ಭೋಪಾಲ್: ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ಮುರಳೀಧರ್ ರಾವ್ ಅವರು ನೀಡಿರುವ ಹೇಳಿಕೆಯೊಂದು ವಿವಾದಕ್ಕೆ ಗುರಿಯಾಗಿದ್ದು, ಕ್ಷಮೆ ಯಾಚನೆಗೆ ಕಾಂಗ್ರೆಸ್ ಪಕ್ಷ ಪಟ್ಟು ಹಿಡಿದಿದೆ.
ಮಧ್ಯಪ್ರದೇಶದ ಬಿಜೆಪಿ ಉಸ್ತುವಾರಿಯಾಗಿರುವ ರಾವ್ ಅವರು, ‘ಬ್ರಾಹ್ಮಣ ಮತ್ತು ಬನಿಯಾ ಸಮುದಾಯದ ಜನರು ತಮ್ಮ ಜೇಬಿನಲ್ಲಿ ಇದ್ದಾರೆ’ ಎಂಬ ಹೇಳಿಕೆ ನೀಡಿದ್ದಾರೆ, ಅವರು ತಕ್ಷಣ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ರಾವ್ ಅವರು ತನ್ನ ಕುರ್ತಾದ ಜೇಬಿನ ಕಡೆಗೆ ತೋರಿಸುತ್ತಾ, ‘ನನ್ನ ಜೇಬಿನಲ್ಲಿ ಬ್ರಾಹ್ಮಣರು ಮತ್ತು ಬನಿಯಾಗಳು ಇದ್ದಾರೆ, ಹೆಚ್ಚಿನ ಕಾರ್ಯಕರ್ತರು ಮತ್ತು ವೋಟ್ ಬ್ಯಾಂಕ್ ಈ ವರ್ಗದವರಾಗಿದ್ದಾಗ ನೀವು (ಮಾಧ್ಯಮದವರು) ನಮ್ಮನ್ನು ಬ್ರಾಹ್ಮಣ ಮತ್ತು ಬನಿಯಾಗಳ ಪಕ್ಷ ಎಂದು ಕರೆದಿದ್ದೀರಿ’ ಎಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರಶ್ನೆಯೊಂದಕ್ಕೆ ತಿರುಗೇಟು ನೀಡಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಾವ್ ಅವರು, ‘ನಮ್ಮ ಪಕ್ಷ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಸಿದ್ದಾಂತ ನಂಬಿದೆ. ಸತ್ಯಗಳು ಮತ್ತು ಹೇಳಿಕೆಗಳನ್ನು ವಿರೂಪಗೊಳಿಸುವುದು ಕಾಂಗ್ರೆಸ್ ನ ಸಂಸ್ಕ್ರತಿ’ ಎಂದರು.
ವಿರೋಧ ಪಕ್ಷವು ತನ್ನ ಹೇಳಿಕೆಯನ್ನು ತಿರುಚಿ ವಿವಾದ ಹುಟ್ಟು ಹಾಕುತ್ತಿದೆ ಎಂದು ರಾವ್ ಪ್ರತಿಪಾದಿಸಿದ್ದಾರೆ.