Advertisement

ಪೌರಕಾರ್ಮಿಕರಿಗೆ ಉಪಾಹಾರ ಪ್ರಸ್ತಾಪ ತಿರಸ್ಕಾರ

03:52 PM Jun 09, 2017 | |

ಹುಬ್ಬಳ್ಳಿ: ಪಾಲಿಕೆಯ ಕಾಯಂ ಹಾಗೂ ಗುತ್ತಿಗೆ ಆಧಾರಿತ  ಪೌರ ಕಾರ್ಮಿಕರಿಗೆ ನಿತ್ಯ ಉಪಹಾರ ನೀಡಬೇಕೆಂಬ ಪ್ರಸ್ತಾವನೆ ತಿರಸ್ಕರಿಸಿದ ಪಾಲಿಕೆ ಸಾಮಾನ್ಯ ಸಭೆ, ಪೌರಕಾರ್ಮಿಕರಿಗೆ ಪ್ರಸ್ತುತದ ನಗದು ರೂಪದ ಸೌಲಭ್ಯ ಮುಂದುವರಿಸಬೇಕು. 20ರೂ. ಬದಲು ನಿತ್ಯ 25 ರೂ. ಗಳನ್ನು ನೇರವಾಗಿ ಪೌರ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು ಎಂದು ನಿರ್ಣಯಿಸಿತು. 

Advertisement

ಪಾಲಿಕೆ ಪರಿಸರ ವಿಭಾಗದ ಅಧಿಕಾರಿ ಗಿರೀಶ ಪೌರಾಡಳಿತ ನಿರ್ದೇಶನ ಮೇರೆಗೆ ಪಾಲಿಕೆಯಲ್ಲಿನ 640 ಕಾಯಂ ಪೌರ ಕಾರ್ಮಿಕರು ಹಾಗೂ 1,888 ಹೊರಗುತ್ತಿಗೆ ಪೌರ ಕಾರ್ಮಿಕರು ಸೇರಿ ಒಟ್ಟು 2528 ಪೌರ ಕಾರ್ಮಿಕರಿಗೆ ನಿತ್ಯವೂ ಉಪಹಾರ ನೀಡಬೇಕು. ಇದಕ್ಕಾಗಿ ವಾರ್ಷಿಕ 1.84ಕೋಟಿ ರೂ.ಅಂದಾಜು ವೆಚ್ಚ ತಗುಲಲಿದೆ ಎಂದರು. 

ಸದಸ್ಯರಾದ ಡಾ| ಪಾಂಡುರಂಗ ಪಾಟೀಲ, ವೀರಣ್ಣ ಸವಡಿ ಮಾತನಾಡಿ, ಇದು ವಾಸ್ತವಿಕವಾಗಿ ಸಾಧ್ಯವಾಗದು. ಉಪಾಹಾರ ಗುಣಮಟ್ಟ, ಸಕಾಲಕ್ಕೆ ಪೌರ ಕಾರ್ಮಿಕರು ಇದ್ದಲ್ಲಿ ಅದನ್ನು ತಲುಪಿಸುವುದು ಸಾಧ್ಯವಾಗದ ಮಾತು. ಕಳಪೆ ಉಪಹಾರ ನೀಡಿದರೆ ಮತ್ತೂಂದು ವಿವಾದಕ್ಕೆ ದಾರಿ ಮಾಡಿಕೊಡಲಿದೆ.

ಅದರ ಬದಲು ಪೌರ ಕಾರ್ಮಿಕರಿಗೆ  ಪ್ರಸ್ತುತ ನೀಡುತ್ತಿರುವ 20 ರೂ. ಉಪಹಾರ ಭತ್ಯೆಯನ್ನು ಮುಂದುವರಿಸಿ ಅದನ್ನು 25 ರೂ.ಗೆ ಹೆಚ್ಚಿಸಿ ಎಂದರು. ಸದಸ್ಯರಾದ ಸುಭಾಸ ಶಿಂಧೆ, ಗಣೇಶ ಟಗರಗುಂಟಿ, ಅಲ್ತಾಫ್ ಕಿತ್ತೂರು ಇನ್ನಿತರರು ಇದನ್ನು ಬೆಂಬಲಿಸಿದರು. ಗುತ್ತಿಗೆ ಕಾರ್ಮಿಕರಿಗೆ ಗುತ್ತಿಗೆದಾರರ ಮೂಲಕ ಉಪಾಹಾರ ಭತ್ಯೆ ನೀಡದೆ ನೇರವಾಗಿ ಅವರ ಖಾತೆಗೆ ನೀಡಿ ಎಂದರು. 

ಕಾಂಗ್ರೆಸ್‌ ಸದಸ್ಯ ಪ್ರಕಾಶ ಕ್ಯಾರಕಟ್ಟಿ ಮಾತ್ರ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ತುಮಕೂರು ಇನ್ನಿತರ ಕಡೆಗಳಲ್ಲಿ ಪೌರ ಕಾರ್ಮಿಕರಿಗೆ ಉಪಾಹಾರ ನೀಡಲಾಗುತ್ತದೆ. ಇಲ್ಲಿಯೂ ಪೌರ ಕಾರ್ಮಿಕರಿಗೆ ನೀಡಬೇಕು. ಆಯಾ ವಾರ್ಡ್‌ಗೆ ತಲುಪಿಸುವುದು ಕಷ್ಟದ ಕೆಲಸವೇನಲ್ಲ ಎಂದರಲ್ಲದೆ, ಗುತ್ತಿಗೆ ಕಾರ್ಮಿಕರಿಗೆ ನೇರವಾಗಿ ಉಪಾಹಾರ ಭತ್ಯೆ ನೀಡಲು ಅವಕಾಶ ಇಲ್ಲ ಅದನ್ನು ಗುತ್ತಿಗೆದಾರರ ಮೂಲಕವೇ ನೀಡಬೇಕು ಎಂದರು. 

Advertisement

ಇದಕ್ಕೆ ಡಾ| ಪಾಂಡುರಂಗ ಪಾಟೀಲ ಸೇರಿದಂತೆ ಅನೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಇದು ವೇತನವಲ್ಲ ಪಾಲಿಕೆಯಿಂದ ಸಿಗುವ ಉಪಾಹಾರ ಭತ್ಯೆ ಆಗಿರುವುದರಿಂದ ನೇರವಾಗಿ ಗುತ್ತಿಗೆ ಕಾರ್ಮಿಕರಿಗೆ  ನೀಡಲು ಅವಕಾಶವಿದೆ ಎಂದರು. ಪೌರ ಕಾರ್ಮಿಕರಿಗೆ ಉಪಹಾರ ನೀಡುವ ಬದಲು ನಿತ್ಯ 25 ರೂ.ನಂತೆ ಪೌರ ಕಾರ್ಮಿಕರಿಗೆ ಮಾಸಿಕವಾಗಿ ಹಣ ನೀಡಬೇಕು ಎಂದು ಆದೇಶಿಸಿದರು.

ಪೀಠದೆದರು ಧರಣಿ: ವಲಯ ಕಚೇರಿಗಳ ಸುಮಾರು 6 ಸಹಾಯಕ ಆಯುಕ್ತರನ್ನು ವರ್ಗಾಯಿಸಿದ್ದನ್ನು ಖಂಡಿಸಿ ಪಕ್ಷಾತೀತವಾಗಿ ಸದಸ್ಯರು ಮಹಾಪೌರರ ಪೀಠದೆದರು ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸದಸ್ಯರು ಪೀಠದೆದರು ಕೆಲ ನಿಮಿಷ ಧರಣಿ ಕೈಗೊಂಡರು. 

ಸಭೆ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್‌ ಸದಸ್ಯ ಗಣೇಶ ಟಗರಗುಂಟಿ ವಿಷಯ ಪ್ರಸ್ತಾಪಿಸಿ, ಮಳೆಗಾಲ ಆರಂಭವಾಗುತ್ತಿದ್ದು, ಇಂತಹ ಸಮಯದಲ್ಲಿ ಅಧಿಕಾರಿಗಳನ್ನು ವರ್ಗಾಯಿಸಿ ಅನುಭವ ಇಲ್ಲದ ಹೊಸಬರನ್ನು ಆ ಸ್ಥಾನಕ್ಕೆ ನೇಮಕ ಮಾಡಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷಭೇದ ಮರೆತು ಅನೇಕ ಸದಸ್ಯರು ಇದನ್ನು ಬೆಂಬಲಿಸಿದರು. ಸದಸ್ಯರು ಮಹಾಪೌರರ ಪೀಠದೆದುರು ತೆರಳಿ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. 

ಮಹಾಪೌರ ಡಿ.ಕೆ.ಚವ್ಹಾಣ ಮಳೆಗಾಲ ಮುಗಿಯುವರೆಗೆ ಇದ್ದ ಅಧಿಕಾರಿಗಳನ್ನೇ ಮುಂದುವರಿಸಿ, ಹೊಸ ಅಧಿಕಾರಿಗಳನ್ನು ಅವರ ಜತೆಯಲ್ಲೇ ಕಾರ್ಯ ನಿರ್ವಹಿಸಲು ಬಿಡಬೇಕು ಎಂದು ಹೇಳಿದರಾದರೂ ಇದಕ್ಕೆ ಅನೇಕ ಸದಸ್ಯರು ಆಕ್ಷೇಪ ತೋರಿದರು. ಕೊನೆಗೆ ಪಾಲಿಕೆ ಎಲ್ಲ ಪಕ್ಷಗಳ ನಾಯಕರ ಸಭೆ ನಡೆಸಿ ತೀರ್ಮಾನ ಕೈಗೊಳ್ಳೋಣ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.  

Advertisement

Udayavani is now on Telegram. Click here to join our channel and stay updated with the latest news.

Next