Advertisement

ಬ್ರಝಿಲ್‌ ಟೆನಿಸ್‌ ಕ್ವೀನ್‌ ಮರಿಯಾ ಬ್ಯುನೊ ನಿಧನ

11:18 AM Jun 10, 2018 | Team Udayavani |

ಸಾವೋ ಪೌಲೊ: ಮೂರು ವಿಂಬಲ್ಡನ್‌ ಪ್ರಶಸ್ತಿ, ನಾಲ್ಕು ಅಮೆರಿಕನ್‌ ಓಪನ್‌ ಚಾಂಪಿಯನ್‌ಶಿಪ್‌ ಜಯಿಸಿದ ಬ್ರಝಿಲ್‌ನ “ಟೆನಿಸ್‌ ಕ್ವೀನ್‌’ ಮರಿಯಾ ಬ್ಯುನೊ ಶುಕ್ರವಾರ ಸಾವೊ ಪೌಲೋದಲ್ಲಿ ನಿಧನರಾದರು. ಅವರಿಗೆ 78 ವರ್ಷವಾಗಿತ್ತು. “ಸಾವೊ ಪೌಲೊ ಸ್ವಾಲೊ’ ಎಂಬ ನೆಚ್ಚಿನ ಹೆಸರಿನಿಂದಲೂ ಅವರು ಕರೆಯಲ್ಪಡುತ್ತಿದ್ದರು. ಪೂರ್ತಿ ಹೆಸರು ಮರಿಯಾ ಎಸ್ತರ್‌ ಆ್ಯಂಡಿಯನ್‌ ಬ್ಯುನೊ.

Advertisement

ಕಳೆದೊಂದು ವರ್ಷದಿಂದ ಬಾಯಿಯ ಕ್ಯಾನ್ಸರ್‌ನಿಂದ ನರಳುತ್ತಿದ್ದ ಮರಿಯಾ ಬ್ಯುನೊ ಅವರನ್ನು ಮೇ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

1968ರಲ್ಲಿ ಆಸ್ಟ್ರೇಲಿಯನ್‌ ಲೆಜೆಂಡ್‌ ಮಾರ್ಗರೆಟ್‌ ಕೋರ್ಟ್‌ ಜತೆಗೂಡಿ ಯುಎಸ್‌ ಓಪನ್‌ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದು, ಬಿಲ್ಲಿ ಜೀನ್‌ ಕಿಂಗ್‌ ಜತೆಗೂಡಿ 1965ರ ವಿಂಬಲ್ಡನ್‌ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದು ಮರಿಯಾ ಬ್ಯುನೊ ಅವರ ಸ್ಮರಣೀಯ ಸಾಧನೆಗಳಾಗಿವೆ.

4 ಸಲ ವಿಶ್ವದ ನಂ.1 ಗೌರವ
4 ಸಲ ವಿಶ್ವದ ನಂಬರ್‌ ವನ್‌ ಆಟಗಾರ್ತಿಯಾಗಿ ಮೂಡಿಬಂದ ಬ್ಯುನೊ, ಒಟ್ಟು 19 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡತಿಯೂ ಹೌದು. ವಿಂಬಲ್ಡನ್‌ ಸಿಂಗಲ್ಸ್‌ 3 ಸಲ (1959, 1960, 1964), ಇಂದು ಯುಎಸ್‌ ಓಪನ್‌ ಎಂದು ಕರೆಯಲ್ಪಡುವ ಯುಎಸ್‌ ನ್ಯಾಶನಲ್‌ ಚಾಂಪಿಯನ್‌ಶಿಪ್‌ 4 ಸಲ (1959, 1963, 1964, 1966) ಜಯಿಸಿದ್ದಾರೆ. 1964ರಲ್ಲಿ ಫ್ರೆಂಚ್‌ ಓಪನ್‌ ಫೈನಲ್‌, 1965ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ಕೂಡ ಪ್ರವೇಶಿಸಿದ್ದರು. 

“ನನ್ನ ಕಾಲದಲ್ಲಿ ಟೆನಿಸ್‌ ಅಷ್ಟೊಂದು ಲೋಕ ಪ್ರಿಯವಾಗಿರಲಿಲ್ಲ. ಒಂದು ಕೂಟಕ್ಕೆ ನಾನು ಕೇವಲ ಎರಡೇ ರ್ಯಾಕೆಟ್‌ ಕೊಂಡೊಯ್ಯುತ್ತಿದ್ದೆ. ವಿಂಬಲ್ಡನ್‌ ಗೆದ್ದವರಿಗೆ 15 ಪೌಂಡ್‌ಗಳ ವೋಚರ್‌ ಲಭಿಸುತ್ತಿತ್ತು’ ಎಂದು ಬ್ಯುನೊ 2015ರ ಸಂದರ್ಶನವೊಂದರಲ್ಲಿ ಹೇಳಿದ್ದರು.

Advertisement

“ಆದರೆ ಟೆನಿಸ್‌ನಿಂದ ಗಳಿಸಿದ ಪ್ರೀತಿ, ಒಡ ನಾಟವೆಲ್ಲ ಅಪಾರ. ಇದನ್ನು ದುಡ್ಡು ಕೊಟ್ಟರೂ ಖರೀದಿಸುವಂತಿರಲಿಲ್ಲ. ಟೆನಿಸ್‌ನಿಂದಾಗಿಯೇ ನನಗೆ ರಾಜಕುಮಾರಿ ಡಯಾನಾ ಅವರನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು’ ಎಂದೂ ಅವರೊಮ್ಮೆ ಹೇಳಿದ್ದರು. 

ಕಳೆದ ವರ್ಷದ ತನಕ ಟೆನಿಸ್‌ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದುದ್ದು ಮರಿಯಾ ಬ್ಯುನೊ ಅವರ ಟೆನಿಸ್‌ ಪ್ರೀತಿಗೆ ಸಾಕ್ಷಿ.

Advertisement

Udayavani is now on Telegram. Click here to join our channel and stay updated with the latest news.

Next