Advertisement

ಬಿಜೆಪಿಯಿಂದ ಯುವಕರ ಬ್ರೇನ್‌ ವಾಶ್‌

12:19 AM Oct 24, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ಸೂಕ್ತ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಯುವ ಕಾಂಗ್ರೆಸ್‌ ವತಿಯಿಂದ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರಾಜಭವನ ಮುತ್ತಿಗೆ ಹಾಕಲು ಪ್ರಯತ್ನಿಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

Advertisement

ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನಾ ಸಭೆ ನಡೆಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು, ನಂತರ ರಾಜಭವನ ಮುತ್ತಿಗೆ ರ್ಯಾಲಿ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಬಿಜೆಪಿಯವರು ಯುವಕರ ಬ್ರೇನ್‌ ವಾಶ್‌ ಮಾಡುತ್ತಿದ್ದಾರೆ. ದೇಶದಲ್ಲಿ 70 ವರ್ಷ ಕಾಂಗ್ರೆಸ್‌ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ.

ಜವಾಹರಲಾಲ್‌ ನೆಹರೂ ದೇಶವನ್ನು ಸರಿಯಾಗಿ ಆಳ್ವಿಕೆ ಮಾಡದಿದ್ದರೆ, ಈಗ ನೀವು ಅಧಿಕಾರದಲ್ಲಿ ಇರುತ್ತಿರಲಿಲ್ಲ. ಕಾಂಗ್ರೆಸ್‌ನವರ ತ್ಯಾಗ ಬಲಿದಾನದಿಂದಲೇ ಬಿಜೆಪಿ ಅಧಿಕಾರದಲ್ಲಿರುವುದು ಎಂದು ಹೇಳಿದರು. ಕಾಂಗ್ರೆಸ್‌ನವರು ಸಮಾಜದ ಎಲ್ಲ ಜನರ ಬಗ್ಗೆ ಮಾತನಾಡುತ್ತೇವೆ. ಆದರೆ, ಬಿಜೆಪಿಯವರು ಜಾತಿ ಮೇಲೆ ರಾಜಕಾರಣ ಮಾಡುತ್ತಾರೆ. ದೇಶದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿವೆ. ಆರ್ಥಿಕ ಪರಿಸ್ಥಿತಿ ಕುಸಿತಗೊಂಡಿದೆ.

ಕಾರ್ಖಾನೆಗಳು ಮುಚ್ಚಿ ಹೋಗುತ್ತಿವೆ. ಆರ್ಥಿಕ ಹಿಂಜರಿತ ಜನರ ಸಮಸ್ಯೆಯ ಬಗ್ಗೆ ಬಿಜೆಪಿಯವರು ಮಾತನಾಡುವುದಿಲ್ಲ. ಟಿಪ್ಪು, ಸಾವರ್ಕರ್‌, ಆರ್ಟಿಕಲ್‌ 370 ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಸತತ ನೆರೆಯಿಂದ ಲಕ್ಷಾಂತರ ಮನೆಗಳು ಬಿದ್ದಿವೆ. ಈಗ ಸುರಿಯುತ್ತಿರುವ ಮಳೆಯಿಂದ ಮತ್ತೆ ಮನೆಗಳು ನೆಲಸಮಗೊಂಡಿದ್ದು, 12 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಆದರೆ, ಸರ್ಕಾರ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದಕ್ಕೆ ಗಮನ ಹರಿಸದೇ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಹುಡುಕುವುದರಲ್ಲಿ ಸಕ್ರೀಯರಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಖಜಾನೆಯಲ್ಲಿ ಹಣ ಇಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೇಳಬೇಕಿತ್ತು. ಆದರೆ, ಅಂತಹ ಧೈರ್ಯವನ್ನು ಮೋದಿ ಮಾಡಲಿಲ್ಲ.

Advertisement

ಪ್ರಧಾನಿಗೆ ವಿದೇಶ ಪ್ರವಾಸ ಮಾಡಲು ಪಕ್ಕದ ತಮಿಳುನಾಡಿನ ಮಹಾಬಲಿಪುರಂನಲಿ ಕೂರಲು ಸಮಯ ಇದೆ. ಆದರೆ, ಕರ್ನಾಟಕದ ಬಡವರ ಸಮಸ್ಯೆ ಆಲಿಸಲು ಸಮಯವಿಲ್ಲ ಎಂದು ವಾಗ್ಧಾಳಿ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, ಉತ್ತರ ಕರ್ನಾಟಕದ ಜನರು ಪ್ರವಾಹದಲ್ಲಿ ಮುಳುಗಿದರೂ ಪ್ರಧಾನಿ ತಿರುಗಿ ನೋಡುತ್ತಿಲ್ಲ. ಚಂದ್ರಯಾನ ಕಾರ್ಯಕ್ರಮಕ್ಕೆ ಬರುತ್ತಾರೆ. ಜನರ ಕಷ್ಟ ಕೇಳಲು ಬರುತ್ತಿಲ್ಲ. ಪರಿಹಾರವನ್ನೂ ನೀಡುತ್ತಿಲ್ಲ ಎಂದು ಆರೋಪಿಸಿದರು.

ಮನಮೋಹನ್‌ ಸಿಂಗ್‌ರಿಂದ ತರಬೇತಿ ಪಡೆಯಿರಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಂದ ಟ್ಯೂಶನ್‌ ಹೇಳಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತೇನೆ ಎಂದು ಎಐಸಿಸಿ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ವ್ಯಂಗ್ಯವಾಡಿದ್ದಾರೆ.

ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷರಾಗಿ ರಾಜ್ಯಕ್ಕೆ ಮೊದಲ ಬಾರಿ ಭೇಟಿ ನೀಡಿ, ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದ ಅವರು, ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕದಿಂದ ಆಯ್ಕೆಯಾಗಿ ರಾಜ್ಯಕ್ಕೆ ಪ್ರವಾಹ ಪರಿಹಾರ ಕೊಡಿಸದೇ ಅನ್ಯಾಯ ಮಾಡಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಬಳಿ ಟ್ಯೂಶನ್‌ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತೇನೆ. ಅವರು ಕರ್ನಾಟಕಕ್ಕೆ ಬಂದರೆ, ವಾಪಸ್‌ ಜಾವೊ ಚಳವಳಿ ನಡೆಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next