ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ವನ್ಯಜೀವಿ ಅಭಯಾರಣ್ಯಗಳ ಸುತ್ತಲಿನ ಪ್ರದೇಶಗಳಲ್ಲಿ ಮೋಜುಕೂಟ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಅರಣ್ಯ ಇಲಾಖೆ ಬ್ರೇಕ್ ಹಾಕಿದ್ದು, ಇಂತಹ ಸ್ಥಳಗಳಲ್ಲಿ ಮೋಜುಕೂಟ ಮಾಡುವವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಿದೆ.
ಕೆಲವು ದಿನಗಳ ಹಿಂದೆ ರಂಗನತಿಟ್ಟು ಹಾಗೂ ಕೊಕ್ಕರೆ ಬೆಳ್ಳೂರು ಪಕ್ಷಿಧಾಮದ ಸುತ್ತಲಿನ ಪ್ರದೇಶದಲ್ಲಿ ಒಂದಿಷ್ಟು ಯುವಕರು ಪಾರ್ಟಿ ನಡೆಸಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರಿಂದ ಅರಣ್ಯ ಇಲಾಖೆಗೆ ದೂರು ಬಂದಿದೆ. ಗ್ರಾಮಸ್ಥರು ಅರಣ್ಯ ಇಲಾಖೆಗೆ ನೀಡಿರುವ ದೂರಿನ ಪ್ರಕಾರ ಕೆಲವು ಯುವಕರು ಪ್ರತಿ ವರ್ಷವೂ ಕಾವೇರಿ ಹಿನ್ನೀರು ಪ್ರದೇಶ ಹಾಗೂ ರಂಗನತಿಟ್ಟು ಸಮೀಪದಲ್ಲಿ ನ್ಯೂ ಇಯರ್ ಪಾರ್ಟಿಗಳನ್ನು ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವನ್ಯಜೀವಿ ಅಭಯಾರಣ್ಯಗಳ ಸುತ್ತಲಿನ ಪ್ರದೇಶಗಳಲ್ಲಿ ಹೊಸ ವರ್ಷಾಚರಣೆಯ ಪಾರ್ಟಿ ನಡೆಸುವುದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಇಲಾಖೆಯಿಂದ ಗಸ್ತು: ವನ್ಯಜೀವಿ ಅಭಯಾರಣ್ಯದ ಸಮೀಪದ ಪ್ರದೇಶಗಳಲ್ಲಿ ಯಾವುದೇ ಮೋಜುಕೂಟ ನಡೆಯದಂತೆ ನೋಡಿಕೊಳ್ಳುವ ಸಲುವಾಗಿ ಇಲಾಖೆ ಗಸ್ತು ಕಾರ್ಯ ನಡೆಸಲಿದೆ. ಇದರ ಜತೆಗೆ ಮೈಸೂರು ವಿಭಾಗ ವ್ಯಾಪ್ತಿಯ ಆರು ವನ್ಯಜೀವಿ ಅಭಯಾರಣ್ಯಗಳಲ್ಲಿ ಇಲಾಖೆಯಿಂದ ಡಿ.31ರಂದು ಮಧ್ಯಾಹ್ನದಿಂದ ಗಸ್ತು ಕಾರ್ಯ ತೀವ್ರಗೊಳ್ಳುತ್ತದೆ ಎಂದು ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಎಡುಕೊಂಡಲ ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ಸಂಭ್ರಮದ ಸಂದರ್ಭದಲ್ಲಿ ವನ್ಯಜೀವಿ ಅಭಯಾರಣ್ಯಗಳ ಸಮೀಪದಲ್ಲಿರುವ ಪಾರ್ವ್ ಹೌಸ್ ಮತ್ತು ಖಾಸಗಿ ಪ್ರದೇಶಗಳಲ್ಲಿ ಹೆಚ್ಚು ಸದ್ದು ಮಾಡುವ ಧ್ವನಿವರ್ಧಕ ಹಾಕುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಲ್ಲದೆ ಡಿಸೆಂಬರ್ ಹಾಗೂ ಜನವರಿಯಲ್ಲಿ ಪಕ್ಷಿಗಳು ಸಂತಾನೋತ್ಪತ್ತಿ ಮಾಡುವ ಕಾಲವಾಗಿದ್ದು, ಈ ಸಮಯದಲ್ಲಿ ಅನೇಕ ಹಕ್ಕಿಗಳು ಬೇರೆ ಕಡೆಗಳಿಂದ ಪಕ್ಷಿಧಾಮಗಳಿಗೆ ಸ್ಥಳಾಂತರಗೊಳ್ಳುತ್ತವೆ. ಹೀಗಾಗಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಧ್ವನಿವರ್ಧಕಗಳನ್ನು ಪಕ್ಷಿಧಾಮ, ಅಭಯಾರಣ್ಯಗಳ ಸಮೀಪ ಅಥವಾ ಖಾಸಗಿ ಸ್ಥಳಗಳಲ್ಲಿ ಹಾಕದಂತೆ ಮಾಲೀಕರಿಗೆ ಮನವಿ ಮಾಡಲಾಗುವುದು ಎಂದು ಎಡುಕೊಂಡಲ ತಿಳಿಸಿದರು.
ಇಲಾಖೆಯಿಂದ ಜಾಗೃತಿ: ಅರಣ್ಯ ಪ್ರದೇಶಗಳಲ್ಲಿ ಫೈಯರ್ ಕ್ಯಾಂಪ್ ಹಾಕುವವರು, ಮೋಜುಕೂಟ ನಡೆಸುವವರಲ್ಲಿ ಜಾಗೃತಿ ಮೂಡಿಸಲು ಇಲಾಖೆ ಸಜಾjಗಿದೆ. ಇದಕ್ಕಾಗಿ 90 ಸೆಕೆಂಡ್‌ಗಳ ವಿಡಿಯೋವನ್ನು ಇಲಾಖೆಯಿಂದ ತಯಾರಿಸುತ್ತಿದ್ದು, ಶೀಘ್ರವೇ ಇಲಾಖೆಯ ಅಧಿಕೃತ ಜಾಲತಾಣ ಸೇರಿ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಜತೆಗೆ ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಮಾಹಿತಿ ನೀಡುವ ಕರಪತ್ರಗಳನ್ನು ಪಕೃತಿ ಶಿಬಿರಗಳು, ಪಕ್ಷಿಗಣತಿ, ಇಲಾಖೆಯಿಂದ ನಡೆಸುವ ಸಾಹಸ ಕ್ರೀಡೆಗಳ ಸ್ಥಳಗಳು ಸೇರಿದಂತೆ ರಂಗನತಿಟ್ಟು ಪಕ್ಷಿ ಧಾಮದ ಪ್ರವೇಶಕ್ಕೆ ನೀಡಲಾಗುವ ಟಿಕೆಟ್‌ಗಳಲ್ಲಿ ಮುದ್ರಿಸಲಾಗುತ್ತಿದೆ.
ಮೈಸೂರು ವಿಭಾಗದ ವನ್ಯಜೀವಿ ಅಭಯಾರಣ್ಯ ಹಾಗೂ ವ್ಯಾಪ್ತಿ
* ರಂಗನತಿಟ್ಟು ಪಕ್ಷಿಧಾಮ – 67 ಹೆಕ್ಟೇರ್
* ಕೊಕ್ಕರೆ ಬೆಳ್ಳೂರು – 292.32 ಹೆಕ್ಟೇರ್
* ಅರಬ್ಬಿತಿಟ್ಟು – 1,350 ಹೆಕ್ಟೇರ್
* ಮೇಲುಕೋಟೆ – 7,000 ಹೆಕ್ಟೇರ್
* ಆದಿಚುಂಚನಗಿರಿ – 88.50 ಹೆಕ್ಟೇರ್
* ನಗುವನಹಳ್ಳಿ – 7 ಹೆಕ್ಟೇರ್
– ಸಿ. ದಿನೇಶ್