ಅನಿರೀಕ್ಷಿತ ಉಬ್ಬುತಗ್ಗುಗಳು, ರಸ್ತೆಗಳು ಸಮತಟ್ಟಾಗಿ ಇಲ್ಲದಿರುವುದು ದೂರದಿಂದ ಕಾಣದೆ ಇರುವುದರಿಂದ ವೇಗವಾಗಿ ಬರುವ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚು. ಎರಡು ರಸ್ತೆಗಳ ನಡುವಿನ ಅಂತರದಲ್ಲಿ ದ್ವಿಚಕ್ರ ವಾಹನಗಳ ಟೈರ್‌ ಸಿಲುಕಿ ಆಯತಪ್ಪಿ ವಾಹನ ಸಮೇತ ಸವಾರರು ನೆಲಕ್ಕೆ ಬೀಳುತ್ತಾರೆ. ಇದರಿಂದ ತರುಚಿದ ಗಾಯದಿಂದ ಗಂಭೀರ ಗಾಯಗೊಂಡ ಪ್ರಕರಣಗಳೂ ನಗರದಲ್ಲಿವೆ.

ಎಲ್ಲೆಲ್ಲಿ ಈ ಸಮಸ್ಯೆ
ಈ ಸಮಸ್ಯೆಗಳು ಹೆಚ್ಚಾಗಿ ನಗರದ ಪ್ರಮುಖ ಭಾಗಗಳಲ್ಲೇ ಇರುವುದು ವಿಶೇಷ. ಪಾಲಿಕೆ ಮುಂಭಾಗದಲ್ಲಿರುವ ಬಸ್‌ ನಿಲ್ದಾಣದ ಎದುರು, ಕರಾವಳಿ ಉತ್ಸವ ಮೈದಾನದ ಎದುರು, ಲೇಡಿಹಿಲ್‌ ವೃತ್ತದ ಪೆಟ್ರೋಲ್‌ ಬಂಕ್‌ ಮುಂಭಾಗದಲ್ಲಿ ಈ ಸಮಸ್ಯೆ ಗೋಚರಿಸುತ್ತದೆ. ಲೈಟ್‌ಹೌಸ್‌ ಹಿಲ್‌, ಕಾಪಿಕಾಡ್‌, ಎಂಪೈರ್‌ಮಾಲ್‌ ಬಳಿ, ಜ್ಯೋತಿ ವೃತ್ತದಿಂದ – ಮಿಲಾಗ್ರಿಸ್‌ ಹಂಪನ್‌ಕಟ್ಟೆ ಹೋಗುವ ರಸ್ತೆ, ಬಂಟ್ಸ್‌ ಹಾಸ್ಟೆಲ್‌ ಬಳಿ, ಕೆಎಸ್‌ಆರ್‌ಟಿಸಿ ರಸ್ತೆಯ ಕೆಲವು ಭಾಗಗಳಲ್ಲಿ ಕಾಣಸಿಗುತ್ತದೆ.

Advertisement

ಇನ್ನೊಂದು ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಬೇಸಗೆ ಕಾಲದಲ್ಲಿಯೇ ಇಂತಹ ಅಪಘಾತಗಳ ಸಂಭವಿಸುತ್ತಿದ್ದು, ಇದನ್ನು ನಿರ್ಲಕ್ಷಿಸಿದರೆ ಮಳೆಗಾಲದಲ್ಲಿ ಅಪಘಾತಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಎಂದು ಸಾರ್ವಜನಿಕರು ದೂರಿದ್ದಾರೆ.

ಇಂಟರ್‌ಲಾಕ್‌ನಲ್ಲೂ ಸಮಸ್ಯೆ
ನಗರದ ಕಾಂಕ್ರೀಟ್‌ ರಸ್ತೆಗೆ ಸಮನಾಗಿ ಅಳವಡಿಸಲಾಗಿದ್ದ ಇಂಟರ್‌ಲಾಕ್‌ಗಳು ಕುಸಿಯುತ್ತಿದ್ದು, ಕಾಂಕ್ರೀಟ್‌ನ ಅಂಚಿಗೆ ಹೋದ ದ್ವಿಚಕ್ರ ವಾಹನಗಳು ಆಯತಪ್ಪಿ ಬೀಳುತ್ತಿದೆ. ಇಂಟರ್‌ಲಾಕ್‌ ಅಳವಡಿಸಿದ ಬಹುತೇಕ ಕಡೆ ಈ ರೀತಿಯ ಸಮಸ್ಯೆ ಎದುರಾಗುತ್ತಿದೆ. 

ತುಂಬಾ ಸಮಸ್ಯೆಯಾಗುತ್ತಿದೆ
ರಸ್ತೆಗಳು ಸಮತಟ್ಟಾಗಿ ಇಲ್ಲದಿರುವುದು ದ್ವಿಚಕ್ರ ವಾಹನದಲ್ಲಿ ತೆರಳುವಾಗ ಅನುಭವಕ್ಕೆ ಬರುತ್ತದೆ. ವಾಹನ ವೇಗವಾಗಿದ್ದರೆ ವಾಹನದ ಚಕ್ರದಲ್ಲಾಗುವ ಏರುಪೇರು ಅಪಘಾತಗಳನ್ನುಂಟು ಮಾಡುತ್ತದೆ. ನಗರದಲ್ಲಿ ಬಹುತೇಕ ದ್ವಿಚಕ್ರ ವಾಹನ ಸವಾರರಿಗೆ ಅನುಭವಕ್ಕೆ ಬಂದಿರುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಇರುವುದು ಮಳೆಗಾಲದಲ್ಲಿ ಸಮಸ್ಯೆಯನ್ನು ಹೆಚ್ಚಿಸಲಿದೆ.
– ಹರಿಪ್ರಸಾದ್‌,ದ್ವಿಚಕ್ರ ವಾಹನ ಸವಾರ

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next