Advertisement

ಬ್ರಹ್ಮಾವರ: ಪರಿಚಿತರಿಂದಲೇ ಮಹಿಳೆಯ ಕೊಲೆ?

08:20 AM Jul 14, 2021 | Team Udayavani |

ಕೋಟ/ಬ್ರಹ್ಮಾವರ: ಇಲ್ಲಿನ ಉಪ್ಪಿನಕೋಟೆಯ ಅಪಾರ್ಟ್‌ ಮೆಂಟ್‌ನಲ್ಲಿ ಸೋಮವಾರ ನಡೆದ ವಿಶಾಲಾ ಗಾಣಿಗ (35) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

Advertisement

ಗಂಗೊಳ್ಳಿ ಸಮೀಪ ಗುಜ್ಜಾಡಿ ನಾಯಕವಾಡಿಯ ನಿವಾಸಿ ವಾಸು ಗಾಣಿಗರ ಪುತ್ರಿ ವಿಶಾಲಾ ಗಾಣಿಗ ಅವರಿಗೆ ಬಿಜೂರು ನಿವಾಸಿ ದುಬಾೖನ ಉದ್ಯಮಿಯೋರ್ವರ ಆಪ್ತಸಹಾಯಕರಾಗಿದ್ದ ರಾಮಕೃಷ್ಣ ಗಾಣಿಗರೊಂದಿಗೆ 9 ವರ್ಷದ ಹಿಂದೆ ವಿವಾಹವಾಗಿತ್ತು. ದಂಪತಿಯು ಹಲವು ವರ್ಷದಿಂದ ಪುತ್ರಿಯೊಂದಿಗೆ ದುಬಾೖಯಲ್ಲಿ ವಾಸವಾಗಿದ್ದರು. 2019ರಲ್ಲಿ ಬ್ರಹ್ಮಾವರ ಸಮೀಪ ಕುಮ್ರಗೋಡುವಿನಲ್ಲಿ ಫ್ಲ್ಯಾಟ್‌ ಖರೀದಿಸಿದ್ದು, ಊರಿಗೆ ಬಂದಾಗೆಲ್ಲ ಇಬ್ಬರು ಅಲ್ಲೇ ವಾಸ್ತವ್ಯ ಮಾಡುತ್ತಿದ್ದರು. ಸೋಮವಾರ ಅದೇ ಫ್ಲ್ಯಾಟ್‌ನಲ್ಲಿ ಕೊಲೆಯಾಗಿದ್ದಾರೆ.

ಪರಿಚಿತರದ್ದೇ ಕೃತ್ಯ? ಮನೆಯೊಳಗೆ ಟೀ ಕುಡಿದ ಎರಡು ಕಪ್‌ ಗಳು  ಇತ್ತು ಎನ್ನಲಾಗಿದ್ದು, ಪರಿಚಿತರೇ ಕೃತ್ಯ ನಡೆಸಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ. ವಿಶಾಲಾ ಅವರು ಅಪರಿಚಿತರನ್ನು ಮನೆಯೊಳಗೆ ಸೇರಿಸುತ್ತಿರಲಿಲ್ಲ. ಗಂಡನ ಸ್ನೇಹಿತರು ಮನೆಗೆ ಬಂದರೂ ಗಂಡನಿಗೆ ವೀಡಿಯೋ ಕಾಲ್‌ ಮಾಡಿ ಖಚಿತಪಡಿಸಿಕೊಂಡ ಮೇಲೆಯೇ ಒಳಗೆ ಕರೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಚಿನ್ನಾಭರಣ ನಾಪತ್ತೆ ಅವರ ಕುತ್ತಿಗೆಗೆ ಮೊಬೈಲ್‌ ಚಾರ್ಜರ್‌ ಕೇಬಲ್‌ ಅನ್ನು ಮೊದಲಿಗೆ ಬಿಗಿದಿದ್ದು, ಅನಂತರ ಲ್ಯಾಪ್‌ಟಾಪ್‌ ಚಾರ್ಜರ್‌ ಕೇಬಲ್‌ ಬಿಗಿದು ಕೊಲೆಗೈಯಲಾಗಿದೆ. ಅವರುಧರಿಸಿದ್ದ ಎರಡು ಬಳೆಗಳು, ಕರಿಮಣಿ ಸರ ಮತ್ತು ಕಿವಿಯೋಲೆ ಸೇರಿದಂತೆ ಒಟ್ಟು 2 ಲಕ್ಷ ರೂ. ವೌಲ್ಯದ 50 ಗ್ರಾಂ. ತೂಕದ ಚಿನ್ನಾಭರಣ ಕಳವುಗೈಯಲಾಗಿದೆ.

ಹೀಗಾಗಿ ಚಿನ್ನಾಭರಣಗಳನ್ನು ದರೋಡೆ ಮಾಡುವ ಉದ್ದೇಶದಿಂದ ತನ್ನ ಮಗಳನ್ನು ಕೊಲೆಗೈದಿರಬಹುದು ಎಂದು ಮೃತರ ತಂದೆ ವಾಸು ಗಾಣಿಗ ಬಹ್ಮಾವರ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಸಾಕಷ್ಟು ಹಣ, ಒಡೆವೆಗಳಿದ್ದರೂ ಮೈ ಮೇಲಿನ ಬಂಗಾರವನ್ನು ಮಾತ್ರ ಅಪಹರಿಸಿರುವುದು  ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶವಿರಬಹುದು ಎನ್ನುವ ಶಂಕೆ ಮೂಡಿದೆ.

Advertisement

ಆಟೋ ಚಾಲಕನ ವಿಚಾರಣೆ ಘಟನೆಗೆ ಸಂಬಂಧಿಸಿ ಬಾಡಿಗೆಗೆ ಬಂದ ಆಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಆತ ತಾನು ಗುಜ್ಜಾಡಿಯಿಂದ ಅಪಾರ್ಟ್‌ಮೆಂಟ್‌ಗೆ ಬಿಟ್ಟು ವಾಪಸಾಗಿರುವುದಾಗಿ ತಿಳಿಸಿದ್ದಾನೆ. ಆದರೂ ಕೂಡ ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ವಿಶಾಲಾ ಅವರು ಹೆಚ್ಚಿನ ಸಂದರ್ಭದಲ್ಲಿ ಇದೇ ಆಟೋದಲ್ಲಿ ಸಂಚರಿಸುತ್ತಿದ್ದರು ಹಾಗೂ ಚಾಲಕನೂ ಪರಿಚಿತನಾಗಿದ್ದ ಎನ್ನಲಾಗಿದೆ. ಜತೆಗೆ ಅಪಾರ್ಟ್‌ಮೆಂಟ್‌ ವಾಚ್‌ಮನ್‌, ಸೂಪರ್‌ವೈಸರ್‌ ಹಾಗೂ ವಿಶಾಲಾ ಅವರ ಸಂಬಂಧಿಕರನ್ನು  ಕೂಡ ವಿಚಾರಣೆ ನಡೆಸಲಾಗುತ್ತಿದೆ.

ದ್ವೇಷ ಕಾರಣವಾಯಿತೇ?

ವಿಶಾಲಾ ಅವರ ಪತಿ ಆಸ್ತಿ ವ್ಯವಹಾರಗಳನ್ನು ನಡೆಸುತ್ತಿದ್ದರು. ಊರಿನಲ್ಲಿ ಹಾಗೂ ವಿವಿಧ ಜಿಲ್ಲೆಗಳಲ್ಲಿ ಸಾಕಷ್ಟು ಆಸ್ತಿ ಖರೀದಿಸಿದ್ದು, ಪತ್ನಿಯ ಜತೆಗೆ ಇದನ್ನು ವ್ಯವಹರಿಸುತ್ತಿದ್ದರು. ಜಾಗದ ವ್ಯವಹಾರಕ್ಕೆ ಸಂಬಂಧಿಸಿ ಒಂದಷ್ಟು ವಿವಾದಗಳು ಕೂಡ ಇತ್ತು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ದ್ವೇಷಕ್ಕಾಗಿ ಈ ಕೊಲೆ ನಡೆದಿರಬಹುದೇ ಎನ್ನುವ ಅನುಮಾನ ಕೂಡ ಇದೆ.

ತನಿಖೆಗೆ 4 ವಿಶೇಷ ತಂಡ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ವಿಷ್ಣುವರ್ಧನ್‌ ಅವರು ಸೋಮವಾರ ರಾತ್ರಿ ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆಗೆ 4 ವಿಶೇಷ ಪೊಲೀಸ್‌ ತಂಡವನ್ನು ರಚಿಸಲಾಗಿದೆ ಎಂದಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಕೊನೆಯ ಮೆಸೇಜ್‌

ಬ್ಯಾಂಕ್‌ಗೆ ಹೋಗಿ ಬರುವುದಾಗಿ ತಿಳಿಸಿದ ಮಗಳು ಮಧ್ಯಾಹ್ನ 12 ಗಂಟೆಯಾದರೂ ವಾಪಸಾಗದಿದ್ದರಿಂದ ಮಗಳ ಮೊಬೈಲ್‌ಗೆ ತಂದೆ ವಾಸು ಗಾಣಿಗ ಕರೆ ಮಾಡಿದ್ದರು. ಆಗ ಮೊಬೈಲ್‌ ನಾಟ್‌ ರೀಚೆಬಲ್‌ ಬಂದಿತ್ತು. ಪತಿ ರಾಮಕೃಷ್ಣ ಅವರಿಗೆ ಜು. 14ರಂದು ನಡೆಯಲಿರುವ ಮಗುವಿನ ಬರ್ತ್‌ ಡೇ ಆಚರಣೆಗೆ ಕೇಕ್‌ ಆರ್ಡರ್‌ ಮಾಡಿರುವುದಾಗಿ ಮೆಸೇಜ್‌ ಮಾಡಿದ್ದಾರೆ.

ಸಂಜೆ ವೇಳೆ ಪತ್ನಿ ಪೋನ್‌ಗೆ ಸಿಗದೆ ಗಾಬರಿಗೊಂಡ ಪತಿ ಮಾವನಿಗೆ ಫ್ಲ್ಯಾಟ್‌ಗೆ ಹೋಗಿ ಎಂದಿದ್ದರು. ಅದರಂತೆ ಅವರು ಬಂದಾಗ ರೂಮ್‌ಗೆ ಹೊರಗಡೆಯಿಂದ ಬೀಗ ಹಾಕಲಾಗಿತ್ತು. ತಂದೆಯವರ ಕೈಯಲ್ಲಿ ಮತ್ತೂಂದು ಕೀಲಿ ಕೈ ಇದ್ದು ಅದರಿಂದ ಬಾಗಿಲು ತೆರೆದಾಗ ಬೆಡ್‌ ರೂಮ್‌ನ ನೆಲದ ಮೇಲೆ ವಿಶಾಲಾ ಕೊಲೆಯಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ

ಸಿಸಿ ಟಿವಿ ಇಲ್ಲದೆ ಹಿನ್ನಡೆ

ಪೊಲೀಸರು ತನಿಖೆಯ ಸಲುವಾಗಿ ಸಿಸಿ ಟಿವಿ ಫೂಟೇಜ್‌ಗಳನ್ನು ಕಲೆ ಹಾಕಲು ಮುಂದಾಗಿದ್ದು, ಘಟನೆ ನಡೆದ ರೆಸಿಡೆನ್ಸಿಯಲ್ಲಿ ಸಿಸಿ ಟಿವಿ ಅಳವಡಿಸಿಲ್ಲ. ಬ್ರಹ್ಮಾವರ ಪೊಲೀಸರು ಈ ಹಿಂದೆಯೇ ಅಪಾರ್ಟ್‌ಮೆಂಟ್‌ಗೆ ಸಿಸಿ ಟಿವಿ ಅಳವಡಿಸುವಂತೆ ಸೂಚಿಸಿದ್ದರೂ ನಿರ್ಲಕ್ಷಿಸಲಾಗಿದ್ದು, ತನಿಖೆಗೆ ಹಿನ್ನಡೆಯಾಗಿದೆ. ಅಂಗಡಿ, ಕಟ್ಟಡಗಳಲ್ಲಿ ಇರುವ ಸಿಸಿ ಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ..

Advertisement

Udayavani is now on Telegram. Click here to join our channel and stay updated with the latest news.

Next