Advertisement

ಬೆಳಗ್ಗಿನ ಉಪಾಹಾರ ಯೋಜನೆ: ಬೊಂಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಚಾಲನೆ

04:16 PM Nov 09, 2017 | Team Udayavani |

ಬಂಟ್ವಾಳ: ಶಾಲೆಯಲ್ಲಿ ಬೆಳಗ್ಗಿನ ಉಪಾಹಾರ ನೀಡುವ ಪ್ರಥಮ ಯೋಜನೆಯೊಂದು ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ನ.7ರಂದು ಜಾರಿಗೆ ಬಂದಿದ್ದು, ತಾಲೂಕಿನಲ್ಲಿ ಯಶಸ್ವಿಯಾಗಿ 5ನೆಯ ಶಾಲೆಯಲ್ಲಿ ಅನುಷ್ಠಾನಗೊಂಡಿದ್ದು ಇನ್ನೂ ನಾಲ್ಕು ಶಾಲೆಗಳಿಗೆ ಇದೇ ತಿಂಗಳಲ್ಲಿ ಅನುಷ್ಠಾನಕ್ಕೆ ಬರುವ ಒಟ್ಟು 9 ಶಾಲೆಗಳ 2,016 ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಸಿಗಲಿದೆ.

Advertisement

ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ ಆಶ್ರಯದ ಈ ಯೋಜನೆಗೆ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ನಿವೃತ್ತ ಪ್ರಾಂಶುಪಾಲ  ಸೋಮಶೇಖರ ಪ್ರಭು ಅವರು ಚಾಲನೆ ನೀಡಿದರು.

ದ.ಕ. ಜಿಲ್ಲೆ ಬಂಟ್ವಾಳ ತಾಲೂಕಿನ 9 ಶಾಲೆಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, 280 ಮಕ್ಕಳಿಗೆ ಸಜ್ಜಿಗೆ ಅವಲಕ್ಕಿಯನ್ನು ಟ್ರಸ್ಟ್‌ನಿಂದ ಮತ್ತು ಶಾಲೆಯ ವತಿಯಿಂದ ಹಾಲನ್ನು ಒದಗಿಸಲಾಯಿತು.

ಉದ್ಘಾಟನ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅಧ್ಯಕ್ಷತೆ
ವಹಿಸಿದ್ದರು. ತಾ. ಪಂ. ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಗ್ರಾ.ಪಂ. ಸದಸ್ಯರಾದ ಗೀತಾ, ವಿಶಾಲಾಕ್ಷಿ, ಜಯರಾಜ್‌, ಶಿಕ್ಷಣ ಸಂಯೋಜಕಿ ಪುಷ್ಪಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉದ್ಯಮಿ ಪದ್ಮನಾಭ ಮಯ್ಯ, ಪತ್ರಕರ್ತರಾದ ಹರೀಶ ಮಾಂಬಾಡಿ, ಮೌನೇಶ ವಿಶ್ವಕರ್ಮ, ಗಿರೀಶ್‌ ಪೂಜಾರಿ ಬಸ್ರ, ಶಿಕ್ಷಕರು, ವಿದ್ಯಾರ್ಥಿ  ನಾಯಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕಮಲಾಕ್ಷ ಸ್ವಾಗತಿಸಿದರು. ಶಿಕ್ಷಕರಾದ ಹರಿಪ್ರಸಾದ್‌ ವಂದಿಸಿದರು. ಸದಾಶಿವ ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

ಯೋಜನೆ ಸಂಪೂರ್ಣ ಯಶಸ್ವಿ
ಕನ್ನಡ ಶಾಲೆಗೆ ಸಮಯಕ್ಕೆ ಸರಿಯಾಗಿ ನೂರಕ್ಕೆ ನೂರು ವಿದ್ಯಾರ್ಥಿಗಳು ಹಾಜರಾಗುವ ಮೂಲಕ ಯೋಜನೆ ಯಶಸ್ವಿಯಾಗಿದೆ. ವಿಟ್ಲ ಹಿ.ಪ್ರಾ. ಶಾಲೆಯಲ್ಲಿ ಈ ಯೋಜನೆ ಅ. 12ರಂದು, ಅದೇ ದಿನ ಚಂದಳಿಕೆ ಶಾಲೆಯಲ್ಲಿ ಬಿಸ್ಕೆಟ್‌ ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ನ. 2ರಂದು ಕನ್ಯಾನ ಶಾಲೆಯಲ್ಲಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದ್ದರು. ಅದೇ ದಿನ ಕೋಡಪದವು, ಕೊಳಕೆ ಶಾಲೆಗಳಲ್ಲಿ ಬೆಳಗ್ಗೆ ಮಕ್ಕಳಿಗೆ ಬಿಸ್ಕೆಟ್‌, ಹಾಲು ಒದಗಿಸುವ ಕಾರ್ಯ ಆರಂಭಗೊಂಡಿತ್ತು.
ಶಿವಪ್ರಕಾಶ್‌ ಎನ್‌.,
  ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ 

 ಉತ್ತಮ ಆರೋಗ್ಯ ಕಾಪಾಡುವುದು ಟ್ರಸ್ಟ್‌ ಆಶ್ರಯ
ಬೆಳಗ್ಗಿನ ಉಪಾಹಾರ ನೀಡುವುದರ ಮೂಲಕ ಮಕ್ಕಳು ಕಲಿಕೆ ವಿಷಯಕ್ಕೆ ತಮ್ಮ ಗಮನವನ್ನು ಕೇಂದ್ರೀಕರಿಸುವಂತೆ ಮಾಡಿ,ಅವರನ್ನು ಈ ದೇಶದ ಉತ್ತಮ ಆರೋಗ್ಯವಂತ ಪ್ರಜೆಗಳಾಗಿ ರೂಪಿಸುವುದು ಟ್ರಸ್ಟ್‌ ಆಶಯವಾಗಿದೆ.
–  ಸೋಮಶೇಖರ ಪ್ರಭು,
    ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ
    ನಿವೃತ್ತ ಪ್ರಾಂಶುಪಾಲ

Advertisement

Udayavani is now on Telegram. Click here to join our channel and stay updated with the latest news.

Next