Advertisement

ಬಿಜೆಪಿ ನಾಯಕರ ಜತೆ “ಉಪಾಹಾರ ರಾಜಕೀಯ’

11:51 PM Jul 03, 2019 | Lakshmi GovindaRaj |

ಬೆಂಗಳೂರು: ಕೋಲ್ಕತ್ತಾ ಪ್ರವಾಸದಲ್ಲಿದ್ದ ಜೆಡಿಎಸ್‌ ಹಿರಿಯ ಶಾಸಕ ಎಚ್‌.ವಿಶ್ವನಾಥ್‌ ಅವರು ದಿಢೀರ್‌ ಆಗಿ ದೆಹಲಿಯಲ್ಲಿ ಪ್ರತ್ಯಕ್ಷರಾಗಿರುವುದು ಪಕ್ಷದ ವಲಯದಲ್ಲಿ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.

Advertisement

ಕೋಲ್ಕತ್ತಾಗೆ ಹೋಗಿದ್ದ ಅವರು ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ ದೆಹಲಿಗೆ ತೆರಳಿ ಕರ್ನಾಟಕ ಭವನದಲ್ಲಿ ಬಿಜೆಪಿ ಸಂಸದರಾದ ವಿ.ಶ್ರೀನಿವಾಸಪ್ರಸಾದ್‌, ಜಿ.ಎಸ್‌.ಬಸವರಾಜು, ಬಿ.ವೈ.ರಾಘವೇಂದ್ರ ಜತೆ ಉಪಾಹಾರ ಸೇವಿಸುತ್ತಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ, “ಹಳ್ಳಿಹಕ್ಕಿ ದೆಹಲಿ ಭೇಟಿ ಯಾಕೆ’ ಎಂಬ ಚರ್ಚೆಗಳು ನಡೆಯುತ್ತಿವೆ.

ತಮ್ಮ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಕೆಲವು ಹಿರಿಯ ನಾಯಕರ ಸಲಹೆ ಪಡೆಯಲು ವಿಶ್ವನಾಥ್‌ ದೆಹಲಿಗೆ ಹೋಗಿದ್ದರು. ವಿಶ್ವನಾಥ್‌ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳೂ ಹಬ್ಬಿದ್ದವು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ವಿಶ್ವನಾಥ್‌, ದೆಹಲಿಗೆ ಬೇರೆ ಕೆಲಸಕ್ಕೆ ಬಂದಿದ್ದೆ. ಹಳೆಯ ಸ್ನೇಹಿತರಾದ ವಿ.ಶ್ರೀನಿವಾಸ ಪ್ರಸಾದ್‌ ಸೇರಿ ಬಿಜೆಪಿ ಸಂಸದರ ಜತೆ ಉಪಾಹಾರ ಸೇವಿಸಿದೆ.

ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದ್ದಾರೆ. ರಾಜಕೀಯ ವಿಚಾರ ಚರ್ಚೆಯಾಯಿತೇ ಎಂದಾಗ, ರಾಜಕೀಯ ವಿಚಾರ ಮಾತನಾಡಬಾರದೇ ಎಂದು ಮರು ಪ್ರಶ್ನೆ ಹಾಕಿದರು. ಬಿಜೆಪಿ ಸಂಸದರ ಭೇಟಿ ನಂತರ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಜತೆಯೂ ವಿಶ್ವನಾಥ್‌ ಮಾತುಕತೆ ನಡೆಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಅನುಭವ ಬಳಸಿಕೊಂಡಿಲ್ಲ. ಮಂತ್ರಿ ಸ್ಥಾನ ನೀಡಿಲ್ಲ, ರಾಜ್ಯಾಧ್ಯಕ್ಷರಾಗಿದ್ದಾಗ ಅಧಿಕಾರ ಕೊಟ್ಟಿರಲಿಲ್ಲ ಎಂದು ಬೇಸರಗೊಂಡಿದ್ದ ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Advertisement

ಸಿದ್ದರಾಮಯ್ಯಗೆ ಆಸಕ್ತಿಯಿಲ್ಲ ಎಂದ “ಹಳ್ಳಿಹಕ್ಕಿ’: ಇದೇ ವೇಳೆ ಸುದ್ದಿಗಾರರ ಜತೆ ಮಾತನಾಡಿದ ವಿಶ್ವನಾಥ್‌, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಸಮ್ಮಿಶ್ರ ಸರ್ಕಾರ ಮುಂದುವರಿಸುವ ಆಸಕ್ತಿಯಿಲ್ಲ ಎಂದರು. ಸಿದ್ದರಾಮಯ್ಯ ಅವರು ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸಿಲ್ಲ. ಸಿದ್ದರಾಮಯ್ಯ ಅವರಿಗೆ ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ಮುಂದುವರಿಯುವುದಕ್ಕಿಂತ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತುಕೊಳ್ಳುವ ಆಸಕ್ತಿಯಿದೆ ಎಂದು ಆರೋಪಿಸಿದರು.

ರಾಜ್ಯ ರಾಜಕಾರಣ ಅಧೋಗತಿಯತ್ತ ಹೋಗುತ್ತಿದೆ. ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ. ಸಮನ್ವಯತೆ ಬೆತ್ತಲಾಗಿದೆ. ಸಮ್ಮಿಶ್ರ ಸರ್ಕಾರದ ಪ್ರಯೋಗ ವಿಫ‌ಲವಾಗಿದೆ ಎಂದು ಬೇಸರ ಹೊರ ಹಾಕಿದರು. ಈ ಮಧ್ಯೆ, ವಿಶ್ವನಾಥ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ದೇವೇಗೌಡ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ವಿಶ್ವನಾಥ್‌ ಯಾವುದೇ ಕಾರಣಕ್ಕೂ ನಮ್ಮ ಪಕ್ಷ ಬಿಟ್ಟು ಹೋಗಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next