Advertisement

Brand Bengaluru; ತಲಾ 100 ಕೋ.ರೂ. ಅನುದಾನ ಕೊಡಿ: ಶಾಸಕರ ಬೇಡಿಕೆ

01:03 AM Jul 28, 2024 | Team Udayavani |

ಬೆಂಗಳೂರು: ಅನುದಾನಕ್ಕಾಗಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಶಾಸಕರು ಇತ್ತೀಚೆಗೆ ತಮ್ಮ ಶಾಸಕಾಂಗ ಸಭೆಯಲ್ಲಿ ಬೇಡಿಕೆ ಮಂಡಿಸಿದ ಬೆನ್ನಲ್ಲೇ ಈಗ ಬಿಜೆಪಿ ಶಾಸಕರೂ ಸರಕಾರಕ್ಕೆ ದುಂಬಾಲು ಬಿದ್ದಿದ್ದಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ತಲಾ 100 ಕೋಟಿ ರೂ. ಅನುದಾನ ನೀಡುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ. “ಬ್ರ್ಯಾಂಡ್‌ ಬೆಂಗಳೂರು’ ಅಭಿವೃದ್ಧಿ ಕುರಿತಾದ ಸಭೆಯಲ್ಲಿ ಈ ಕೂಗು ಕೇಳಿ ಬಂದಿದೆ.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬೆಂಗಳೂರಿನ ಎಲ್ಲ 28 ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದರು. ಅಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌ ಸಹಿತ ಹಲವು ಬಿಜೆಪಿ ಶಾಸಕರು ಅನುದಾನಕ್ಕಾಗಿ ಬೇಡಿಕೆ ಮಂಡಿಸಿದರು.

ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಅನುದಾನವನ್ನು ನೀಡಿದ್ದರು. ಅಷ್ಟೇ ಯಾಕೆ, ಸಿದ್ದರಾಮಯ್ಯ ಅವರ ಮೊದಲ ಆಡಳಿತಾವಧಿಯಲ್ಲೂ ಅನುದಾನ ಪೂರೈಸಲಾಗಿತ್ತು. ಈಗ ಹೊಸ ಸರಕಾರ ಬಂದು ಒಂದೂವರೆ ವರ್ಷ ಕಳೆದರೂ ಬೆಂಗಳೂರಿನ ಶಾಸಕರಿಗೆ ಅನುದಾನದ ನೀಡುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ 100 ಕೋಟಿ ರೂ. ಕೊಡಬೇಕು. ಅದರಿಂದ ಕ್ಷೇತ್ರಗಳಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಕೂಲ ಆಗಲಿದೆ ಎಂದು ಅಲವತ್ತುಕೊಂಡಿದ್ದಾರೆ.

ಬೇಡಿಕೆ ಇಟ್ಟವರಾರು?
ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಆದರೆ ಸರಕಾರದಿಂದ ಅನುದಾನ ಸಿಗುತ್ತಿಲ್ಲ. ಶಾಸಕರಿಗೆ ತಲಾ 100 ಕೋಟಿ ಎಂದು ಲೆಕ್ಕ ಹಾಕಿದರೂ 3ರಿಂದ 3.5 ಸಾವಿರ ಕೋಟಿ ರೂ. ಆಗುತ್ತದೆ. ಆದಷ್ಟು ಬೇಗ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಎಲ್ಲರ ಪರವಾಗಿ ಒತ್ತಾಯಿಸಿದರು.

ಪೂರಕವಾಗಿ ಶಾಸಕರಾದ ಮುನಿರಾಜು, ರವಿ ಸುಬ್ರಮಣ್ಯ, ಸತೀಶ್‌ರೆಡ್ಡಿ, ಮಂಜುಳಾ, ಡಾ| ಸಿ.ಎನ್‌. ಅಶ್ವತ್ಥ ನಾರಾಯಣ, ವಿಧಾನ ಪರಿಷತ್ತಿನ ಸದಸ್ಯ ಗೋಪಿನಾಥ್‌ ಪರೋಕ್ಷವಾಗಿ ಅನುದಾನಕ್ಕೆ ಬೇಡಿಕೆ ಇಟ್ಟರು. ಮಹದೇವಪುರ ಅತಿಹೆಚ್ಚು ತೆರಿಗೆ ಪಾವತಿಸುವ ಕ್ಷೇತ್ರವಾಗಿದೆ. ಆದರೆ ಅಲ್ಲಿ ಕುಡಿಯುವ ನೀರು ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನದ ಆವಶ್ಯಕತೆ ಇದೆ.

Advertisement

ಅದೇ ರೀತಿ, ಇ-ಮಾರುಕಟ್ಟೆಯಿಂದ ವಾಣಿಜ್ಯ ಮಳಿಗೆಗಳಿಗೆ ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ಅದಕ್ಕಾಗಿ ತೆರಿಗೆಯಲ್ಲಿ ತುಸು ರಿಯಾಯಿತಿ ಅಥವಾ ವಿನಾಯಿತಿ ನೀಡುವ ಮೂಲಕ ಉತ್ತೇಜನ ನೀಡಬೇಕು ಎನ್ನುವುದರ ಸಹಿತ ವಿವಿಧ ರೂಪದಲ್ಲಿ ಬೇಡಿಕೆ ಇಟ್ಟರು ಎಂದು ಮೂಲಗಳು ತಿಳಿಸಿವೆ.

“ಕೆಲವು ಶಾಸಕರು ಅನುದಾನದ ಬೇಡಿಕೆ ಇಟ್ಟಿದ್ದಾರೆ. ಅದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಲವು ಸಚಿವರೊಂದಿಗೆ ಚರ್ಚಿಸಿ, ಒದಗಿಸುವ ಪ್ರಯತ್ನ ಮಾಡುತ್ತೇನೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗುವುದು.” – ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next